ಕನ್ನಡ ನಾಡಿನ ಜೀವನದಿ - ಒಂದು ಜೀವನ ಚಿತ್ರ

ಕಾವೇರಿ ನದಿ -ಅದೊಂದು ನೀರಿನ ಮೂಲ ಮಾತ್ರ ಅಲ್ಲ, ಅದರೊಂದಿಗೆ ನಮ್ಮ ಪ್ರತಿನಿತ್ಯದ ಬದುಕು ಬೆಸೆದುಕೊಂಡಿದೆ...
ಭವಾನಿ ಜಿ.ಎಸ್
ಭವಾನಿ ಜಿ.ಎಸ್

ಕಾವೇರಿ ನದಿ -ಅದೊಂದು ನೀರಿನ ಮೂಲ ಮಾತ್ರ ಅಲ್ಲ, ಅದರೊಂದಿಗೆ ನಮ್ಮ ಪ್ರತಿನಿತ್ಯದ ಬದುಕು ಬೆಸೆದುಕೊಂಡಿದೆ. ಅದು ಜೀವಸೆಲೆ, ಎಲ್ಲಿಂದಲೋ ಹುಟ್ಟಿ ಎಲ್ಲೆಲ್ಲಿಯೋ ಹರಿದು ಕೊನೆಗೆ ಸಾಗರ ಸೇರುವಾಗ ಅಲ್ಲಿ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹೀಗೆ ಕಾವೇರಿನದಿಯ ಮೂಲವನ್ನು ಹುಡುಕಿ, ಅದು ಎಲ್ಲೆಲ್ಲಿ ಹರಿಯುತ್ತದೆಯೋ ಅಲ್ಲೆಲ್ಲ ಸಂಚರಿಸಿ ಸಾಗರವನ್ನು ಸೇರುವ ಆ ಕ್ಷಣದವರೆಗೆ ಅದರ ಚಲನವಲನಗಳನ್ನು ದಾಖಲಿಸಿದ ಕಲಾವಿದೆಯೊಬ್ಬರನ್ನು ನಾವಿಲ್ಲಿ ಪರಿಚಯಿಸುತ್ತಿದ್ದೇವೆ.
ಈಕೆಯ ಹೆಸರು ಭವಾನಿ ಜಿ.ಎಸ್. ಮೂಲತಃ ಕೊಡಗಿನವರಾದ ಇವರೀಗ ಈಗ ಬೆಂಗಳೂರು ನಿವಾಸಿ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಎಂ.ಎಫ್.ಎ ಪದವೀಧರೆಯಾಗಿರುವ ಭವಾನಿ ಪೇಟಿಂಗ್, ಫೋಟೋಗ್ರಫಿ ಹಾಗು ವೀಡಿಯೋ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಚಿತ್ರ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿರುವ ಭವಾನಿಯವರನ್ನು ಕನ್ನಡ ಪ್ರಭ ಡಾಟ್ ಕಾಂಗಾಗಿ ಸಂದರ್ಶಿಸಿದಾಗ...


ನಿಮ್ಮ ಪೇಟಿಂಗ್‌ಗಳು ಪ್ರಕೃತಿಗೆ ಸಂಬಂಧಿಸಿದ್ದು...ಯಾಕೆ?

ಪ್ರಕೃತಿಯೊಂದಿಗೆ ಒಡನಾಟ ನನಗೆ ತುಂಬಾ ಇಷ್ಟ. ನಾನು ಕೊಡಗಿನವಳಾದ ಕಾರಣ, ನಾನು ಹುಟ್ಟಿ ಬೆಳೆದ ಪರಿಸರವೂ ಇದಕ್ಕೆ ಕಾರಣ. ಪ್ರಕೃತಿಯಲ್ಲಿ ಕಾಣುವ ವಿಸ್ಮಯ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಎಲೆ, ಹೂ, ಹಣ್ಣು,  ಮಣ್ಣು ಎಲ್ಲವೂ ನನ್ನಲ್ಲಿ ಅಚ್ಚರಿ ಮೂಡಿಸಿವೆ. ಪ್ರಕೃತಿಯೊಂದಿಗಿನ ಒಡನಾಟ ನನಗೆ ಸ್ಫೂರ್ತಿ ನೀಡಿದೆ. ನಾನೆಲ್ಲಿಗಾದರೂ ಹೋದರೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಕಳೆದು ಹೋಗುತ್ತೇನೆ. ಆ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ಪೇಟಿಂಗ್ ಮಾಡುವುದು ನನಗಿಷ್ಟವಾದುದು.


