ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್

ಜಗದೀಶ್ ಶೆಟ್ಟರ್ ಸಂದರ್ಶನ
ಕನ್ನಡಪ್ರಭ.ಕಾಮ್‌ ತಂಡದೊಂದಿಗೆ ಜಗದೀಶ್ ಶೆಟ್ಟರ್
ಕನ್ನಡಪ್ರಭ.ಕಾಮ್‌ ತಂಡದೊಂದಿಗೆ ಜಗದೀಶ್ ಶೆಟ್ಟರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣವನ್ನೇ ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದ್ದು, ಈ ಸಂಬಂಧ ಸಿಎಂ ವಿರುದ್ಧವೇ ಕೇಸ್ ದಾಖಲಿಸಲು ರಾಜ್ಯಪಾಲರ ಅನುಮತಿ ಪಡೆಯಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಕನ್ನಡಪ್ರಭ.ಕಾಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯ ಖಚಿತಪಡಿಸಿದ್ದಾರೆ.

ಒಂದು ವೇಳೆ ರಾಜ್ಯಪಾಲರು ಪ್ರಕರಣ ದಾಖಲಿಸಲು ಅನುಮತಿ ನೀಡದಿದ್ದರೆ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ
ಬಿಜೆಪಿ ಕೇಂದ್ರ ನಾಯಕರ ಅನುಮತಿ ಪಡೆದಿದ್ದು, ಈಗ ರಾಜಭವನದ ಅನುಮತಿ ಪಡೆಯಲು ಮುಂದಾಗಿದೆ.

ಅರ್ಕಾವತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧದ ನಿಮ್ಮ ಹೋರಾಟ ಎಲ್ಲಿಗೆ ಬಂತು?
ಸರ್ಕಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿದಿದೆ. ಹಂತ ಹಂತವಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ್ದೇವೆ.

ಅಲ್ಲದೆ ಈ ಸಂಬಂಧ ಸಿಎಂ ವಿರುದ್ಧವೇ ಕೇಸ್ ದಾಖಲಿಸಲು ನಾವು ನಿರ್ಧರಿಸಿದ್ದು, ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶೆಟ್ಟರ್ ತಿಳಿಸಿದ್ದಾರೆ.

ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ ಸರ್ಕಾರದ ಕ್ರಮ ನಮಗೆ ತೃಪ್ತಿ ತಂದಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಸಿಎಂ ಸಿದ್ದರಾಮಯ್ಯ ನನ್ನ ವಿರುದ್ದ ಯಾವುದೇ ಆರೋಪಗಳಿಲ್ಲ ಅಂತ ಬೀಗುತ್ತಿದ್ದರು. ಬಿಜೆಪಿ ಈ ವಿರುದ್ದ ಆರೋಪ ಮಾಡಿದ ಬಳಿಕ, ಮಾಧ್ಯಮಗಳು ಬೆಳಕು ಚೆಲ್ಲಲು ಬಿಜೆಪಿ ಮೂಲಕಾರಣ. ಈ ವಿರುದ್ದ ಹಂತಹಂತವಾಗಿ ಹೋರಾಟ ಮಾಡ್ತಾ ಇದಿವಿ.

ಪ್ರತಿಪಕ್ಷವಾಗಿ ಬಿಜೆಪಿಯ ಹೋರಾಟ ತೃಪ್ತಿ ತಂದಿದೆಯೇ?
ಬಿಜೆಪಿ 5 ವರ್ಷಗಳ ಕಾಲ ಆಡಳಿತ ಪಕ್ಷವಾಗಿ ಕಾರ್ಯನಿರ್ವಹಿಸಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಆಂತರಿಕ ಗೊಂದಲಗಳಿಂದಾಗಿ ಜನರ ಮನ್ನಣೆ ಸಿಗಲಿಲ್ಲ ಆದ ಕಾರಣ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ.

ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿಪಕ್ಷ ವಾಗಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಸುವರ್ಣ ಸೌಧ ಅಧಿವೇಶನದ ವೇಳೆ ಹಲವು ವಿಚಾರಗಳ ಕುರಿತು ಬಿಜೆಪಿ ಧ್ವನಿ ಎತ್ತಿದೆ. ಪ್ರಬಲವಾಗಿ ಹೋರಟ ಮಾಡಿರುವ ಬಗ್ಗೆ ನಮಗೆ ತೃಪ್ತಿದಾಯಕವಾಗಿದೆ.

