
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಅಧೀನ ಸಂಸ್ಥೆಗಳಲ್ಲಿ ಕನ್ನಡದ ಬಳಕೆ ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಎಲ್.ಹನುಮಂತಯ್ಯನವರು ಕನ್ನಡಪ್ರಭಾ.ಕಾಮ್‌ಗೆ ವಿಶೇಷ ಸಂದರ್ಶನ ನೀಡಿದ್ದು, ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಬೇಕಾದ ಕೆಲಸದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ...
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದಕ್ಕೆ ನಿಮ್ಮ ಪ್ರತಿಕ್ರಿಯೆ?
ತುಂಬಾ ಸಂತಸ ತಂದಿದೆ. ಕನ್ನಡ ಸೇವೆ ಮಾಡಲು ಇದೊಂದು ಉತ್ತಮ ಅವಕಾಶವಾಗಿದ್ದು, ಕನ್ನಡ ಭಾಷೆ ಸಮರ್ಪಕ ಜಾರಿಗೆ ಶ್ರಮಿಸುತ್ತೇನೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಸಿಕ್ಕಿದ್ದು ಹೇಗೆ?
ಹಲವು ವರ್ಷಗಳಿಂದ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ವಿಧಾನ ಪರಿಷತ್ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಆದರೆ ಕಾರಣಾಂತರಗಳಿಂದ ಟಿಕೆಟ್ ದೊರೆಯಲಿಲ್ಲ. ಈಗ ಪಕ್ಷ ನನ್ನನ್ನು ಗುರುತಿಸಿ, ಅಧ್ಯಕ್ಷ ಹುದ್ದೆ ನೀಡಿದೆ.
ಕನ್ನಡ ಭಾಷಾ ರಕ್ಷಣೆಗಾಗಿ ನಿಮ್ಮ ಯೋಜನೆಗಳು?
ಎಲ್ಲ ಇಲಾಖೆಗಳಲ್ಲಿ ಕನ್ನಡ ಆಡಳಿತ ಭಾಷೆಯನ್ನಾಗಿ ಮಾಡಲು ಪೂರಕ ಕ್ರಮಗಳನ್ನು ಕೈಗೊಂಡಿದ್ದೇವೆ. ಮೊದಲಿಗೆ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಕನ್ನಡ ಭಾಷಾ ಅನುಷ್ಠಾನ ಸಮಿತಿ ಮೂಲಕ ಎಲ್ಲ ಇಲಾಖೆ, ಕಚೇರಿ, ಜಿಲ್ಲಾಡಳಿತಗಳಲ್ಲಿ ಪರಿಶೀಲನೆ ಮಾಡುವುದು ನಮ್ಮ ಕನ್ನಡ ಪ್ರಾಧಿಕಾರದ ಪ್ರಥಮ ಯೋಜನೆಯಾಗಿದೆ.
ಸರ್ಕಾರದ ಹಲವು ವ್ಯವಹಾರ ಪತ್ರಗಳು ಇಂಗ್ಲೀಷ್‌ನಿಂದ ಕೂಡಿದೆಯಲ್ಲ?
ಹೌದು, ಇದು ನಮ್ಮ ಗಮನಕ್ಕೆ ಬಂದಿದೆ. ಕೇಂದ್ರ ಸರ್ಕಾರದ ವ್ಯವಹಾರ ಪತ್ರಗಳನ್ನು ಹೊರತು ಪಡಿಸಿ ಉಳಿದ ವ್ಯವಹಾರ ಪತ್ರಗಳನ್ನು ಕನ್ನಡದಲ್ಲಿ ಜಾರಿಗೆ ತರುವ ಯೋಜನೆ ಕೈಗೊಂಡಿದ್ದೇವೆ.
ಕನ್ನಡ ಸಾಹಿತಿಗಳ ಕ್ಷೇಮಾಭಿವೃದ್ಧಿಗೆ ಪ್ರಾಧಿಕಾರದ ಕ್ರಮಗಳೇನು?
