ಪೋಕ್ಸೋ ಕಾಯ್ದೆಯ ಪರಿಣಾಮಕಾರಿ ಜಾರಿ ಅವಶ್ಯ: ಮಕ್ಕಳ ಹಕ್ಕು ಆಯೋಗ ಅಧ್ಯಕ್ಷೆ ಕೃಪಾ ಆಳ್ವ

ಮಕ್ಕಳು ಈ ಜಗತ್ತಿನ ಅದ್ಭುತ ಸೃಷ್ಟಿ... ಆಟ. ತುಂಟಾಟ, ಅವರದ್ದೇ ಆದ ಪ್ರಪಂಚ, ಆಲೋಚನೆಗಳು... ನಿಜಕ್ಕೂ ಮನುಷ್ಯ ಜೀವನದಲ್ಲಿ ಮತ್ತೊಮ್ಮೆ ನೋಡಲು, ಅನುಭವಿಸುವ...
ಡಾ.ಕೃಪಾ ಅಮರ್ ಆಳ್ವ(ಸಂಗ್ರಹ ಚಿತ್ರ)
ಡಾ.ಕೃಪಾ ಅಮರ್ ಆಳ್ವ(ಸಂಗ್ರಹ ಚಿತ್ರ)
Updated on

ಮಕ್ಕಳು ಈ ಜಗತ್ತಿನ ಅದ್ಭುತ ಸೃಷ್ಟಿ... ಆಟ. ತುಂಟಾಟ, ಅವರದ್ದೇ ಆದ ಪ್ರಪಂಚ, ಆಲೋಚನೆಗಳು... ನಿಜಕ್ಕೂ ಮನುಷ್ಯ ಜೀವನದಲ್ಲಿ ಮತ್ತೊಮ್ಮೆ ನೋಡಲು, ಅನುಭವಿಸುವ ಅವಕಾಶಗಳು ಇದ್ದಿದ್ದರೆ ನಾವೆಲ್ಲರೂ ಬಯಸುವುದು ಬಾಲ್ಯ ಜೀವನವನ್ನು. ಹಾಗೆಂದು ಮಕ್ಕಳೆಂದರೆ ಬರೀ ಆಟ, ತುಂಟಾಟಗಳಲ್ಲಿ ಕಾಲ ಕಳೆಯುತ್ತಿದ್ದರೆ ಆಗುವುದಿಲ್ಲ. ಅವರಿಗೂ ಶಿಕ್ಷಣ, ನಡೆ, ನುಡಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಉತ್ತಮ ಅವಕಾಶ, ಉತ್ತಮ ಜೀವನ, ಆರೋಗ್ಯ, ಸಮಾಜದಲ್ಲಿ ಒಳ್ಳೆಯ ವಾತಾವರಣ ಎಲ್ಲವೂ ಸಿಗಬೇಕು. ಈ ಎಲ್ಲ ವಿಷಯಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಲು ಇರುವ ದಿನವೇ ವಿಶ್ವ ಮಕ್ಕಳ ದಿನಾಚರಣೆ.

