ಕಿರುಚಿತ್ರದ ಹಿರಿದಾರಿ- ಕಲ್ಕೂರರ ಕಾಣಿಕೆ

ಪ್ರಭಾವೀ ಮಾಧ್ಯಮಗಳಲ್ಲಿ ಶಾರ್ಟ್‌ಫಿಲ್ಮ್ (ಕಿರುಚಿತ್ರ )ಗಳು ಹೆಚ್ಚಿನ ಪ್ರಾಧಾನ್ಯತೆ...
ದೇವವ್ರತ ಕಲ್ಕೂರ
ದೇವವ್ರತ ಕಲ್ಕೂರ
Updated on

ಪ್ರಭಾವೀ ಮಾಧ್ಯಮಗಳಲ್ಲಿ ಶಾರ್ಟ್‌ಫಿಲ್ಮ್  (ಕಿರುಚಿತ್ರ )ಗಳು ಹೆಚ್ಚಿನ ಪ್ರಾಧಾನ್ಯತೆ ವಹಿಸುತ್ತವೆ. ಹೇಳಬೇಕಾದ ವಿಷಯವನ್ನು ಅಥವಾ ಸಂದೇಶವನ್ನು ಚಿಕ್ಕದಾಗಿ, ಚೊಕ್ಕವಾಗಿ ಹೇಳಿ ಬಿಡುವ ಕಿರುಚಿತ್ರಗಳು ಸಾಕಷ್ಟು ತಯಾರಾಗಿವೆ, ತಯಾರಾಗುತ್ತಲೇ ಇರುತ್ತವೆ. ಸಿನಿಮಾ ನಿರ್ದೇಶನಕ್ಕೆ ಕೈ ಹಾಕುವ ಮುನ್ನ ಕಿರುಚಿತ್ರಗಳನ್ನು ನಿರ್ಮಿಸಿ ಅನುಭವಗಳನ್ನು ಪಡೆದುಕೊಂಡ ಹಲವರು ನಮ್ಮೆಡೆಯಲ್ಲಿದ್ದಾರೆ. ಕೆಲವೊಂದು ಕಿರುಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೂ ಅದರ ನಿರ್ಮಾಪಕರು ಮಾತ್ರ ಎಲೆಮರೆ ಕಾಯಿಯಾಗಿಯೇ ಉಳಿದು ಬಿಡುತ್ತಾರೆ. ಹೀಗೆ ಎಲೆಮರೆ ಕಾಯಿಯಂತಿರುವ ಕಿರುಚಿತ್ರ ನಿರ್ಮಾಪಕ ದೇವವ್ರತ ಕಲ್ಕೂರ. ಸಿನಿಮಾರಂಗದ ಯಾವುದೇ ಹಿನ್ನೆಲೆ ಇಲ್ಲದೆ ಬಂದ ಬೆಂಗಳೂರು ನಿವಾಸಿಯಾದ ಕಲ್ಕೂರ ಅವರು ನಿರ್ಮಿಸಿದ ಎರಡು ಕಿರುಚಿತ್ರಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿವೆ. ಕನ್ನಡಪ್ರಭ ಡಾಟ್ ಕಾಂ ಗಾಗಿ ಕಲ್ಕೂರ ಅವರನ್ನು ಮಾತನಾಡಿಸಿದಾಗ, ಅವರು ತಮ್ಮ ಅನುಭವವನ್ನು ಹಂಚಿಕೊಂಡದ್ದು ಹೀಗೆ....