ಕನ್ನಡ ಹಿರಿಯ ಸಾಹಿತಿಗಳ ಸಭೆ ಕರೆಯುವ ಚಿಂತನೆ ಹೊಂದಿದ್ದೇವೆ. ಸಭೆಯಲ್ಲಿ ಸಾಹಿತಿಗಳ ಸಮಸ್ಯೆಗಳು ಮತ್ತು ಸವಾಲುಗಳನ್ನು ಪಟ್ಟಿ ಮಾಡಿ ಅವುಗಳ ಇತ್ಯರ್ಥದ ಕುರಿತು ಸರ್ಕಾರದೊಂದಿಗೆ ಸಮಾಲೋಚನೆ ಮಾಡುತ್ತೇನೆ.
ಕನ್ನಡ ಸಂಪೂರ್ಣ ಗಣಕಭಾಷೆಯಾಗಿ ಮಾರ್ಪಡಿಸಲು ನಿಮ್ಮ ಕ್ರಮ?
ಕನ್ನಡವನ್ನು ಗಣಕ ಭಾಷೆಯನ್ನಾಗಿ ಅಭಿವೃದ್ಧಿಪಡಿಸಲು ಅನೇಕ ಸಮಸ್ಯೆಗಳಿವೆ. ಎಲ್ಲರು ಬಳಸುವಂತಹ ಏಕರೂಪ ಸಾಫ್ಟ್‌ವೇರ್ ಲಭ್ಯವಿಲ್ಲದಿರುವುದೇ ದೊಡ್ಡ ತೊಡಕಾಗಿದೆ. ಇದಕ್ಕಾಗಿ ವೆಬ್‌ಸೈಟ್ ರಚನಾಕಾರರ ಸಭೆ ಕರೆಸಿ, ನವೀನ ಏಕರೂಪ ಸಾಫ್ಟ್‌ವೇರ್ ರಚನೆಗೆ ಕ್ರಮ ಕೈಗೊಳ್ಳುತ್ತೇವೆ.
ರಾಜ್ಯ ಸರ್ಕಾರ ಇತ್ತಿಚೆಗೆ ಲೋಕರ್ಪಣೆ ಮಾಡಿರುವ 'ಕರ್ನಾಟಕ ಮೊಬೈಲ್ ಒನ್' ಆನ್‌ಲೈನ್ ಸೇವೆಯಲ್ಲಿ ಕನ್ನಡ ಪ್ರಧಾನ ಭಾಷೆಯಾಗಿ ನೀಡುವಲ್ಲಿ ನಿರ್ಲಕ್ಷೆ ತೋರಿದೆ ಎಂಬ ಆರೋಪ ಇದೆ?
ಇದು ನಮ್ಮ ಗಮನಕ್ಕೆ ಬಂದಿದೆ. ಈ ಅಂತರ್ಜಾಲದಲ್ಲಿ ಕನ್ನಡ ಪ್ರಧಾನ ಭಾಷೆಯನ್ನಾಗಿ ಮರು ರಚನೆ ಮಾಡಲು ಸರ್ಕಾರದ ಸಮಾಲೋಚನೆಯೊಂದಿಗೆ, ವೆಬ್‌ಸೈಟ್ ರಚನಾಕಾರರ ಸಭೆ ಕರೆಸಿ, ಮರು ರಚನೆ ಮಾಡುವ ಕುರಿತು ಕ್ರಮ ಕೈಗೊಳ್ಳುತ್ತೇವೆ.
ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಪ್ರಧಾನ ಭಾಷೆಯನ್ನಾಗಿ ಇಂಗ್ಲೀಷ್‌ಗೆ ಆದ್ಯತೆ ನೀಡಲಾಗಿದೆ. ಇದು ಕನ್ನಡಿಗರಿಗೆ ಹೇಗೆ ಅನುಕೂಲವಾಗುತ್ತದೆ?
