ಕನ್ನಡಿಗನ ಕುಸುರಿಯಲ್ಲಿ ಅರಳಿದ 'ಆನ್ ಎ ಟ್ರೈಲ್ ವಿತ್ ಆ್ಯಂಟ್ಸ್' ಕೃತಿ

ಸುನೀಲ್ ಕುಮಾರ್
ಸುನೀಲ್ ಕುಮಾರ್

ಇರುವೆ ಎಂದರೆ ಯಾರಿಗೆ ತಾನೇ ಪರಿಚಯವಿಲ್ಲ ಹೇಳಿ. ಸಾಲುಗಟ್ಟಿ ರೈಲಿನಂತೆ ಸಾಗುವ ಮತ್ತು ಜಗತ್ತಿನಲ್ಲಿ ಕಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿ ಇರುವೆ. ಚಿಕ್ಕ ಜೀವಿ ಎನ್ನುವ ಕಾರಣಕ್ಕೆ ಇರುವೆಯನ್ನು ನಾವು ಸಲೀಸಾಗಿ ಕಡೆಗಣಿಸುವಂತಿಲ್ಲ. ಕಾರಣ, ಇರುವೆಯ ಪ್ರಪಂಚದ ಬಗ್ಗೆ ತಿಳಿಯ ಹೊರಟರೆ ನೀವು ನಿಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಖಚಿತ.
ಏಕೆಂದರೆ ಇರುವೆಗಳ ಪ್ರಪಂಚದ ಆಳ ಅಗಲಗಳನ್ನು ಶೋಧಿಸುತ್ತ ಹೋದರೆ ಕೊನೆ ಎಂಬುದೇ ಇಲ್ಲ. ಅದು ನಮ್ಮ ಊಹೆಗಳನ್ನು ಮೀರಿದ್ದು. ಕಾರಣ, ಇಡೀ ವಿಶ್ವದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಪ್ರಕಾರದ ಇರುವೆಗಳಿವೆ. ಭಾರತದಲ್ಲಿ ಸುಮಾರು 700 ಕ್ಕೂ ಹೆಚ್ಚು ಪ್ರಕಾರದ ಇರುವೆಗಳಿವೆ. ಇಂತಹ ಇರುವೆಗಳ ಪ್ರಪಂಚದಲ್ಲಿ ರಾಣಿ ಇರುವೆಗಳದ್ದೇ ಮೇಲುಗೈ. ಹೆಣ್ಣು ಇರುವೆಗಳೇ ಇಲ್ಲಿ ಕಾರ್ಮಿಕರು ಮತ್ತು ರಕ್ಷಕರು. ಆಹಾರ ಸಂಗ್ರಹವೇ ಇವುಗಳ  ಆದ್ಯ ಪ್ರವೃತ್ತಿ.
ನಿಯಮ ಪಾಲನೆಯಲ್ಲಿ ಹೆಣ್ಣು ಇರುವೆಗಳದ್ದೇ ಪಾರುಪತ್ಯ. ಕೆಲಸಗಾರ ಇರುವೆಗಳು ಕುಟುಂಬದ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತವೆ. ಕುಟುಂಬದ ಅಗತ್ಯತೆಗಳಿಗೆ ಅನುಗುಣವಾಗಿ ಮೊಟ್ಟೆ ಇಡುವುದು ರಾಣಿ ಇರುವೆಯ ಮುಖ್ಯ ಕೆಲಸ. ಹೀಗೆ ಇರುವೆಗಳ ಬಗ್ಗೆ ಹತ್ತು ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಇರುವೆ ವಿಜ್ಞಾನಿ ಸುನೀಲ್ ಕುಮಾರ್ ಮತ್ತು ಅವರ ಸ್ನೇಹಿತ ಅಜಯ್ ಕುಮಾರ್. ಇರುವೆಗಳ ಬಗ್ಗೆ ಇವರು ಬರೆದಿರುವ ಆನ್ ಎ ಟ್ರೈಲ್ ವಿತ್ ಆ್ಯಂಟ್ಸ್ ಪುಸ್ತಕದ 2 ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ. ಇರುವೆಗಳ ಬಗ್ಗೆ ಇಂತಹ ವಿಶೇಷ ಪುಸ್ತಕವನ್ನು ಬರೆದದ್ದು ಕನ್ನಡಿಗ ಎಂಬುದು ಮತ್ತೊಂದು ಹೆಮ್ಮೆಯ ವಿಷಯ.