ಸಿನಿಮಾರಂಗಕ್ಕೆ ನಿಮ್ಮ ಪ್ರವೇಶ ಹೇಗಾಯ್ತು?
ನಾನು ಸಿನಿಮಾ ಹಿನ್ನೆಲೆಯಿಂದ ಬಂದವನಲ್ಲ. ಹೋಟೆಲ್ ವ್ಯವಹಾರ ನಡೆಸುತ್ತಿದ್ದ ನಾನು ಅಚಾನಕ್ ಆಗಿ ಸಿನಿಮಾರಂಗಕ್ಕೆ ಪ್ರವೇಶಿಸಬೇಕಾಗಿ ಬಂತು. ಮೊದಲು ಒಂದೂವರೆ ವರ್ಷಗಳ ಕಾಲ ಆ್ಯಡ್ ಫಿಲ್ಮ್‌ಗಳಲ್ಲಿ ಕೆಲಸ ಮಾಡಿದೆ.  ಇಲ್ಲಿಂದ ಸಿನಿಮಾ ಅಥವಾ ಆ್ಯಡ್ ಫಿಲ್ಮ್ ಗಳನ್ನು ಹೇಗೆ ನಿರ್ಮಿಸುತ್ತಾರೆ ಎಂಬುದರ ಬಗ್ಗೆ ಐಡಿಯಾ ಸಿಕ್ಕಿತು. ಹಲವರ ಪರಿಚಯವೂ ಆಯ್ತು. ಹಾಗೆ ನಾನು 2014 ರಲ್ಲಿ ಮೊದಲ ಕಿರುಚಿತ್ರ ನರ್ಚರ್ (Nurture)ನಿರ್ಮಿಸಿದೆ.


ಮೊದಲ ಕಿರುಚಿತ್ರದ ಬಗ್ಗೆ ಅನುಭವ?
ಮನಸ್ಸಲ್ಲಿ ಥಟ್ಟನೆ ಒಂದು ಕತೆ ಹೊಳೆಯಿತು. ಅದನ್ನು ಬರೆದು, ನನ್ನ ಗೆಳೆಯರ ಸಹಾಯದಿಂದ ಚಿತ್ರವನ್ನು ಶೂಟ್ ಮಾಡಿದೆ. ವಿಶೇಷವೇನೆಂದರೆ ನನ್ನ ಕಿರುಚಿತ್ರದಲ್ಲಿ ನಟಿಸಿದವರೆಲ್ಲರೂ ನನ್ನ ಪರಿಚಯಸ್ಥರು, ಗೆಳೆಯರು. ಯಾರೂ ಅನುಭವೀ ನಟರಲ್ಲ. ಇಂಥವರೇ ನನ್ನ ಸಿನಿಮಾದಲ್ಲಿ ನಟನೆ ಮಾಡಬೇಕು ಎಂಬ ಹಟ ನನಗಿಲ್ಲ. ನನ್ನ ಸುತ್ತಮುತ್ತಲಿರುವ ಜನರನ್ನೇ ಬಳಸಿಕೊಂಡೇ ಈ ಸಿನಿಮಾ ಶೂಟ್ ಮಾಡಿದ್ದು. ಮೊದಲ ಕಿರುಚಿತ್ರ ನರ್ಚರ್ (Nurture)ಇಂಗ್ಲೀಷ್ ನಲ್ಲಿ ಮಾಡಿದ್ದು. ಇದರ ಕತೆಯೇನೆಂದರೆ ಒಂದು ಪುಟ್ಟ ಮಗು ಕುಂಡದಲ್ಲಿ ಗಿಡ ನೆಟ್ಟು ಅದಕ್ಕೆ ಮಣ್ಣು, ನೀರು ಹಾಕಿ ನೀನು ಚೆನ್ನಾಗಿ ಬೆಳೆಯಬೇಕು, ನನ್ನನ್ನು ನೋಡಿಕೊಳ್ಳುವುದು ನೀನೇ ಆಲ್ವಾ? ಎಂದು ಗಿಡದ ಜತೆ ಸಂಭಾಷಣೆ ನಡೆಸುತ್ತದೆ. ಗಿಡದ ಜತೆ ಆ ಮಗು ನಡೆಸುವ ಸಂಭಾಷಣೆಯಲ್ಲೇ ನನ್ನ ಸಂದೇಶವಿದೆ. ನಾವು ಪುಟ್ಟ ಮಕ್ಕಳಿಗೆ ಊಟ ಮಾಡಿಸುವಾಗ ಚೆನ್ನಾಗಿ ತಿನ್ಬೇಕು, ತಿಂದ್ರೆ ಮಾತ್ರ ಸ್ಟ್ರಾಂಗ್ ಆಗುವುದು ಅಂತಾ ಹೇಳ್ತಿವಲ್ಲಾ? ಅದೇ ರೀತಿ ಆ ಪುಟ್ಟ ಮಗು ಗಿಡ ನೆಟ್ಟು ಅದಕ್ಕೆ ನೀರುಣಿಸಿ ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಹೀಗೆ ಮಕ್ಕಳಿಂದ ನಾವು ಕಲಿಯುವುದು ತುಂಬಾ ಇದೆ ಎನ್ನುವ ವಿಷಯ ಹೈಲೈಟ್ ಮಾಡಿಕೊಂಡು ಈ ಚಿತ್ರ ನಿರ್ಮಿಸಿದ್ದೇನೆ. ಚಿತ್ರ ನಿರ್ಮಿಸಿ ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಿದ್ದೆ. ಯಾಕೆಂದರೆ ನಮಗಿರುವ ಪ್ಲಾಟ್ ಫಾರಂ ಅಂದ್ರೆ ಯೂಟ್ಯೂಬ್. ಅಲ್ಲಿ ಜನರ ಮೆಚ್ಚುಗೆ ಸಿಕ್ಕಿದ್ದು ಮಾತ್ರವಲ್ಲದೆ ಫಿಲ್ಮ್ ಫೆಸ್ಟಿವಲ್‌ನಲ್ಲೂ ಪ್ರದರ್ಶಿತಗೊಂಡಿತು.