ಹೌದು, ಈ ಜಾಲತಾಣದಲ್ಲಿ ಇಂಗ್ಲೀಷ್‌ನ್ನು ಪ್ರಧಾನ ಭಾಷೆಯನ್ನಾಗಿ, ಕನ್ನಡ ಭಾಷೆಯನ್ನು ಆಯ್ಕೆ ಭಾಷೆಯನ್ನಾಗಿ ರಚಿಸಿರುವುದು ತಿಳಿದುಬಂದಿದೆ. ಇದಕ್ಕೆ ಕಾರಣ; ಎಲ್ಲ ಇಲಾಖೆಗಳು ತಮ್ಮ ಮಾಹಿತಿಗಳನ್ನು ಆಂಗ್ಲ ಭಾಷೆಯಲ್ಲೇ ಅಪ್‌ಡೇಟ್ ಮಾಡುತ್ತಿವೆ. ಆದ್ದರಿಂದ ವೆಬ್‌ಸೈಟ್ ರಚನಾಕಾರರು ಇಂಗ್ಲೀಷ್‌ನಲ್ಲಿ ಅಂತರ್ಜಾಲವನ್ನು ಅಪ್‌ಡೇಟ್ ಮಾಡುತ್ತಿದ್ದಾರೆ. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವೆಬ್‌ಸೈಟ್ ತಂತ್ರಜ್ಞರಿಗೆ ಪತ್ರ ಬರೆದಿದೆ. ಕನ್ನಡದಲ್ಲಿ ಮಾಹಿತಿ ನೀಡದಿದ್ದಲ್ಲಿ ಮಾಹಿತಿಗಳನ್ನು ಅಪ್‌ಲೋಡ್ ಮಾಡಬೇಡಿ ಎಂದಿದ್ದೇವೆ. ಕನ್ನಡ ಪ್ರಧಾನ ಭಾಷೆಗೆ ಸರ್ಕಾರದೊಂದಿಗೆ ಸಮಾಲೋಚನೆ ಮಾಡುತ್ತೇವೆ.
ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಇಲ್ಲ. ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ನುರಿತ ಮತ್ತು ಗುಣಮಟ್ಟದ ಶಿಕ್ಷಕರ ನೇಮಕ, ಉತ್ತಮ ಗ್ರಂಥಾಲಯ ಸೇರಿದಂತೆ ಮೂಲ ಭೂತ ಸೌಕರ್ಯಗಳ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೇ ಆದ್ಯತೆ ಮೇರೆಗೆ ಈ ಪ್ರದೇಶದಲ್ಲಿನ ಶಾಲೆಗೆಳಿಗೆ ವಿಶೇಷ ಅನುದಾನ ನೀಡಲು ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಲಿದೆ.
ಗಡಿ ಪ್ರದೇಶದ ಕನ್ನಡ ಶಾಲಾ ವಿದ್ಯಾರ್ಥಿಗಳು ಪುಸ್ತಕದ ಕೊರತೆ ಅನುಭವಿಸುತ್ತಿದ್ದಾರಲ್ಲ?
ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಗಡಿ ಭಾಗದ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ, ಪುಸ್ತಕ ಕೊರತೆ ನೀಗಿಸಲು ಕ್ರಮ ಕೈಗೊಂಡಿದ್ದೇವೆ.
ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟು ಸಮರ್ಥವಾಗಿವೆಯೇ?
ಹೌದು. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು, ನುರಿತ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಪೈಕಿ ಒಂದು ಸಾವಿರ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್‌ಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ದೃಶ್ಯಗಳ ವೀಕ್ಷಣೆ ಮೂಲಕ ಶೀಘ್ರ ಮತ್ತು ಗುಣಮಟ್ಟ ಶಿಕ್ಷಣದ ಲಾಭ ಪಡೆಯುತ್ತಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಇಂಗ್ಲೀಷ್ ಶೀರ್ಷಿಕೆಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ?