ನಿಮ್ಮ ಕಲೆಗಳಲ್ಲಿ ಹಳ್ಳಿ ಮತ್ತು ನಗರ ಜೀವನವನ್ನು ಹೇಗೆ ಚಿತ್ರಿಸಿದ್ದೀರಿ?

Texture of Forest, City and Sea ಎಂಬ ವಿಡಿಯೋದಲ್ಲಿ ನೀವಿದನ್ನು ಕಾಣಬಹುದು. ಕಾಡಿನಲ್ಲಿ ನಡೆಯುವಾಗ ಸಿಗುವ ಅನುಭವಗಳು, ಅಲ್ಲಿನ ಪ್ರಕೃತಿ ಸೌಂದರ್ಯ, ಅಲ್ಲಿ ಕೇಳಿ ಬರುವ ದನಿಗಳು ಒಂದೆಡೆಯಾದರೆ ನಗರ ಜೀವನಕ್ಕೆ ಬಂದಾಗ ಸಿಗುವ ಅನುಭವಗಳು ಇನ್ನೊಂದು ರೀತಿಯದ್ದು . ಖಾಲಿ ರಸ್ತೆಯಲ್ಲಿ ನಡೆಯುವಾಗ ಕೇಳುವ ವಾಹನದ ಶಬ್ದಗಳು, ಜೀಬ್ರಾ ವೇ, ದಾರಿಯುದ್ದಕ್ಕೂ ಸಿಗುವ ಬೇರೆ ಬೇರೆ ರೀತಿಯ ಸದ್ದುಗಳು ನಗರದ ಚಿತ್ರಣವನ್ನು ನೀಡುತ್ತದೆ. ಇತ್ತ ಸಾಗರದ ಕಿನಾರೆಯಲ್ಲಿ ನಡೆಯುವಾಗ ಕೇಳುವ ಕಡಲಿನ ಅಬ್ಬರ, ತೆರೆ ಹಾಗು ಗಾಳಿಯ ಸದ್ದು ಎಲ್ಲವೂ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ. ಇಲಿ ನಾನು ಪ್ರಕೃತಿಯೊಂದಿಗೆ ಸಂವಹನ ಮಾಡುತ್ತೇವೆ. ಪ್ರಕೃತಿಯೊಂದಿಗೆ ಬೆರೆಯುತ್ತಾ ಅದರ ಸೌಂದರ್ಯವನ್ನು ಆಸ್ವಾದಿಸುವ ವೀಡಿಯೋ ಇದಾಗಿದೆ. ಹಳ್ಳಿಯ ಅನುಭವವನ್ನು ಕೊಡಗಿನದ್ದು, ನಗರದ ಅನುಭವ ಬೆಂಗಳೂರಿನದ್ದಾದರೆ, ಕಡಲ ಕಿನಾರೆ ಕೊಲೊಂಬೋದಲ್ಲಿ ಚಿತ್ರಿಸಿದ್ದೆ.