ಬಸ್ ದರ ಇಳಿಕೆ ವಿಚಾರ ಬಿಜೆಪಿ ಗಂಭೀರವಾಗಿ ಪರಿಗಣಿಸಲಿಲ್ಲ?
ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಬಿಜೆಪಿ ಪ್ರಶ್ನೆ ಹಾಕಿದ್ದಾಗ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು, ಹೊಸವರ್ಷದಿಂದ ದರ ಇಳಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಳಿಸಿದ್ದಾರೆ. ಆದರೆ ಈ ದರ ಇಳಿಕೆ ಅಷ್ಟು ತೃಪ್ತಿಕರವಾಗಿಲ್ಲ. ಮುಂದಿನ ಅಧಿವೇಶನದಲ್ಲಿ ಉಗ್ರ ಹೋರಾಟ ಮಾಡ್ತೇವೆ. ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡ್ತೇವೆ.

ಚಳಿಗಾಲ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಮರ್ಥ ಹೋರಾಟ ಕಾಣಲಿಲ್ಲ?
ಚರ್ಚೆಗೆ ಸ್ಪೀಕರ್ ಹೆಚ್ಚು ಸಮಯವಕಾಶ ನೀಡಿಲಿಲ್ಲ್ಲ. ಆದರೂ ಕಬ್ಬು ಬೆಳೆಗಾರರ ಸಮಸ್ಯೆ, ಮರಳು ಮಾಫಿಯಾ, ಉತ್ತರ ಕರ್ನಾಟಕ ಅಭಿವೃದ್ಧಿ ಬಗೆಗಿನ ನಿರ್ಲಕ್ಷ್ಯ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಹೋರಾಟ ತೃಪ್ತಿದಾಯಕವಾಗಿತ್ತು.

ಕಳಂಕಿತ ಸಚಿವರ ವಿರುದ್ಧದ ಹೋರಾಟ ಎಲ್ಲಿಗೆ ಬಂತು?
ಬೆಳಗಾವಿ ಅಧಿವೇಶನದಲ್ಲೂ ನಾವು ಕಳಂಕಿತ ಸಚಿವರ ಬಗ್ಗೆ ಚರ್ಚೆ ಅವಕಾಶ ಕೇಳಿದ್ದೇವು. ಆದರೆ ಸ್ಪೀಕರ್ ಅದಕ್ಕೆ ಅವಕಾಶ ನೀಡಲಿಲ್ಲ. ಆದರೂ ಕಳಂಕಿತ ಸಚಿವರ ವಿರುದ್ಧದ ನಮ್ಮ ಹೋರಾಟವನ್ನು ನಾವು ಕೈ ಬಿಟ್ಟಿಲ್ಲ. ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸುತ್ತೇವೆ.

ನಿಮ್ಮ ವಿರುದ್ಧವೂ ಹಲವು ಭೂ ಹಗರಣಗಳ ಆರೋಪ ಇದೆ?
ನನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳು. ನಮ್ಮ ಮೇಲೆ ಒತ್ತಡ ಹೇರುವ ಸಲುವಾಗಿ, ಈ ಆರೋಪಗಳನ್ನು ಮಾಡಲಾಗುತ್ತಿದೆ ಮತ್ತು ನನ್ನ ವಿರುದ್ಧ ಅವರು ಎಷ್ಟೇ ಕೇಸ್ ದಾಖಲಿಸಿದರೂ ನಾನು ಹೆದರುವುದಿಲ್ಲ.

ನಾನು ಮುಖ್ಯಮಂತ್ರಿಯಾಗಿದ್ದಾಗ ಹೈಕೋರ್ಟ್ ನಿರ್ದೇಶನದಂತೆ ಭೂಮಿ ಮಂಜೂರು ಮಾಡಿದ್ದೇನೆ. ಅದರಲ್ಲಿ ನನ್ನದೇನು ತಪ್ಪಿಲ್ಲ. ಆ ಎಲ್ಲಾ ಪ್ರಕರಣಗಳು ಈಗ ನ್ಯಾಯಾಲಯದಲ್ಲಿರುವುದರಿಂದ ನಾನು ಆ ಬಗ್ಗೆ ಹೆಚ್ಚಿಗೆ ಏನೂ ಹೇಳುವುದಿಲ್ಲ.

ಸಿಎಂ ವಿರುದ್ಧದ ಅರ್ಕಾವತಿ ಆರೋಪ ಮಾಡುತ್ತಿದ್ದ ಶೆಟ್ಟರ್, ತಮ್ಮ ವಿರುದ್ದ ಶ್ರೀಗಂಧ ಕಾವಲು ಭೂಮಿ ಮಂಜೂರು ಆರೋಪ ಬಂದೊಡನೆ, ಅರ್ಕಾವತಿ ವಿರುದ್ದ ತಮ್ಮ ಹೋರಾಟ ಸ್ಥಗಿತವಾದಂತೆ ಕಾಣುತ್ತಿದೆ?
ನಮ್ಮ ಹೋರಾಟವನ್ನು ಕೈಬಿಟ್ಟಿಲ್ಲ. ಅದನ್ನು ಹಂತಹಂತವಾಗಿ ಹೋರಾಟ ಮಾಡುತ್ತಿದ್ದೇವೆ. ಸೋಮಣ್ಣ ಅರ್ಕಾವತಿ ಬಗ್ಗೆ ದಾಖಲೆ ಬೀಡುಗಡೆ ಮಾಡಿದ್ದಾರೆ. ಕಾನೂನು ಹೋರಾಟಕ್ಕೆ ಸಮಯವಕಾಶ ಬೇಕಾಗಿದೆ.