ಸುನೀಲ್ ಕುಮಾರ್-ಅಜಯ್ ಕುಮಾರ್

ಮೂಲತಃ ಬೆಂಗಳೂರಿನವರಾದ ಸುನೀಲ್ ಕುಮಾರ್, ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಂತಹವರು. ಆನೆ, ಹುಲಿ, ಹಾವು, ಮೀನು ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳ ಬಗ್ಗೆ ಸಂಶೋಧನೆ ಕೈಗೊಳ್ಳುವಂತಹ ಗ್ಲಾಮರ್ ಲೋಕದಲ್ಲಿ ಸಣ್ಣ ಜೀವಿ ಇರುವೆಗಳ ಬಗ್ಗೆ ಸಂಶೋಧನೆ ನಡೆಸಿ ಅನೇಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಂತಹ ಇರುವೆಗಳ ಬಗೆಗಿನ ಸವಿಸ್ತಾರವಾದ ಮಾಹಿತಿ ಸಂಶೋಧಕ ಸುನೀಲ್ ಕುಮಾರ್ ಅವರ ಮಾತುಗಳಲ್ಲಿ ಈ ಕೆಳಕಂಡಂತಿದೆ.

1. ಇರುವೆಗಳ ಬಗ್ಗೆ ಪುಸ್ತಕ ಬರೆಯಲು ಕಾರಣವೇನು?
1996ರಲ್ಲಿ ಪಕ್ಷಿ ವೀಕ್ಷಣೆ ಮಾಡುವವರಿಗೆ ಮತ್ತು ಮಕ್ಕಳಿಗೆ ಪರಿಚಯಿಸುವ ರೀತಿಯಲ್ಲೇ ನಾನು ಮತ್ತು ಅಜಯ್ ಕುಮಾರ್ ಅವರು ಇರುವೆ ವೀಕ್ಷಣೆ ಬಗ್ಗೆ ಮಕ್ಕಳಿಗೆ ವಿವರಿಸುತ್ತಿದ್ದೆವು. ಈ ವೇಳೆ ಪಕ್ಷಿ ನೋಡಬೇಕೆಂದರೆ ಪುಸ್ತಕವಿದೆ. ಆದರೆ, ಇರುವೆ ಬಗ್ಗೆ ತಿಳಿಯಲು ಯಾವುದೇ ಪುಸ್ತಕವಿಲ್ಲ ಎನ್ನುವ ಮಾತು ವೀಕ್ಷಣೆಗೆ ಬಂದವರಿಂದ ಕೇಳಿ ಬರುತ್ತಿತ್ತು. ಹಾಗಾಗಿ, ನಾನು ಮತ್ತು ಅಜಯ್ ಇಬ್ಬರು ಇದರ ಬಗ್ಗೆ ಏನಾದ್ರೂ ಮಾಡಬೇಕು ಎಂದು ಯೋಚಿಸಿ, ಇರುವೆ ಪುಸ್ತಕಗಳ ಬಗ್ಗೆ ಹುಡುಕಾಟ ನಡೆಸಿದೆವು. ಭಾರತದಲ್ಲಿ ಆ ರೀತಿ ಯಾವುದೇ ಪುಸ್ತಕ ಸಿಗಲಿಲ್ಲ. ಬ್ರಿಟಿಷ್ ವಿಜ್ಞಾನಿ ಲೆಫ್ಟಿನೆಂಟ್ ಕರ್ನಲ್ ಸಿ.ಟಿ.ಬಿಂಘ್ಯಾಮ್ 1903ರಲ್ಲಿ ಇರುವೆಗಳ ಮೇಲೆ ಮೊಟ್ಟ ಮೊದಲ ಪುಸ್ತಕ ಹೊರತಂದಿದ್ದರು. ಆದರೆ, ಅದರಲ್ಲಿ ಕೇವಲ ರೇಖಾಚಿತ್ರ ಮತ್ತು ಅಕ್ಷರಗಳಲ್ಲೇ ಇರುವೆಗಳ ಬಗ್ಗೆ ಬಣ್ಣಿಸಿದ್ದಾರೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಹಾಗಾಗಿ, ಇರುವೆಗಳ ಬಗ್ಗೆ ನಾವೇ ಛಾಯಚಿತ್ರ ಸೆರೆಹಿಡಿಯೋಣ ಎಂದು ನಿರ್ಧರಿಸಿ, ಸುಮಾರು 85-90 ಇರುವೆಗಳ ಚಿತ್ರ ಸೆರೆ ಹಿಡಿದು, ಅವುಗಳ ಚಲನವಲನಗಳ ಬಗ್ಗೆ ಸಂಶೋಧನೆ ನಡೆಸಲು ಮುಂದಾದೆವು.

2. ಇರುವೆಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಇರುವ ನಿರಾಸಕ್ತಿಗೆ ಕಾರಣವೇನು?
ಸಂಶೋಧನೆ ಎಂದರೆ ಹೆಚ್ಚು ಜನರು ಇಷ್ಟಪಡುವುದಿಲ್ಲ. ಏಕೆಂದರೆ ಸಂಬಳ ಕಡಿಮೆ. ಹೆಚ್ಚಿನವರು ಆನೆ, ಹುಲಿ, ಸಿಂಹ, ನವಿಲು, ಪಕ್ಷಿಗಳು, ಹಾವು, ಮೊಸಳೆ ಇತ್ಯಾದಿಗಳ ಬಗ್ಗೆ ಹೆಚ್ಚು ಸಂಶೋಧನೆಯತ್ತ ಆಕರ್ಷಿತರಾಗುತ್ತಾರೆ. ಅಂದೊಂದು ಗ್ಲಾಮೆರ್ ಆಗಿಬಿಟ್ಟಿದೆ. ಇರುವೆ ಬಗ್ಗೆ ಸಂಶೋಧನೆ ಎಂದರೆ ಏನೋ ನಿರುತ್ಸಾಹ, ಇರುವೆನಾ... ಅಂತ ಪ್ರಶ್ನಿಸುವಂತವರೇ ಹೆಚ್ಚು.  ಇರುವೆಗಳ ಬಗ್ಗೆ ಸಂಶೋಧನೆ ನಡೆಸಲು, ಒಳ್ಳೆ ಮೈಕ್ರೋಸ್ಕೋಪ್ ಬೇಕು. ಆದ್ರೆ ಅದು ಕೈಗೆಟುಕುವ ದರದಲ್ಲಿ ಸಿಗುವುದಿಲ್ಲ. ಹೆಚ್ಚಾಗಿ, ಇರುವೆ ಗ್ಲಾಮರ್ ಲೋಕಕ್ಕೆ ಸೇರಿದಲ್ಲ. ಹಾಗಂತ ಇರುವೆ ಬಗ್ಗೆ ಸಂಶೋಧನೆ ಕೈಗೊಳ್ಳುವವರು ಇಲ್ಲ ಅಂತಲ್ಲ, ಇತ್ತೀಚೆಗೆ ಇರುವೆಗಳ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಈ ದೇಶದಲ್ಲಿ ಸುಮಾರು 50 ಇರುವೆ ಸಂಶೋಧಕರು ಸಿಗಬಹುದು.



3. ಜೀವ ಸಂಕುಲದಲ್ಲಿ ಇರುವೆಗಳ ಮಹತ್ವ ಏನು?
ಆಹಾರ ಶೃಂಖಲೆಯಲ್ಲಿ ಇರುವೆಗಳ ಪಾತ್ರ ಮಹತ್ವವಾದದ್ದು. ಯಾವುದೇ, ಒಂದು ಪ್ರಾಣಿ ಸತ್ತು ಬಿದ್ದಾಗ, ಅದರಲ್ಲಿ ನಿರುಪಯುಕ್ತವಾದದ್ದನ್ನು ಇರುವೆ ತಿನ್ನುತ್ತವೆ. ಭೂಮಿಯಲ್ಲಿರುವ ನಿರುಪಯುಕ್ತವನ್ನು ತಿಂದು ಭೂಮಿಯ ಫಲವತ್ತತೆಯನ್ನು ಕಾಪಾಡುತ್ತವೆ. ಗೆದ್ದಲು ಇರುವೆ ಇದರಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಈ ಇರುವೆಗಳು ಭೂಮಿಯ ಮಣ್ಣನ್ನು ಮೇಲೆ ಕೆಳಗೆ ಮಾಡುತ್ತವೆ. ರೈತನಿಗೆ ಕೃಷಿ ಕಾರ್ಯದಲ್ಲಿ ಸಹಕಾರ ಮಾಡುತ್ತದೆ. ಎರೆಹುಳುವಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರೈತನಿಗೆ ನೆರವಾಗುತ್ತವೆ. ಮರದ ಕಾಂಡಗಳನ್ನು ತಿಂದು ಪೋಷಕಾಂಶ ಪರಿವರ್ತನೆ ಮಾಡುತ್ತವೆ. ಆಹಾರ ಸರಪಳಿಯಲ್ಲಿ ತಳಹದಿಯಂತೆ ಕೆಲಸ ಮಾಡುತ್ತವೆ. ಒಂದೊಮ್ಮೆ ಇರುವೆಗಳನ್ನು ನಾಶಪಡಿಸಿದಲ್ಲಿ ಕೆಳ ಹಂತದಲ್ಲಿ ಶಕ್ತಿ ಪ್ರವಹಿಸುವ ಪ್ರಕ್ರಿಯೆ ನಾಶವಾಗಿ ಆಹಾರ ಸರಪಳಿ ತುಂಡಾಗುತ್ತದೆ. ಕೆಂಜಗ ಒಂದು ಗಿಡದಲ್ಲಿ ಇದ್ದರೆ, ಅದು ಬೇರೆ ಕೀಟಗಳನ್ನು ಆ ಗಿಡಕ್ಕೆ ಬರಲು ಬಿಡುವುದಿಲ್ಲ.