ಹೌದು ನವೆಂಬರ್ 20 ವಿಶ್ವ ಮಕ್ಕಳ ದಿನಾಚರಣೆ. ಈ ದಿನದಂದು ಮುಖ್ಯವಾಗಿ ಮಕ್ಕಳ ಹಕ್ಕು ಮತ್ತು ರಕ್ಷಣೆ ಬಗ್ಗೆ ವಿಶ್ವದಾದ್ಯಂತ ಅರಿವು ಮೂಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ಅವರನ್ನು ಮಾತಿಗೆಳೆದಾಗ.....
ವಿಶ್ವ ಮಕ್ಕಳ ಹಕ್ಕು ದಿನಾಚರಣೆಯ ಪ್ರಸ್ತುತತೆ ಏನು?
ಪ್ರತಿಯೊಬ್ಬರಿಗೂ ಒಂದೊಂದು ದಿನವನ್ನು ಆಚರಣೆಗೆ ಮೀಸಲಾಗಿಟ್ಟಿರುವಂತೆ ಮಕ್ಕಳಿಗೂ ಒಂದು ದಿನಾಚರಣೆಯಿದೆ. ವಿಶ್ವಸಂಸ್ಥೆ ನವೆಂಬರ್ 20ರಂದು ಮಕ್ಕಳ ದಿನಾಚರಣೆ ಎಂದು ಘೋಷಿಸಿದೆ. ಈ ದಿನದಂದು ನಮ್ಮ ರಾಜ್ಯಾದ್ಯಂತ ಶಾಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಮಕ್ಕಳ ಹಕ್ಕುಗಳು, ಅವರ ರಕ್ಷಣೆ, ಶಿಕ್ಷಣಕ್ಕೆ ಸಂಬಂಧಿಸಿದ ಭಾಷಣ, ಪ್ರಬಂಧ, ಚರ್ಚಾ ಕಾರ್ಯಕ್ರಮಗಳು, ನಾಟಕಗಳು ನಡೆಯುತ್ತವೆ. ರಾಜಧಾನಿ ಬೆಂಗಳೂರಿನಲ್ಲಿ  ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಿಂದ ಬೃಹತ್ ಮಾನವ ಸರಪಳಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ. ಮಕ್ಕಳ ಮೇಲಿನ  ದೌರ್ಜನ್ಯ  ತಡೆ, ಹಕ್ಕುಗಳ ರಕ್ಷಣೆ, ಸರ್ವರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಆಯೋಗ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ರ್ಯಾಲಿ ಹಮ್ಮಿಕೊಳ್ಳಲಾಗಿದೆ.  

ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅದರ ತಡೆಗೆ ಇಲಾಖೆಯಿಂದ ಕೈಗೊಳ್ಳುವ ಕ್ರಮಗಳೇನು?
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅದರಲ್ಲೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಲ್ಲಲ್ಲಿ ಸಂಭವಿಸುತ್ತಲೇ ಇರುತ್ತವೆ. ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ತಡೆಗೆ 2012ರಲ್ಲಿ ಪೋಕ್ಸೋ ಕಾಯ್ದೆ (ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ)ಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಮಕ್ಕಳನ್ನು ಕಾಮದ ದೃಷ್ಟಿಯಿಂದ ನೋಡುವವರಿಗೆ, ಭೋಗದ ವಸ್ತುವಾಗಿ ಪರಿಗಣಿಸುವ ವ್ಯಕ್ತಿಗಳಿಗೆ ಖಂಡಿತಾ ಅತ್ಯುಗ್ರ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಇಲಾಖೆ ಪ್ರಯತ್ನಿಸುತ್ತಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲ್ಲಿ ಇಲಾಖೆ ಪ್ರಯತ್ನವೇನು?

ಲೈಂಗಿಕ ದೌರ್ಜನ್ಯ ಅಥವಾ ಇತರ ರೀತಿಯ ದೌರ್ಜನ್ಯಗಳು, ಮಕ್ಕಳ ಹಕ್ಕು ಉಲ್ಲಂಘನೆ ವರದಿಯಾದಲ್ಲಿಗೆ ಹೋಗಿ ನಾವು ಸಂಪೂರ್ಣ ವಿವರ ತೆಗೆದುಕೊಳ್ಳುತ್ತೇವೆ. ನಂತರ ಅದಕ್ಕೆ ಏನು ಕ್ರಮ ತೆಗೆದುಕೊಳ್ಳಬಹುದು ಎಂದು ಸರ್ಕಾರಕ್ಕೆ ನಾವು ಶಿಫಾರಸ್ಸು ಮಾಡುತ್ತೇವೆ. ತೀರ್ಮಾನ ತೆಗೆದುಕೊಳ್ಳುವ ಅಥವಾ ಶಿಕ್ಷೆ ನೀಡುವ ಹಕ್ಕು ಆಯೋಗಕ್ಕಿಲ್ಲ.

ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳಕ್ಕೆ ಏನು ಕಾರಣವಿರಬಹುದು?