ಕನ್ನಡ ಭಾಷೆಯಲ್ಲಿ ಶೀರ್ಷಿಕೆ ಇಲ್ಲದ ಸಿನಿಮಾಗಳಿಗೆ ಸರ್ಕಾರ ಅನುದಾನ ನೀಡಬಾರದು ಎಂದು ಒತ್ತಾಯಿಸಲಿದ್ದೇವೆ. ಕನ್ನಡ ಶೀರ್ಷಿಕೆ ಹೊಂದಿರುವ, ಕನ್ನಡ ಸಂಸ್ಕೃತಿ, ಇತಿಹಾಸ, ಪರಂಪರನೆಯನ್ನು ಬಿಂಬಿಸುವ ಚಿತ್ರಗಳಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಚಿಂತನೆ ಕೈಗೊಂಡಿದ್ದೇವೆ. ಉದಾ: ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಚಿತ್ರದಲ್ಲಿ ಒನಕೆ ಓಬವ್ವರ ಇತಿಹಾಸವನ್ನು ದೃಷ್ಯದ ಮೂಲಕ ಹೊಸ ತಲೆಮಾರಿನ ಕಣ್ಣಿಗೆ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ. ಇಂತಹ ಇತಿಹಾಸ ಸ್ಮರಿಸುವ ಚಿತ್ರಗಳು ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು. ಅಂತಹ ಚಿತ್ರಗಳಿಗೆ ಸರ್ಕಾರ ಗುರುತಿಸುವ ಪ್ರಯತ್ನ ನಡೆಯಬೇಕು ಎಂಬುದು ನನ್ನ ಆಶಯ.
ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ಕನ್ನಡಕ್ಕಿಂತ ಅನ್ಯ ಭಾಷ ಪದಗಳ ಬಳಕೆಯೇ ಹೆಚ್ಚಾಗಿದೆಯಲ್ಲ?
ಕೆಲವೇ ಕೆಲವು ಸಾಹಿತಿಗಳನ್ನು ಹೊರತು ಪಡಿಸಿದರೆ, ಅನ್ಯ ಭಾಷ ಪದಗಳಿಂದ ಸಾಹಿತ್ಯ ರಚಿಸುವ ಮಂದಿಯೇ ಹೆಚ್ಚಾಗಿದ್ದಾರೆ. ಅಲ್ಲದೇ ಅಂತಹ ಹಾಡುಗಳಿಗೆ ಯುವ ಪೀಳಿಗೆ ಬೇಗನೆ ಮಾರುಹೋಗುತ್ತವೆ. ಇವುಗಳನ್ನು ಆದೇಶಗಳ ಮುಖಾಂತರ ನಿಯಂತ್ರಿಸಲು ಸಾಧ್ಯವಿಲ್ಲ. ಜನಾಭಿಪ್ರಾಯದಿಂದ ಮಾತ್ರ ಬದಲಾವಣೆ ಸಾಧ್ಯ
ಎಫ್‌ಎಂ ಚಾನೆಲ್‌ಗಳ ಕನ್ನಡ ಬಳಕೆಯ ಬಗ್ಗೆ?
ಕನ್ನಡ ಎಫ್‌ಎಂ ಚಾನೆಲ್‌ಗಳಿಗೆ ಛಾಟಿ ಬೀಸುವ ಕಾರ್ಯ ನಡೆಯಬೇಕು. ಕನ್ನಡ ಭಾಷೆಯನ್ನೇ ಮರೆತು ಕಾರ್ಯಕ್ರಮ ನಡೆಸುವ ರೇಡಿಯೋ ವಾಹಿನಿಗಳ ಲೈಸನ್ಸ್‌ನ್ನು ರದ್ದುಗೊಳಿಸುವ ಕುರಿತು ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರದ ಮೂಲಕ ಎಚ್ಚರಿಕೆ ನೀಡಿದೆ.
ಕರ್ನಾಟಕದಲ್ಲಿರುವ ಐಟಿ ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ?
ಈ ಕುರಿತು ಅತಿ ಶೀಘ್ರದಲ್ಲೇ ಚರ್ಚೆ ಮಾಡುತ್ತೇವೆ. ಸರೋಜಿನಿ ಮಹಿಷಿ ವರದಿಯಲ್ಲಿ ಐಟಿ ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತು ಉಲ್ಲೇಖವಾಗಿಲ್ಲ. ಈ ವರದಿಯನ್ನು ಪರಿಷ್ಕರಿಸಿಬೇಕಿದೆ. ಅಲ್ಲದೆ ಐಟಿಬಿಟಿ ಕಂಪನಿಗಳ ಸಿಇಒಗಳ ಮನಒಲಿಕೆ ಕಾರ್ಯದ ಮುಖಾಂತರ ಕನ್ನಡಿಗರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ.