ರಾಜ್ಯ ನಾಯಕತ್ವ ವಿಚಾರದಲ್ಲಿ ಶೆಟ್ಟರ್ ಅಥವಾ ಯಡಿಯೂರಪ್ಪ?
ಇಲ್ಲಿ ವ್ಯಕ್ತಿಗೆ ಪ್ರಾಮುಖ್ಯತೆ ಇಲ್ಲ. ಪಕ್ಷ ಮುಖ್ಯ. ನಾವೆಲ್ಲ ಸಾಮೂಹಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷ ಸಂಘಟನೆಗಾಗಿ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ.

ಸುದರ್ಶನ ವಿರುದ್ಧ ನಿಮ್ಮ ಮುಂದಿನ ಹೋರಾಟ ಹೇಗಿರುತ್ತದೆ?
ಅದರ ವಿರುದ್ದ ಬಿಜೆಪಿ ದಾಖಲೆ ಬಿಡುಗಡೆ ಮಾಡಿದೆ. ಇದರಿಂದಾಗಿ ಪ್ರಕರಣವನ್ನು ಲೋಕಾಯುಕ್ತ ಅಂಗಳಕ್ಕೆ ಕೊಂಡೊಯ್ಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮುಂದೆ ರಾಜ್ಯಪಾಲರು ಏನೂ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಆಧರಿಸಿ ಮುಂದಿನ ಹೋರಾಟಕ್ಕೆ ಸಿದ್ಧವಾಗುತ್ತೇವೆ.

ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದಿದ್ದಾರೆ, ಇದಕ್ಕೆ ನಿಮ್ಮ ತಯಾರಿ?
ಸದಸ್ಯತ್ವ ಅಭಿಯಾನವನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಬಿಜೆಪಿ ಒಂದು ಬಿಜೆಪಿ ಸದಸ್ಯರನ್ನು ಹೊಂದುವ ಗುರಿ ಹೊಂದಲಾಗಿದೆ. ಇದಲ್ಲದೆ, ಜನಾಂದೋಲನ. ಜನಪರ ಹೋರಾಟಗಳ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ.


ಮತ್ತೆ ನಿಮ್ಮ ಶಾಸಕರು ಸದನದಲ್ಲಿ ಮೊಬೈಲ್ ವೀಕ್ಷಣೆ ಮಾಡಿದ್ದು, ಬಿಜೆಪಿ ಶಾಸಕರಿಗೆ ಪಕ್ಷದ ಮೇಲಿರುವ ಅಸಡ್ಡೆಯೇ?
ಇದು ಬಿಜೆಪಿ ಪಕ್ಷದ ಕಪ್ಪು ಚುಕ್ಕೆ. ಕ್ಷಮಾಪಣೆ ಕೇಳಿದ್ದಾರೆ. ಬಿಜೆಪಿ ಸಹ ಇದನ್ನು ಖಂಡಿಸಿದೆ. ಸದನದಲ್ಲಿ ಯಾರೇ ಅಸಭ್ಯವಾಗಿ ನಡೆದುಕೊಂಡರೂ ತಪ್ಪೆ. ಆ ಬಗ್ಗೆ ನಮ್ಮ ಎಲ್ಲಾ ಶಾಸಕರಿಗೂ ಎಚ್ಚರಿಕೆ ನೀಡಿದ್ದು. ಮುಂದೆ ಮತ್ತೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 'ಘರ್ ವಾಪ್ಸಿ' ಆಂದೋಲನ ಹೆಚ್ಚಾಗುತ್ತಿದೆ?
ಈ ಆಂದೋಲನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಮತ್ತು ಇದಕ್ಕೆ ಆರ್‌ಎಸ್‌ಎಸ್‌ನ ಬೆಂಬಲವೂ ವಿಲ್ಲ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ರಾಜ್ಯಕ್ಕಾದ ಪ್ರಯೋಜನಗಳೇನು?
ರಾಜ್ಯಕ್ಕೆ ಅಂತ ಪ್ರತ್ಯೇಕ ಯೋಜನಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಕೇಂದ್ರ ಬಿಜೆಪಿಯಿಂದ ದೇಶದ ಸರ್ವಾಂಗೀಣ ಅಭಿವೃದ್ದಿಯಾಗುತ್ತಿದೆ. ಜಿಡಿಪಿ ಗ್ರೋತ್ ಉತ್ತಮ ಅಭಿವೃದ್ದಿ, ಹಣದುಬ್ಬರ ನಿಯಂತ್ರಣ, ಇಂಧನ ತೈಲ ಬೆಲೆ ಇಳಿಕೆಯಾಗಿದೆ.

