
ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಬಿಎಂಪಿ ಚುನಾವಣಾ ಉಸ್ತುವಾರಿ ಆರ್.ಅಶೋಕ್ ಅವರಿಗೆ ಇದು ಸಂಕಷ್ಟದ ಸಮಯ. ಬಿಬಿಎಂಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಜವಾಬ್ದಾರಿಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಬಿಬಿಎಂಪಿ ಚುನಾವಣೆ ಗೆಲುವಿನ ಮೂಲಕ ತಮ್ಮ ವಿರೋಧಿಗಳಿಗೆ ಉತ್ತರ ನೀಡಲು ಮುಂದಾಗಿರುವ ಆರ್.ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ಬಗ್ಗೆ ದೂರದೃಷ್ಟಿ ಇಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈಗ ಬಿಬಿಎಂಪಿ ಚುನಾವಣೆ ಮುಗಿದಿದೆ, ಇದನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಸರ್ಕಾರ ನಗರವನ್ನು ನಿರ್ಲಕ್ಷಿಸಿದೆ ಮತ್ತು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಸಿಎಂ ಆಗಬೇಕಿತ್ತು ಆಗಿದ್ದಾರೆ. ಈಗ ಅವರು ಆಸಕ್ತಿ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಸಿಎಂ ಇಬ್ಬರಿಗೂ ನಗರದ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲ.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಗಾರ್ಬೇಜ್ ಹಾಗೂ ಭ್ರಷ್ಟಾಚಾರದಿಂದ ತುಂಬಿದೆ...
ಗಾರ್ಬೇಜ್ ಸಮಸ್ಯೆ ಕಾಂಗ್ರೆಸ್‌ನವರ ಕೊಡುಗೆ. ಗಾರ್ಬೇಜ್ ಮಾಫಿಯಾವನ್ನು ಕಿತ್ತುಹಾಕಲು ನಾವು ಯತ್ನಿಸಿದ್ದೇವೆ. ಇನ್ನು ಭ್ರಷ್ಟಾಚಾರ ನಡೆದಿದ್ದೇಯಾದರೆ ಕಳೆದ ಎರಡು ವರ್ಷಗಳಿಂದ ಸರ್ಕಾರ ಬಿಬಿಎಂಪಿಯನ್ನು ಏಕೆ ಅಮಾನತು ಮಾಡಲಿಲ್ಲ?
ಆದರೆ ಬಿಬಿಎಂಪಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಐಎಎಸ್ ಅಧಿಕಾರಿ ರಾಜಕುಮಾರ್ ಕಠಾರಿಯಾ ಅವರು ವರದಿ ನೀಡಿದ್ದಾರೆ?
ಒಬ್ಬ ಅಧಿಕಾರಿ ಕೇವಲ ಎರಡು ವಾರಗಳಲ್ಲಿ ಲಕ್ಷಾಂತರ ಫೈಲ್‌ಗಳನ್ನು ನೋಡಿ, ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಲು ಸಾಧ್ಯವೆ? ಇದರಲ್ಲಿ ಯಾವುದೇ ಸತ್ಯ ಇಲ್ಲ. ಕಾಂಗ್ರೆಸ್‌ಗೆ ಚುನಾವಣೆಯನ್ನು ಮುಂದೂಡಬೇಕಾಗಿತ್ತು ಮತ್ತು ಅದಕ್ಕಾಗಿ ಅವರಿಗೆ ಒಂದು ನೆಪ ಬೇಕಿತ್ತು ಅಷ್ಟೆ.
ಸಿಎಂ ಸೇರಿದಂತೆ ನಿಮ್ಮ ಪಕ್ಷದಲ್ಲೇ ಕೆಲವರಿಗೆ ಚುನಾವಣೆ ಬೇಕಿರಲಿಲ್ಲ. ಆದರೆ ನೀವು ಮಾತ್ರ ಚುನಾವಣೆ ಬಗ್ಗೆ ಅತಿ ಆಸಕ್ತಿ ತೋರಿದ್ದು ಏಕೆ?
