ಪಾರದರ್ಶಕತೆಯ ಪ್ರತೀಕ ನಮ್ಮ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ

ಪಾರದರ್ಶಕತೆಯಿಂದ ಮಾತ್ರ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎಂಬ ಉದ್ದೇಶದಿಂದ ಭಾರತ ಸರ್ಕಾರ ಇ-ಆಡಳಿತದ ಮೂಲಕ ಕಾಗದರಹಿತ ವ್ಯವಹಾರ ಅನುಷ್ಠಾನಕ್ಕಾಗಿ...
ಕೆ.ಎ.ದಯಾನಂದ, ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕೆ.ಎ.ದಯಾನಂದ, ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪಾರದರ್ಶಕತೆಯಿಂದ ಮಾತ್ರ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎಂಬ ಉದ್ದೇಶದಿಂದ ಭಾರತ ಸರ್ಕಾರ ಇ-ಆಡಳಿತದ ಮೂಲಕ ಕಾಗದರಹಿತ ವ್ಯವಹಾರ ಅನುಷ್ಠಾನಕ್ಕಾಗಿ ನೂರಾರು ಕೋಟಿ ರುಪಾಯಿ ಖರ್ಚು ಮಾಡುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಆಸಕ್ತಿಯಿಂದ ಜಾರಿಗೊಳಸದಿರುವುದು ದುರದೃಷ್ಟಕರ.

ಇಡೀ ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಕಚೇರಿಗಳು ಮಾತ್ರ ಇ-ಆಫೀಸ್ ಅನ್ನು ಅಳವಡಿಸಿಕೊಂಡಿದ್ದು, ಆ ಪೈಕಿ ನಮ್ಮ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವೂ ಒಂದು.

ಅವ್ಯವಸ್ಥೆಯ ಆಗರವಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನಾಲಯದ ಪ್ರಧಾನ ಕಚೇರಿ ಈಗ ಸಂಪೂರ್ಣ ಇ-ಆಫೀಸ್ ಆಗಿ ಪರಿವರ್ತನೆಯಾಗಿದೆ. ಈ ಮೂಲಕ ಪೇಪರ್‌ಲೆಸ್ ಹಾಗೂ ಪಾರದರ್ಶಕ ಆಡಳಿತ ನೀಡಲು ಮುಂದಾಗಿರುವ ನಿರ್ದೇಶಕ ಕೆ.ಎ.ದಯಾನಂದ ಅವರು, ಅದನ್ನು ಇಲಾಖೆಯ ಕೆಳ ಹಂತದ ಕಚೇರಿಗಳಲ್ಲೂ ಜಾರಿಗೊಳಿಸುವುದಾಗಿ ಕನ್ನಡಪ್ರಭ.ಕಾಮ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ನಿಮ್ಮ ಕಚೇರಿ ಪೇಪರ್‌ಲೆಸ್ ಮಾಡಲು ಸಾಧ್ಯವಾಗಿದ್ದು ಹೇಗೆ?
ಇಚ್ಛಾಶಕ್ತಿ ಕಾರಣ. ಇ-ಆಫೀಸ್ ಜಾರಿಗೆ ತಂದ ಮೊದಲ ದಿನದಿಂದಲೇ ನಾವು ಹಾರ್ಡ್‌ಫೈಲಿಂಗ್ ನಿಲ್ಲಿಸಿದೆವು. ಎಷ್ಟೇ ಕಷ್ಟವಾದರೂ ಇ-ಆಫೀಸ್‌ನಲ್ಲೇ ಕೆಲಸ ಮಾಡಿ. ಇಲ್ಲದಿದ್ದರೆ ರಜೆ ಹಾಕಿ ಮನೆಗೆ ಹೋಗಿ ಎಂದು ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರಿಂದ ಕಚೇರಿ ಪೇಪರ್‌ಲೆಸ್ ಮಾಡಲು ಸಾಧ್ಯವಾಯಿತು ಮತ್ತು ಇದಕ್ಕೆ ನಮ್ಮ ಸಚಿವರು (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ) ಸಹ ತುಂಬಾ ಸಹಕಾರ ನೀಡಿದರು.