ನಿಮ್ಮ ಎರಡನೇ ಚಿತ್ರ 'ಕಾಣಿಕೆ' ಮತ್ತು 'ನರ್ಚರ್' ಲಾಹೋರ್ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈ ಯಶಸ್ಸಿನ ಬಗ್ಗೆ ಹೇಳಿ?

ನರ್ಚರ್ ಮತ್ತು ಕಾಣಿಕೆ ಲಾಹೋರ್ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ- 2014ರಲ್ಲಿ ಪ್ರದರ್ಶನಗೊಂಡಿರುವುದು ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಪ್ರಸ್ತುತ ಫಿಲ್ಮ್ ಫೆಸ್ಟಿವಲ್ ನಲ್ಲಿ  ಹಾಗು ಅಮೆರಿಕದಲ್ಲಿ ವೆಸ್ಟ್ ವೆರ್ಜೀನಿಯಾ ಫಿಲ್ಮ್ ಮೇಕರ್ಸ್ ಫೆಸ್ಟಿವೆಲ್ ನಲ್ಲಿ ಕಾಣಿಕೆ ಓಪನಿಂಗ್ ಫಿಲ್ಮ್ ಆಗಿ ಪ್ರದರ್ಶನಗೊಂಡಿತ್ತು. ಕೊಚ್ಚಿಯಲ್ಲಿ ನಡೆದ  ಸ್ಕ್ರಿಪ್ಟ್ ಇಂಟರ್‌ನ್ಯಾಷನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್, ಗೋವಾ ಫಿಲ್ಮ್ ಫೆಸ್ಟಿವಲ್, ಮಹಾರಾಷ್ಟ್ರ ಶಾರ್ಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿದ್ದು ಇನ್ನಷ್ಟು ಖುಷಿಕೊಟ್ಟ ವಿಚಾರ. ಯೂಟ್ಯೂಬ್ ನಲ್ಲಿ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಮಾತ್ರವಲ್ಲದೆ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಸಿಕ್ಕಿದ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆ ಅದ್ಭುತವಾಗಿತ್ತು.
ಕಾಣಿಕೆ ಕಿರುಚಿತ್ರದ ಬಗ್ಗೆ ಹೇಳುವುದಾದರೆ ಅದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ್ದು. ಮರಣಶಯ್ಯೆಯಲ್ಲಿ ಮಲಗಿರುವ ಅಪ್ಪನಲ್ಲಿ ಅವನ ಮಗ ನಡೆಸುವ ಸಂಭಾಷಣೆಯೇ ಚಿತ್ರದ ಜೀವಾಳ. ತನ್ನ ಅಮ್ಮನ ಜತೆ ಅಪ್ಪ ಹೇಗೆ ವರ್ತಿಸುತ್ತಿದ್ದ ಎಂಬುದು ಪುಟ್ಟ ಹುಡುಗನ ಮೇಲೆ ಯಾವ ರೀತಿ ಪ್ರಭಾವ ಬೀರಿದೆ? ಮಕ್ಕಳ ಮುಗ್ಧ ಮನಸ್ಸು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ? ಎಂಬುದನ್ನು ನಾನಿಲ್ಲಿ ತೋರಿಸಿದ್ದೇನೆ.