4. ನೀವು ಬರೆದಿರುವ ಪುಸ್ತಕದಲ್ಲಿ ಇರುವೆಗಳ ಬಗ್ಗೆ ಏನೆಲ್ಲಾ ಮಾಹಿತಿಗಳು ಲಭ್ಯವಿದೆ?
ಆನ್ ಎ ಟ್ರೈಲ್ ವಿತ್ ಆ್ಯಂಟ್ಸ್  ಪುಸ್ತಕದಲ್ಲಿ ಸುಮಾರು 85 ಇರುವೆಗಳ ಬಗ್ಗೆ ಮಾಹಿತಿ ಸಿಗಲಿದೆ. ಇರುವೆಗಳನ್ನು ಗುರುತಿಸುವುದು ಹೇಗೆ, ಅವುಗಳ ಜೀವನ ಶೈಲಿ, ಪರಿಸರದಲ್ಲಿ ಇರುವೆಗಳ ಪಾತ್ರ, ಈ ಎಲ್ಲ ಅಂಶಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. 200 ಕ್ಕೂ ಹೆಚ್ಚು ಇರುವೆಗಳ ಫೋಟೋಗಳನ್ನು ಬಳಸಲಾಗಿದೆ. ಇರುವೆಗಳ ವೀಕ್ಷಣೆ, ಇರುವೆಗಳ ನಾವಿಗೇಷನ್, ಕಮ್ಯೂನಿಕೇಷನ್, ಇರುವೆಗಳಿಂದ ಏನೇನು ತಿಳಿದುಕೊಳ್ಳಬಹುದು, ಜಂಪಿಂಗ್ ಇರುವೆ, ಕಣ್ಣು ಇರದ ಇರುವೆ, ತಂತ್ರಜ್ಞಾನದಲ್ಲಿ ಇರುವೆಯ ಪಾತ್ರ,  ಎಂಬುದುರ ಬಗ್ಗೆ ಮಾಹಿತಿ ಇದೆ. ಅಲ್ಲದೇ, ಕೆಲವು ಇರುವೆಗಳ ಬಗ್ಗೆ ಛಾಯಾಚಿತ್ರದ ಮೂಲಕ ವಿಶ್ಲೇಷಣೆ ನೀಡಲಾಗಿದೆ.

5. ಇರುವೆಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ತೆಗೆದುಕೊಂಡ ಸಮಯ ಎಷ್ಟು?
1996ರಿಂದ ಇದರ ಬಗ್ಗೆ ಸಂಶೋಧನೆ ನಡೆಸಲು ಆರಂಭಿಸಿದೆ. ಅಜಯ್ ಮತ್ತು ನಾನು ಸುಮಾರು 15-20 ವರ್ಷಗಳ ಕಾಲ ನಡೆಸಿದ ಸಂಶೋಧನೆಯಲ್ಲಿ ಈ ಪ್ರತಿಫಲ ಸಿಕ್ಕಿದೆ.