ಕಳೆದ ಎರಡು ವರ್ಷಗಳಿಂದ ನಗರವನ್ನು ನಿರ್ಲಕ್ಷಿಸಿದ್ದರಿಂದ ಕಾಂಗ್ರೆಸ್‌ಗೆ ಸೋಲಿನ ಭಯ ಇತ್ತು. ಸಂವಿಧಾನದ ಪ್ರಕಾರ ಚುನಾವಣೆ ನಡೆಸಬೇಕು ಅಂತ ನಾನು ಹೋರಾಡಿದ್ದೇನೆ. ಸಂಸದರು, ಶಾಸಕರು ಹಾಗೂ ಕಾರ್ಪೋರೇಟರ್‌ಗಳು ಒಳ್ಳೆ ಕೆಲಸ ಮಾಡುತ್ತಾರೋ ಇಲ್ಲವೋ ಗೊತ್ತಿಲ. ಆದರೆ ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ. ಈ ಸಂಬಂಧ ನಾನು ನನ್ನ ನಾಯಕರ ಮನವೊಲಿಸಿದ್ದೇವೆ. ನನ್ನ ಪ್ರಯತ್ನಕ್ಕೆ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಚುನಾವಣಾ ಉಸ್ತುವಾರಿ ವಹಿಸಿಕೊಂಡ ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದೀರಿ ಎಂಬ ಆರೋಪ ಇದೆ?
ಇದು ಸತ್ಯಕ್ಕೆ ದೂರವಾದ ಮಾತು. ನಾವು ತುಂಬಾ ಪಾರದರ್ಶಕವಾಗಿ ಟಿಕೆಟ್ ನೀಡಿದ್ದೇವೆ. ಪಕ್ಷದ ಎಲ್ಲಾ ನಾಯಕರು ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ನಾವು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. 198 ಸ್ಥಾನಗಳಿಗೆ 1800 ಅಭ್ಯರ್ಥಿಗಳು ಟಿಕೆಟ್ ಆಕಾಕ್ಷಿಯಾಗಿದ್ದಾಗ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಹೀಗಾಗಿ ಕೆಲವರ ಅಸಮಾಧಾನ ಇದ್ದೇ ಇರುತ್ತದೆ.
ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಿಮಗೆ ಪಕ್ಷದ ನಾಯಕತ್ವ ಸಿಗುವ ಸಾಧ್ಯತೆ ಇದೆಯೇ?
ಪಕ್ಷದ ಹುದ್ದೆಗಾಗಿ ನಾನು ಕೆಲಸ ಮಾಡುತ್ತಿಲ್ಲ. ಪಕ್ಷ ನನಗೆ ಯಾವತ್ತೂ ಗೌರವ ನೀಡಿದೆ. ನಾನು ಒಬ್ಬ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಏನೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುತ್ತೇನೆ. ಇವತ್ತು ನಾನು ಈ ಸ್ಥಾನದಲ್ಲಿರುವುದಕ್ಕೆ ಪಕ್ಷವೇ ಕಾರಣ.
ಒಂದು ವೇಳೆ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಸೋತರೆ?
ಪಕ್ಷ ಗೆದ್ದರೆ, ಸಾಮೂಹಿಕ ಹೊಣೆಗಾರಿಕೆ. ಒಂದು ವೇಳೆ ಸೋತರೆ, ನಾನೇ ಹೊಣೆ ಹೊರುತ್ತೇನೆ. ಆದರೆ ಆ ಪರಿಸ್ಥಿತಿ ನಿರ್ಮಾಣ ಆಗಲ್ಲ. ನಾವು 110 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ.
ಬಿಬಿಎಂಪಿ ವಿಭಜನೆ ವಿಧೇಯಕಕ್ಕೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ಸರ್ಕಾರ ಬಿಬಿಎಂಪಿಯನ್ನು ವಿಸರ್ಜನೆ ಮಾಡಿದರೆ?
ಸರ್ಕಾರ ಆ ರೀತಿ ಮಾಡುವುದಿಲ್ಲ. ವಿಭಜನೆ ಮಾಡುವುದಾದರೆ ಚುನಾಯಿತ ಸಂಸ್ಥೆಯ ಅವಧಿ ಮುಗಿದ ನಂತರವೇ ಮಾಡಿ ಅಂತ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
Advertisement