ನಿಮ್ಮ ಮುಂದಿನ ಚಿತ್ರ?
ಡಿ ಭಾಯಿ (D Bhai) ಅನ್ನೋ ಕಾಮಿಡಿ ಚಿತ್ರ. ಇಲ್ಲಿ ನಾಯಿಯೇ ಸಿನಿಮಾದ ಪ್ರಧಾನ ಪಾತ್ರ.  ನಾಯಿಗೆ ರಾಜಕಾರಣಿಯ ಡ್ರೆಸ್ ಹಾಕಿಸಿ ಅದನ್ನು ಗಾಂಧಿ ಬಜಾರ್ ನಲ್ಲಿ ಬಿಟ್ಟು ಶೂಟ್ ಮಾಡಿದ್ದೇವೆ. ಶೀಘ್ರದಲ್ಲೇ ಈ ಕಿರುಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಈ ಬಗ್ಗೆ ಉತ್ಸುಕನಾಗಿದ್ದೇನೆ.

ಎರಡು ಸಿನಿಮಾಗಳಲ್ಲಿ ಗಂಭೀರ ವಿಷಯವನ್ನು ಹೇಳಿ, ಮೂರನೇ ಸಿನಿಮಾ ಕಾಮಿಡಿ ಯಾಕೆ?
ಇದಕ್ಕೆ ಪ್ರತ್ಯೇಕ ಕಾರಣಗಳೇನೂ ಇಲ್ಲ. ಜನ ರಿಲ್ಯಾಕ್ಸ್ ಆಗಲು ಸಿನಿಮಾ ನೋಡ್ತಾರೆ. ಆ ಹೊತ್ತು ಗಂಭೀರ ಚಿಂತನೆಗಳಿರುವ ಸಿನಿಮಾ ನೋಡೋದು ಕಡಿಮೆ. ಹಾಗಾಗಿ ಕಾಮಿಡಿ ಮೂಲಕವೇ ಗಂಭೀರ ವಿಷಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಾನು ಡಿ ಭಾಯಿ ಸಿನಿಮಾ ನಿರ್ಮಿಸಿದ್ದೇನೆ.

ಕಿರುಚಿತ್ರ ನಿರ್ಮಾಣ ಅಲ್ಲದೆ ಬೇರೇನು ಮಾಡುತ್ತಿದ್ದೀರಿ?
ನಾನೀಗ ಬಿ .ರಾಮಮೂರ್ತಿ ಅವರ ಜತೆ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದೀನಿ. ಈ ಹಿಂದೆ ಮಲಯಾಳಂ ಸಿನಿಮಾ ಬ್ಯಾಂಗಲೋರ್ ಡೇಸ್ ಮೇಕಿಂಗ್ ನಲ್ಲಿಯೂ ಸಹಾಯ ಮಾಡಿದ್ದೆ.