ರಾಜ್ಯದ ಅಭಿವೃದ್ದಿಗಾಗಿ ಕೇಂದ್ರದ ಮುಂದಿರುವ ನಿಮ್ಮ ಬೇಡಿಕೆ ಏನು?
ಕೇಂದ್ರದಿಂದ ಇದುವರೆಗೂ ಮಂಜೂರಾಗಿರುವ ಯೋಜನೆಗಳನ್ನು ರಾಜ್ಯ ಸರ್ಕಾರ ಕಾರ್ಯಗತಗೊಳಿಸಿದರೆ ಸಾಕು. ನಮ್ಮ ಬೇಡಿಕೆಗಳನ್ನು ಮುಂದಿನ ಬಜೆಟ್ ವೇಳೆ ಪ್ರಸ್ತಾಪಿಸುತ್ತೇವೆ.

ರಾಜ್ಯ ಸರ್ಕಾರ ಜನಪರಕಾರ್ಯಗಳು ಜಾರಿಗೆ ತಂದಿದೆ. ಉದಾ ಒಂದು ರೂಪಾಯಿಗೆ ಅಕ್ಕಿ, ಮೊಬೈಲ್ ಓನ್ ಕರ್ನಾಟಕ ಇತ್ಯಾದಿ. ಆದರೂ ಕಾಂಗ್ರೆಸ್ ಮೇಲೆ ಬಿಜೆಪಿಗೆ ಯಾಕೇ ಆಕ್ರೋಶ?
ಒಂದು ರೂಪಾಯಿ ಅಕ್ಕಿ ಯೋಜನೆ ಪ್ರಯೋಜನಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ. ಸಮರ್ಥ ಫಲಾನುಭವಿಗಳಿಗೆ ಯೋಜನೆ ಲಾಭ ದೊರೆಯುತ್ತಿಲ್ಲ. ಬ್ಲಾಕ್ ಮಾರ್ಕೆಟ್‌ನಲ್ಲಿ ಅಕ್ಕಿ ಮಾರಾಟವಾಗುತ್ತಿದೆ. ಜನಪ್ರಿಯತೆಗಾಗಿ ಕಾಂಗ್ರೆಸ್ ಸರ್ಕಾರ ಇಂತಹ ಯೋಜನೆಗಳನ್ನು ಜಾರಿ ತಂದಿದೆ ಅಷ್ಟೆ.

ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರಿಯಾದ ಅನುದಾನ ಬಿಡುಗಡೆಯಾಗುತ್ತಿಲ್ಲ. ಹೊಸ ರಸ್ತೆಗಳು ಇಲ್ಲ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳ ಕಾಮಗಾರಿಗಳೇ ಇನ್ನೂ ನಡೆಯುತ್ತಿದೆ.

ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಭಾಗ್ಯಲಕ್ಷ್ಮಿ ಯೋಜನೆ, ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಮಹತ್ವದ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಗೃಹ ಸಚಿವರೆ ಸಂಪೂರ್ಣ ವಿಫಲರಾಗಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಕೆಲ ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ.

ರಾಜ್ಯದ ಪ್ರಮುಖ ಹೆದ್ದಾರಿಗಳಿಗೆ ಟೋಲ್ ವಿಧಿಸುವ ರಾಜ್ಯ ಸರ್ಕಾರದ ಯೋಜನೆ ಬಗ್ಗೆ ನಿಮ್ಮ ಪ್ರತಿಕ್ರಿಯೆ?
ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುವಂತ ಪ್ರಯತ್ನ. ನಮ್ಮ ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲೂ ಈ ಕುರಿತು ಪ್ರಸ್ತಾವನೆ ಬಂದಿತ್ತು. ಆದರೆ ಜನತೆಯ ಹಿತದೃಷ್ಟಿಯಿಂದ ನಾವು ಅದನ್ನು ಕೈಬಿಟ್ಟಿದ್ದೆವು. ಈಗ ಅದನ್ನು ಜಾರಿಗೆ ತರಲು ಮುಂದಾಗಿರುವ ಸರ್ಕಾರ ಕ್ರಮವನ್ನು ನಾವು ವಿರೋಧಿಸುತ್ತವೆ.

-ಲಿಂಗರಾಜ್ ಬಡಿಗೇರ್/ಲಕ್ಷ್ಮಿ. ಆರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com