6. ದಾಖಲೆ ಪ್ರಮಾಣದಲ್ಲಿ ಇರುವೆಗಳ ಬಗೆಗಿನ ಪುಸ್ತಕ ಮಾರಾಟವಾಗಲು ಕಾರಣ?
ಆನ್ ಎ ಟ್ರೈಲ್ ವಿತ್ ಆ್ಯಂಟ್ಸ್ ಇರುವೆಗಳ ಬಗೆಗಿನ ಒಂದು ವಿಶೇಷ ಪುಸ್ತಕ. ಎಲ್ಲರಿಗೂ ವೈಲ್ಡ್ ಲೈಫ್ ಅಂದ್ರೆ ತುಂಬಾ ಆಸಕ್ತಿ. ತುಂಬಾ ಕಲರ್ಫುಲ್ ಪುಸ್ತಕ ಇದಾಗಿದ್ದು, ಅತಿ ಕಡಿಮೆ ದರ ನಿಗದಿ ಮಾಡಲಾಗಿದೆ. ಇದನ್ನು ಮುದ್ರಿಸಲು ಪಬ್ಲಿಷರ್ ಮುಂದಾಗಲಿಲ್ಲ. ಅನೇಕ ಸ್ನೇಹಿತರು, ಇತರರು ಪುಸ್ತಕ ಪ್ರಕಟಣೆಗೆ ಸಹಕಾರ ಮಾಡಿದ್ದಾರೆ. ಪಬ್ಲಿಷರ್ ಬಳಿ ಇರುವೆ ಪುಸ್ತಕಗಳ ಬಗ್ಗೆ ಪ್ರಕಟಣೆ ಮಾಡಲು ಕೇಳಿಕೊಂಡಾಗ, ಅವರು ಇರುವೆ ಬಗ್ಗೆ ಎಂದು ನಿರಾಸಕ್ತಿ ತೋರಿಸಿದರು. ಹಾಗಾಗಿ, ನಾನು ಮತ್ತು ಅಜಯ್ ಪುಸ್ತಕ ಮುದ್ರಣಕ್ಕೆ ಮುಂದಾದೆವು. ಇಂತಹ ಪುಸ್ತಕ ದೇಶದಲ್ಲಿ ಮತ್ತೊಂದು ಸಿಗುವುದಿಲ್ಲ. 103 ವರ್ಷಗಳ ನಂತರ ಇರುವೆಗಳ ಬಗ್ಗೆ ಪುಸ್ತಕ ಪ್ರಕಟಣೆಯಾಗಿದ್ದು, ಈ ಮಾದರಿ ಪುಸ್ತಕ ದೊರೆಯುವುದಿಲ್ಲ. ಛಾಯಚಿತ್ರದ ಮೂಲಕ ಇರುವೆಗಳ ಬಗ್ಗೆ ವಿಶ್ಲೇಷಣೆ ನೀಡಿರುವುದರಿಂದ ಹೆಚ್ಚಾಗಿ ಮಾರಾಟವಾಗಿದೆ.

7. ಇರುವೆಗಳಲ್ಲಿ ಎಷ್ಟು ಪ್ರಕಾರದ ಇರುವೆಗಳನ್ನು ಕಾಣಬಹುದು?

ಇಡೀ ವಿಶ್ವದಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಕಾರದ ಇರುವೆಗಳಿದ್ದು, ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಪ್ರಕಾರದ ಇರುವೆಗಳನ್ನು ಹಾಗೂ ಬೆಂಗಳೂರಿನಲ್ಲಿ ಸುಮಾರು 110 ಪ್ರಕಾರದ ಇರುವೆಗಳನ್ನು ಕಾಣಬಹುದು. ವರ್ಜಿನ್ ಕ್ವೀನ್ಸ್, ಮೇಲ್ಸ್, ಮೊದಲನೇ ಬ್ಯಾಚ್ ವರ್ಕರ್ಸ್ ಪ್ರಕಾರದ ಇರುವೆಗಳನ್ನು ಕಾಣಬಹುದು. ಕಾರ್ಮಿಕ ಇರುವೆಗಳು, ಲ್ಯಾಕೀಪೆನಿಸ್ ಇರುವೆ, ಪಾಲಿಹ್ಯಾಚಿಸ್ ಹಾಲಿಡೇ, ವೀವರ್ ಆ್ಯಂಟ್ ಕಾಣಬಹುದು. ಈಗಾಗಲೇ 12.5 ಸಾವಿರ ಇರುವೆಗಳಿಗೆ ಹೆಸರು ನೀಡಲಾಗಿದೆ.