ಕನ್ನಡದಲ್ಲಿ ತಯಾರಾಗುವ ಕಿರುಚಿತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕನ್ನಡದಲ್ಲಿ ಸಾಕಷ್ಟು ಕಿರುಚಿತ್ರಗಳು ತಯಾರಾಗುತ್ತಿವೆ. ಆದರೆ ಅಷ್ಟೊಂದು ಗುಣಮಟ್ಟ ಇರಲ್ಲ. ಉತ್ತಮ ಸಂದೇಶವಿರುವ, ಗುಣಮಟ್ಟವಿರುವ ಚಿತ್ರಗಳನ್ನು ಮಾಡಿದರೆ ಮಾತ್ರ ಜನ ನೋಡ್ತಾರೆ. ನನ್ನ ಪ್ರಕಾರ ಕತೆ ಸಿಂಪಲ್ ಇರಬೇಕು. ನಾವು ಏನೇ ಹೇಳುತ್ತಿದ್ದರೂ ಅದನ್ನು ಸಿಂಪಲ್ ಆಗಿ ಹೇಳಬೇಕು. ಕಿರುಚಿತ್ರ ನಿರ್ಮಾಣಕ್ಕೆ ಮುನ್ನ ಸ್ಕ್ರಿಪ್ಟ್ ನ್ನು ನನ್ನ ಫ್ರೆಂಡ್ಸ್ ಗಳಿಗೆ ಕೊಟ್ಟು ಅವರ ಅಭಿಪ್ರಾಯ ಕೇಳುತ್ತೇನೆ. ಅವರಿಗೆ ಆ ಕತೆ ಯಾವ ರೀತಿಯಲ್ಲಿ ಇಷ್ಟವಾಗುತ್ತದೆ ಎಂಬುದನ್ನು ಗಮನಿಸುತ್ತೇನೆ. ಕತೆ ಯಾವುದೇ ಆಗಿರಲಿ ಅದು ಭಾವನೆಗಳನ್ನು ಟಚ್ ಮಾಡಬೇಕು. ಅಂಥಾ ಕತೆಗಳನ್ನೇ ನಾನು ಕಿರುಚಿತ್ರಕ್ಕೆ ಬಳಸುತ್ತೇನೆ.

ಮುಂದಿನ ಯೋಜನೆ ಏನು?
ಸದ್ಯ ಕಿರುಚಿತ್ರದ ಮೂಲಕ ಸಿನಿಮಾದ ಪಾಠಗಳನ್ನು ಕಲಿಯುತ್ತಿದ್ದೇನೆ. ಸಿನಿಮಾ ಮಾಡಬೇಕಾದರೆ ಅನುಭವ ಬೇಕು. ಆ ಅನುಭವಗಳನ್ನು ಪಡೆಯಲು ಶ್ರಮಿಸುತ್ತಿದ್ದೇನೆ.  ಕಿರುಚಿತ್ರಗಳ ಮೂಲಕ ಪ್ರೇಕ್ಷಕರನ್ನು ಕ್ರಿಯೇಟ್ ಮಾಡ್ತೀನಿ. ಮುಂದಿನ ದಿನಗಳಲ್ಲಿ ಯಾರಾದರೂ ನನಗೆ ಕೆಲಸ ಕೊಡ್ಬೇಕಾದ್ರೆ ಅವರು ನನ್ನ ಅನುಭವವನ್ನು ನೋಡ್ತಾರೆ. ಅವರಿಗೆ ನನ್ನ ಕೆಲಸದ ಮೇಲೆ ಭರವಸೆ ಬರಬೇಕು. ನಾನು ಚೆನ್ನಾಗಿ ಕೆಲಸ ಮಾಡಬಲ್ಲೆ ಎಂಬ ಭರವಸೆ ನಿರ್ಮಾಪಕರಿಗೆ ಬಂದ್ರೆ ಮಾತ್ರ ಅವರು ನನಗೆ ಸಿನಿಮಾ ನಿರ್ದೇಶನದ ಜವಾಬ್ದಾರಿ ಕೊಡ್ತಾರೆ ಅಲ್ವಾ? ನನ್ನ ಶ್ರಮವೇ ಮುಂದಿನ ದಾರಿಯನ್ನು ಸುಗಮ ಮಾಡುತ್ತದೆ ಎಂಬ ನಂಬಿಕೆಯಿದೆ. ಈ ನಿಟ್ಟಿನಲ್ಲಿ ಅವಕಾಶಗಳನ್ನು ಬಳಸುತ್ತಾ ಅನುಭವಗಳನ್ನು ಪಡೆದುಕೊಳ್ಳುತ್ತಿದ್ದೇನೆ.

ಸಂದರ್ಶನ: ರಶ್ಮಿ ಕಾಸರಗೋಡು







Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com