ನಗರಗಳ ಹಲವು ಪ್ರಮುಖ ಪ್ರದೇಶಗಲ್ಲಿ ನೆಲೆಸಿರುವ ಹೊರ ಭಾಷಿಗರಿಗೆ ಕನ್ನಡ ಕಲಿಯುವ ವಾತಾವರಣವೇ ಲಭ್ಯವಾಗದಂತಾಗಿದೆ, ಇದಕ್ಕೆ ನಿಮ್ಮ ಕ್ರಮ?
ಹೌದು. ಇದು ನಗರದ ಹಲವು ಪ್ರದೇಶಗಳಲ್ಲಿ ನೆಲೆಸಿರುವ ಹೊರ ಭಾಷಿಕರಿಗಾಗಿ ಕನ್ನಡ ಕಲಿಕಾ ಕೇಂದ್ರಗಳ ಸ್ಥಾಪನೆಗೆ ಚಿಂತನೆ ಕೈಗೊಂಡಿದ್ದೇವೆ. ಅಪಾರ್ಟ್‌ಮೆಂಟ್‌ಗಳು ಹಾಗೂ ಕನ್ನಡಿಗರು ಕಡಿಮೆ ಇರುವ ಪ್ರದೇಶಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯಲು ಮುಂದಾಗಿದ್ದೇವೆ. ಇದಕ್ಕೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿದ್ದು, ಈ ಸಂಬಂಧ ಜಾಹಿರಾತು ನೀಡುವ ಚಿಂತನೆ ಹೊಂದಿದ್ದೇವೆ. ಆಸಕ್ತಿ ಇರುವ ಶಿಕ್ಷಕರು, ಪದವೀಧರರು ಕನ್ನಡ ಪ್ರಾಧಿಕಾರಕ್ಕೆ ಬಂದು ನೋಂದಾಯಿಸಿಕೊಳ್ಳಬಹುದು.
ರಾಜ್ಯಗಳಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಹಾಗೂ ಪಠ್ಯಕ್ರಮಗಳ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು?
ರಾಜ್ಯದಲ್ಲಿರುವ 12 ವಿಶ್ವವಿದ್ಯಾಲಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲ ಪದವಿ ಕಾಲೇಜುಗಳಲ್ಲಿ 4 ಸೆಮಿಸ್ಟರ್‌ಗಳಲ್ಲಿ ಕನ್ನಡವನ್ನು ಕಡ್ಡಾಯ ಬೋಧನೆ ಮಾಡುವ ಕುರಿತು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ.
ರಾಜ್ಯದ ಸ್ವಾಯತ್ತ ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಕನ್ನಡ ಭಾಷೆ ಬಳಕೆಯೆ ಇಲ್ಲವಾಗಿದೆಯಲ್ಲ?
ಹೌದು. ಇದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಬಹುತೇಕ ಹೊರ ರಾಜ್ಯದವರೇ ಆಗಿರುತ್ತಾರೆ. ಈ ವಿಶ್ವವಿದ್ಯಾಲಯಗಳಲ್ಲಿ 2 ಸೆಮಿಸ್ಟರ್‌ಗಳಿಲ್ಲಿ ಕನ್ನಡ ಕಡ್ಡಾಯ ಬೋಧನೆ ಮಾಡುವ ಕುರಿತು, ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ರಾಜೀವ್ ಗಾಂಧಿ ಮೆಡಿಕಲ್ ಸೈನ್ಸ್ ವಿಶ್ವವಿದ್ಯಾಲಯಗಳಿಗೆ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇವೆ.
ಹೊಸ ವರ್ಷಕ್ಕೆ ನಿಮ್ಮ ಸಂಕಲ್ಪ ಏನು?
ಇಲ್ಲಿಯವರೆಗೆ ಸರ್ಕಾರ ತಂದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತೇನೆ.
-ಆರ್.ಲಕ್ಷ್ಮಿ
ಧನ್ಯವಾದಗಳು
ಡಾ. ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಚಿತ್ರಗಳು
T-Digital Studio, ಸತೀಶ್
ಸಹಾಯ
ಬಾಬಾ, ತಾರಕ್, ವಸಂತ್, ಮೈನಾ, ಶ್ರೀನಿವಾಸ್, ವಿಶ್ವನಾಥ್
Advertisement