ನೀವು ಇ-ಆಫೀಸ್ ಅಳವಡಿಸಿಕೊಂಡಿರುವ ಉದ್ದೇಶ?
ಆಡಳಿತ ಹೆಚ್ಚು ಪಾರದರ್ಶಕವಾಗಿರಲಿ ಮತ್ತು ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ. ಸಾರ್ವಜನಿಕರ ಟಪಾಲ್‌ಗಳನ್ನು ನೇರವಾಗಿ ಸ್ಕ್ಯಾನ್ ಮಾಡುವ ಮೂಲಕ ಸಂಬಂಧಿಸಿದ ಕೇಸ್ ವರ್ಕರ್‌ಗೆ ಕಡತ ರವಾನೆಯಾಗುತ್ತೆ. ಹೀಗೆ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವ ಎಲ್ಲಾ ಕಡತಗಳನ್ನು ನಾನು ಕ್ಷಣಮಾತ್ರದಲ್ಲೇ ನೋಡಬಹುದು. ಮತ್ತು ಬಾಕಿ ಉಳಿಸಿಕೊಂಡಿರುವ ಕಡತಗಳ ಬಗ್ಗೆ ವಿಚಾರಸಬಹುದು. ಇಲ್ಲಿ ಒಂದು ಬಾರಿ ಕಡತಕ್ಕೆ ಅನುಮೋದನೆ ನೀಡಿದರೆ, ಅದನ್ನು ಮತ್ತೆ ತಿದ್ದಲು ಬರುವುದಿಲ್ಲ. ಆಗ ನಾವು ಮತ್ತೆ ಹೊಸ ಕಡತ ಸಿದ್ಧಪಡಿಸಬೇಕು. ತಪ್ಪಾದ ಕಡತ ಮತ್ತು ಸರಿಯಾದ ಕಡತ ಎರಡೂ ಸರ್ವರ್‌ನಲ್ಲಿ ದಾಖಲಾಗುತ್ತೆ. ನನ್ನ ನಂತರ ಬಂದ ನಿರ್ದೇಶಕರು ಸಹ ಎಲ್ಲಿ ಏನೂ ತಪ್ಪಾಗಿತ್ತು ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇಲ್ಲಿ ಯಾವುದನ್ನು ನಾವು ಮುಚ್ಚಿಡಲು ಸಾಧ್ಯವಿಲ್ಲ. ಹೀಗಾಗಿ ಇದು ತುಂಬಾ ಪಾರದರ್ಶಕ ಅಂತ ನಾನು ಹೇಳಬಲ್ಲೆ.

ಈಗ ನಿಮ್ಮ ಕಚೇರಿ ಸಂಪೂರ್ಣ ಪಾರದರ್ಶಕ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆಯೇ?
ಸಂಪೂರ್ಣ ಪಾರದರ್ಶಕವಾಗಿದೆ. ಆದರೆ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಸದ್ಯದಲ್ಲೇ ಕಡತ ವಿಲೇವಾರಿ ಬಗ್ಗೆ ಎಸ್‌ಎಂಎಸ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.

ಇದರಿಂದ ಕೆಲಸದ ಒತ್ತಡ ಕಡಿಮೆಯಾಗಿದೆಯೇ?
ಖಂಡಿತ ಕಡಿಮೆಯಾಗಿದೆ. ನಾವು ಈ ಹಿಂದೆ ಯಾವುದಾದರೂ ಒಂದು ಹಳೆ ಕಡತ ಬೇಕಾದರೆ, ನಮ್ಮ ಕೇಸ್ ವರ್ಕರ್‌ಗಳು ದಿನಗಟ್ಟಲೇ ಹುಡುಕುತ್ತಿದ್ದರು. ಆದರೆ ಈಗ ಕ್ಷಣಮಾತ್ರದಲ್ಲೇ ಅದನ್ನು ಪತ್ತೆ ಹಚ್ಚಬಹುದು.