8. ನಮ್ಮ ದೇಶದಲ್ಲಿರುವ ಇರುವೆಗಳ ಪ್ರಕಾರಗಳೆಷ್ಟು?

ನಮ್ಮ ದೇಶದಲ್ಲಿ ಸುಮಾರು 700 ಕ್ಕೂ ಹೆಚ್ಚು ಪ್ರಕಾರದ ಇರುವೆಗಳಿವೆ. ಕೂಲಂಕುಷವಾಗಿ ಪರಿಶೀಲಿಸಿದರೆ, ಮತ್ತಷ್ಟು ಸಿಗಬಹುದು. ಆದರೆ ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಪ್ರಸ್ತುತ ಸುಮಾರು 700 ಇರಬಹುದು ಎಂದು ನುರಿತ ವಿಜ್ಞಾನಿಗಳು ಹೇಳಿದ್ದಾರೆ.

9. ಇರುವೆಗಳ ಕುರಿತು ಭವಿಷ್ಯದಲ್ಲಿ ಮತ್ತಷ್ಟು ಸಂಶೋಧನೆ ಕೈಗೊಳ್ಳುವ ಯೋಜನೆ ಇದೆಯೇ?
ಇರುವೆಗಳ ಕುರಿತು ಭವಿಷ್ಯದಲ್ಲಿ ಮತ್ತಷ್ಟು ಸಂಶೋಧನೆ ಕೈಗೊಳ್ಳುವ ಯೋಜನೆ ಇದೆ. ಆದರೆ, ಹೆಚ್ಚಿನ ಮಟ್ಟದಲ್ಲಿ ಸಂಶೋಧನೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದೊಂದು ನನ್ನ ಹವ್ಯಾಸವಾಗಿದೆಯೇ ಹೊರತು, ಇರುವೆಗಳ ಕುರಿತು ನಾನು ಕೆಲಸ ಮಾಡುತ್ತಿಲ್ಲ. ದಕ್ಷಿಣ ಭಾರತದಲ್ಲಿ ಇರುವೆಗಳ ಬಗ್ಗೆ ಸಂಶೋಧನೆ ಕೈಗೊಳ್ಳುವ ಚಿಂತನೆ ಇದೆ. ಆದರೆ ಅದಕ್ಕೆ ಸಾಕಷ್ಟು ಸಮಯ ಬೇಕು.

10. ಪರಿಸರ ವಿಜ್ಞಾನದ ವಿದ್ಯಾರ್ಥಿಗಳಿಗೆ ಇರುವೆಗಳಿಗೆ ಸಂಬಂಧಿಸಿದಂತೆ ಏನು ಹೇಳುತ್ತೀರಿ?

ಆಶ್ಚರ್ಯ ಮೂಡಿಸುವಂತಹ ಅನೇಕ ವಿಷಯಗಳು ಈ ಇರುವೆಗಳಲ್ಲೂ ಇವೆ. ಪರಿಸರಕ್ಕೆ ಇದರಿಂದಲೂ ಉಪಯುಕ್ತವಾಗುತ್ತದೆ. ಇದನ್ನು ಗಮನಿಸಿವುದರಿಂದ ಅನೇಕ ಮಾಹಿತಿಗಳು ಲಭ್ಯವಾಗುತ್ತದೆ. ಇರುವೆಗಳು ತುಂಬಾ ಸಣ್ಣದು ಎಂದು ನಿರಾಸಕ್ತಿ ತೋರಿಕೆ ಹೆಚ್ಚಿದೆ. ಆದರೆ, ತುಂಬಾ ಚಿಕ್ಕದಾಗಿದೆ ಎಂದು ನಿರಾಸಕ್ತಿ ತೋರಿಸಬಾರದು. ಎಲ್ಲಾ ಜೀವಿಗಳಿಂದ ಪರಿಸರಕ್ಕೆ ಅನುಕೂಲತೆಯಾಗುತ್ತದೆ. ಇರುವೆ ಕಂಡರೆ, ಅದನ್ನು ಕಾಲಲ್ಲಿ ಹೊಸಕಿ ಹಾಕುವ ಬದಲು ಅದರ ಚಲನವಲನ ಗಮನಿಸಿ ಅನೇಕ ವಿಷಯಗಳನ್ನು ಅರಿಯಲು ಮುಂದಾಗಬೇಕು.

ಸಂದರ್ಶನ: ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com