ಬೆಂಗಳೂರಿನ ಕೆರೆ ಬಗ್ಗೆ ಒಂದು ವೀಡಿಯೋ ಮಾಡಿದ್ದೀರಿ ಅಲ್ವಾ?
Lost lakes of bangalore, ಪ್ರಾಜೆಕ್ಟ್ ನ ಅಂಗವಾಗಿ Kere Stop ಅನ್ನೋ ವೀಡಿಯೋ ಮಾಡಿದ್ದೆ. ಬೆಂಗಳೂರಿನಲ್ಲಿ ಕೆರೆಗಳು ನಾಶವಾಗಿ ಅಲ್ಲೆಲ್ಲ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಒಂದು ಕಾಲದಲ್ಲಿ ಕೆರೆ ಇದ್ದ ಪ್ರದೇಶದಲ್ಲಿಂದು ಕ್ರೀಡಾಂಗಣ, ಮಾಲ್, ಬಸ್‌ಸ್ಟಾಪ್, ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿವೆ. ಬಸವೇಶ್ವರನಗರದಲ್ಲಿನ ಒಂದು ಬಸ್ ಸ್ಟಾಪ್‌ಗೆ ಕೆರೆಸ್ಟಾಪ್ ಎಂದೇ ಹೆಸರು. ದಾಸರಹಳ್ಳಿ ಕೆರೆಯಿಂದಾಗಿ ಆ ಹೆಸರು ಬಂದಿದೆ. ಅಲ್ಲಿ ಈಗ ಕೆರೆ ಇಲ್ಲ. ಆದರೆ ಹೆಸರು ಮಾತ್ರ ಉಳಿದುಕೊಂಡಿದೆ. ಬೆಂಗಳೂರಿನಲ್ಲಿ ಎಷ್ಟೊಂದು ಕೆರೆಗಳಿದ್ದವು! ಕಾಲಕ್ರಮೇಣ ಎಲ್ಲವೂ ನಾಶವಾಗುತ್ತಾ ಬಂದಿವೆ. ಈ ಪ್ರಾಜೆಕ್ಟ್‌ಗಾಗಿ ಬಸವೇಶ್ವರ ನಗರದಲ್ಲಿನ ಹಿರಿಯ ವ್ಯಕ್ತಿಗಳನ್ನು ಮಾತಾಡಿಸಿದ್ದೆ. ಅವರು ಹಿಂದೆ ಬೆಂಗಳೂರು ಹೇಗಿತ್ತು? ಕೆರೆಗಳು ಎಲ್ಲೆಲ್ಲಿ ಇದ್ದವು ಈಗ ಬೆಂಗಳೂರು ಹೇಗಾಗಿದೆ ಎಂದು ತಮ್ಮ ನೆನಪಿನ ಬುತ್ತಿಗಳನ್ನು ಇಲ್ಲಿ ಬಿಚ್ಚಿದ್ದಾರೆ.

ಶ್ರೀಲಂಕಾದಲ್ಲಿಯೂ ಒಂದು ವೀಡಿಯೋ ಶೂಟ್ ಮಾಡಿದ್ದೀರಿ. ಈ ಬಗ್ಗೆ?
ಶ್ರೀಲಂಕಾದಲ್ಲಿ ಮಾಡಿದ ವೀಡಿಯೋ Galle Face ಅಂತ. ರಜಾದಿನಗಳಲ್ಲಿ ಅಲ್ಲಿನ ಸಮುದ್ರದ ದಡದಲ್ಲಿ ಜನರೆಲ್ಲರೂ ಗಾಳಿಪಟ ಹಾರಿಸಿ ಖುಷಿ ಪಡ್ತಾರೆ. ಆದರೆ ಅಲ್ಲಿ ನನ್ನ ಗಮನ ಸೆಳೆದದ್ದು,  ಸೈನಿಕರ ಧ್ವಜಾರೋಹಣ. ದಿನಾ ಬೆಳಗ್ಗೆ ಸೈನಿಕರು ಬಂದು ಬೃಹತ್ ಧ್ವಜವೊಂದನ್ನು  ಧ್ವಜಾರೋಹಣ ಮಾಡಿ ಹೋಗುತ್ತಾರೆ. ಸಂಜೆ ಬಂದು ಅವರೋಹಣ ಮಾಡಿ ಧ್ವಜ ತೆಗೆದುಕೊಂಡು ಹೋಗುತ್ತಾರೆ. ಶ್ರೀಲಂಕಾ ಯುದ್ಧದಲ್ಲಿ ಮಡಿದವರಿಗೆ ಗೌರವ ಸೂಚಿಸುವ ಸಲುವಾಗಿ ಅಲ್ಲಿ ದಿನಾ ಧ್ವಜಾರೋಹಣ ನಡೆಯುತ್ತಿದೆ. ಅಲ್ಲಿ ಒಂದೆಡೆ ಜನರು ಗಾಳಿಪಟ ಹಾರಿಸ್ತಾರೆ, ಇನ್ನೊಂದೆಡೆ ಮಡಿದ ಯೋಧರಿಗೆ ಗೌರವ ಸೂಚಕ ಧ್ವಜಾರೋಹಣ. ಇವೆರಡು ಪ್ರಕ್ರಿಯೆಗಳು ಜತೆಯಾಗಿ ನಡೆಯುತ್ತಿದ್ದು, 2011ರಲ್ಲಿ ಕೊಲಂಬೋಗೆ ಹೋದಾಗ ಇದನ್ನೇ ವೀಡಿಯೋದಲ್ಲಿ ಸೆರೆ ಹಿಡಿದಿದ್ದೇನೆ.