ಇದು ಬೇರೆ ಇಲಾಖೆಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ, ಇ-ಆಫೀಸ್ ನಿರ್ವಹಣೆ ಅಷ್ಟೊಂದು ಕಷ್ಟನಾ?
ಇಲ್ಲ. ಇದು ನಿರ್ವಹಣೆಗೆ ತುಂಬಾ ಸುಲಭವಾಗಿದೆ. ಈ ಕಾಗದರಹಿತ ವ್ಯವಸ್ಥೆಯಿಂದ ಕಡತ ಹಾಗೂ ಪತ್ರಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ ಬಹಳ ಸುಲಭವಾಗಿರುತ್ತದೆ. ಯಾರ ಬಳಿ ಎಷ್ಟು ಪತ್ರ, ಎಷ್ಟು ಕಡತ ಎಷ್ಟು ದಿನದಿಂದ ಬಾಕಿ ಉಳಿದುಕೊಂಡಿದೆ ಎಂಬುದು ನಿಖರವಾಗಿ ಗೊತ್ತಾಗುತ್ತದೆ. ಆದರೆ ಅಧಿಕಾರಿಗಳ ನಿರಾಸಕ್ತಿ ಹಾಗೂ ಸಿಬ್ಬಂದಿಯ ಅಸಹಾಕರದಿಂದ ಇದು ಎಲ್ಲಾ ಕಡೆ ಸಾಧ್ಯವಾಗುತ್ತಿಲ್ಲ. ನಮ್ಮ ಜನ ಹೊಸದನ್ನು ಬೇಗ ಒಪ್ಪಿಕೊಳ್ಳುವುದಿಲ್ಲ.

ಏನೀದು ಇ-ಆಫೀಸ್?
ಇ-ಆಫೀಸ್ ಭಾರತ ಸರಕಾರದ ಒಂದು ಮಿಷನ್ ಮೋಡ್ ಯೋಜನೆಯಾಗಿದೆ. ಸರಕಾರಿ ಕಚೇರಿಗಳಲ್ಲಿ ಇ-ಆಡಳಿತದ ಮೂಲಕ ಕಾಗದರಹಿತ ವ್ಯವಹಾರ ಅನುಷ್ಠಾನ ಇದರ ಉದ್ದೇಶವಾಗಿದೆ. ರಾಜ್ಯ ಸರ್ಕಾರ ಇ-ಆಡಳಿತ ಮತ್ತು ಎನ್‌ಐಸಿ ಸಹಯೋಗದೊಂದಿಗೆ ಇ-ಆಫೀಸ್ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಕಚೇರಿಗೆ ಬರುವ ಎಲ್ಲ ಪತ್ರಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಈ ವ್ಯವಸ್ಥೆಯಲ್ಲಿ ಅಡಕವಾಗುತ್ತದೆ. ನಂತರ ಎಲ್ಲ ಹಂತದಲ್ಲಿಯೂ ಸ್ಕ್ಯಾನ್ಡ್ ಪತ್ರ ಮಾತ್ರ ಚಲನವಲನವಾಗುತ್ತದೆ. ವಿಷಯ ನಿರ್ವಾಹಕರು ಸ್ಕ್ಯಾನ್ಡ್ ಪತ್ರದ ಮೇಲೆ ಚಲನವಲನ ನಡೆಸುತ್ತಾರೆ. ಮೇಲಧಿಕಾರಿಗಳ ಆದೇಶದಂತೆ ಅದನ್ನು ಮುಂದಿನ ಹಂತಕ್ಕೆ ಕಳಿಸುತ್ತಾರೆ. ಇದರಲ್ಲಿ ಫಿಜಿಕಲ್ ಫೈಲ್ಸ್ ನಿರ್ವಹಣೆ ಇರುವುದಿಲ್ಲ.

-ಲಿಂಗರಾಜ್ ಬಡಿಗೇರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com