Journey with River Cauvery ಈ ವೀಡಿಯೋ ಮಾಡುವಾಗ ಅನುಭವ ಹೇಗಿತ್ತು?
ಕೊಡಗಿನಲ್ಲಿ ಹುಟ್ಟುವ ಕಾವೇರಿ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಮಮತೆ ಜಾಸ್ತಿ. ಯಾವುದೇ ಹೊಳೆ ನೋಡಿದರೂ ಅದು ಎಲ್ಲಿಂದ ಹುಟ್ಟುತ್ತದೆ ಅದನ್ನು ನೋಡಬೇಕೆಂಬ ಹಂಬಲ ನನ್ನಲ್ಲಿತ್ತು. ನಾವು ನದಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ, ಅದನ್ನು ಪೂಜಿಸುತ್ತೇವೆ. ಆದರೆ ನಾವು ಮಾಡುವುದೇನು? ಎಲ್ಲ ತ್ಯಾಜ್ಯಗಳನ್ನು ನದಿಗೇ ಹರಿಯಬಿಡುವ ಮೂಲಕ ಅದನ್ನು ಕಲುಷಿತಗೊಳಿಸುತ್ತೇವೆ. ನದಿ ಎಲ್ಲವನ್ನೂ ತನ್ನೊಳಗೆ ಹೊತ್ತು ಸಾಗರಕ್ಕೆ ಸೇರಿ ಅಲ್ಲಿ ವಿಲೀನವಾಗುತ್ತದೆ. ಹೀಗಿರುವಾಗಲೇ ನದಿಯ ಉಗಮದಿಂದ ಹಿಡಿದು ಸಾಗರಕ್ಕೆ ಸೇರುವ ಅದರ ಯಾನದ ಬಗ್ಗೆ ವೀಡಿಯೋ ಮಾಡಬೇಕೆಂಬ ಯೋಚನೆ ಬಂತು. ಹೀಗೆ Journey with River Cauvery ಆರಂಭವಾಯಿತು. ತಲಕಾವೇರಿಯಿಂದ ಹಿಡಿದು ಕಾವೇರಿ ನದಿ ಹರಿಯುವ ಎಲ್ಲ ಪ್ರದೇಶಗಳನ್ನು ಭೇಟಿ ಇತ್ತು ನೀರಿನ ಹರಿವು, ಅದರ ರೀತಿ, ಓಘಗಳನ್ನು ನಾನು ದಾಖಲಿಸಿಕೊಳ್ಳುತ್ತಾ ಬಂದಿದ್ದೇನೆ. ಯಾವ ಪ್ರದೇಶದಲ್ಲ ಅದು ಹೇಗೆ ಹರಿಯುತ್ತದೆ, ಎಲ್ಲೆಲ್ಲಿ ಕವಲೊಡೆದು ಹರಿಯುತ್ತದೆ ಎಂಬುದನ್ನು ತಿಳಿಯಲು ನಾನು ನದಿಯೊಂದಿಗೇ ಹೆಜ್ಜೆ ಹಾಕಿದ್ದಾನೆ. ತಲಕಾವೇರಿಯಲ್ಲಿ ಹುಟ್ಟಿದ ನದಿ , ಬಂಗಾಳಕೊಲ್ಲಿ ಸೇರುವ ವರೆಗೆ ನಾನು ಜತೆಯಾಗಿ ಪ್ರಯಾಣ ಮಾಡಿದೆ. ಅದೊಂದು ವಿಶಿಷ್ಟ ಅನುಭವವಾಗಿತ್ತು. ಕಾವೇರಿ ನದಿಯೊಡನೆ ನನ್ನ ಒಡನಾಟ ಮನಸ್ಸಿಗೆ ತುಂಬಾ ಹತ್ತಿರವಾದದ್ದು. ಅದು ಸಾಗರ ಸೇರುವ ಹೊತ್ತು, ನಾನು ಏನೋ ಕಳೆದುಕೊಳ್ಳುತ್ತೀದ್ದೇನೆ ಅನ್ನೋ ಭಾವ ನನ್ನನ್ನಾವರಿಸಿತ್ತು. ನಾನು ನದಿಯನ್ನು ಪ್ರೀತಿಸತೊಡಗಿದ್ದೆ. ಒಟ್ಟಿನಲ್ಲಿ ಅದೊಂದು ಬ್ಯೂಟಿಫುಲ್ ಜರ್ನಿ ಆಗಿತ್ತು.



ನೆರಳನ್ನು ಹಿಂಬಾಲಿಸಿದ ವಿಡಿಯೋ Cross Over.. ಈ ಬಗ್ಗೆ ಸ್ವಲ್ಪ ಹೇಳಿ...

ಕಾವೇರಿ ನದಿಯನ್ನು ಹಿಂಬಾಲಿಸುತ್ತಾ ಹೋದಾಗಲೇ ಚುಂಚನಕಟ್ಟೆಯಲ್ಲಿ ಈ ವೀಡಿಯೋ ಮಾಡಿದ್ದು. ಸೇತುವೆಯ ಮೇಲೆ ನಾನು ನಡೆಯುವಾಗ ನನ್ನ ನೆರಳು ನೀರಿನಲ್ಲಿ ಬೀಳುತ್ತಿತ್ತು. ನದಿಯಲ್ಲಿ ಸೇತುವೆಯ ನೆರಳು ಅದರಲ್ಲಿ ನಡೆದಾಡುವ ನಾನು..ಅದನ್ನೇ ಕ್ಯಾಪ್ಚರ್ ಮಾಡಿ ಕ್ರಾಸ್ ಓವರ್ ವೀಡಿಯೋ ಮಾಡಿದೆ.

ನಿಮ್ಮ ಮುಂದಿನ ಯೋಜನೆ?
ಕಾವೇರಿ ಪ್ರಾಜೆಕ್ಟ್‌ಗೆ ಸಂಬಂಧಪಟ್ಟಂತೆ ಪೇಟಿಂಗ್ ಮಾಡಬೇಕು. ಮಾತ್ರವಲ್ಲದೆ ನೀರನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೂ ಕಲಾ ಮಾಧ್ಯಮವನ್ನು ಬಳಸಬೇಕೆಂದಿದ್ದೀನಿ.


ಭವಾನಿಯವರ ವೆಬ್‌ಸೈಟ್: http://www.bhavanigs.com/


ಸಂದರ್ಶನ: ರಶ್ಮಿ ಕಾಸರಗೋಡು



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com