ಮಕ್ಕಳನ್ನು ಲೈಂಗಿಕತೆಗೆ ಬಳಸುವವರು ಮತ್ತು ಆ ದೃಷ್ಟಿಯಿಂದ ನೋಡುವವರು ವಿಕೃತ ಮನಸ್ಸಿನವರು ಎಂದು ಹೇಳಲು ಇಚ್ಚಿಸುತ್ತೇನೆ. ಅವರ ಜೀವನದ ಹಿನ್ನೆಲೆ ಇದಕ್ಕೆ ಕಾರಣವಿರಬಹುದು. ಇಂತಹ ಘಟನೆ ಮತ್ತೆಮತ್ತೆ ಮರುಕಳಿಸದಂತೆ ಆಗಲು ಮಕ್ಕಳ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು, ಮಾಧ್ಯಮಗಳು, ನಾಗರಿಕ ಸಮಾಜಕ್ಕೆ ಜವಾಬ್ದಾರಿಯಿದೆ. ಮಕ್ಕಳು ಹೆಚ್ಚು ಶಿಕ್ಷಣವಂತರಾಗಬೇಕು. ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವರ ಹಿನ್ನೆಲೆ ಸರಿಯಾಗಿ ತಿಳಿದುಕೊಳ್ಳಬೇಕು. ಮಕ್ಕಳ ಭದ್ರತೆಗೆ ಶಾಲೆಗಳಲ್ಲಿ ಕ್ಯಾಮೆರಾ ಅಳವಡಿಸಬೇಕು. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಇಂದು ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರು ಹೆಚ್ಚು ಬುದ್ಧಿವಂತರಾಗಬೇಕಾಗಿದೆ.

ಆಯೋಗದಿಂದ ಮಕ್ಕಳ ರಕ್ಷಣೆಗಾಗಿ ಏನೇನು ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ?  

ಬಹುತೇಕ ಕಡೆ ಶಾಲೆಗಳ ಸಮೀಪವೇ ಮದ್ಯದ ಅಂಗಡಿಗಳಿದ್ದು, ಇವುಗಳನ್ನು ತೆರವುಗೊಳಿಸುವ ಬಗ್ಗೆ ಅಬಕಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಸೂಕ್ತ ರಕ್ಷಣೆ, 5-6 ನೇ ತರಗತಿ ಹಂತದಲ್ಲಿ ಲೈಂಗಿಕ  ಶಿಕ್ಷಣ ಅಳವಡಿಕೆ, ಉದ್ಯಾನವನಗಳಲ್ಲಿ ಆಂಬ್ಯುಲೆನ್ಸ್ ಸೇವೆ, ಸಹಾಯವಾಣಿ, ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮುಂದಿನ ದಿನಗಳಲ್ಲಿ ಪತ್ರ ಬರೆಯಲಾಗುವುದು. ರಾಜ್ಯದ ಯಾವುದೇ ಭಾಗಗಳಲ್ಲಿ ಮಕ್ಕಳಿಗೆ ಏನೇ ತೊಂದರೆ, ಆಪತ್ತುಗಳು ಸಾರ್ವಜನಿಕರ ಗಮನಕ್ಕೆ ಬಂದರೆ ಆಯೋಗದ 24 ಗಂಟೆಗಳ ಸಹಾಯವಾಣಿ 1098, ಅಥವಾ ದೂರವಾಣಿ ಸಂಖ್ಯೆ 08022115292, 080-22115291 ಕ್ಕೆ ಕರೆ ಮಾಡಿ ದೂರು ನೀಡಬಹುದು.

ಮಕ್ಕಳ ಆಯೋಗದ ಕಾರ್ಯ ವ್ಯಾಪ್ತಿಗಳೇನು?

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 2005 ಕಾಯ್ದೆಯಡಿ ಬರುವ ಸ್ವತಂತ್ರ ಸಂಸ್ಥೆ. ಈ ಕಾಯ್ದೆಯಡಿ, ಯಾವುದೇ ರೀತಿಯ ಮಕ್ಕಳ ಹಕ್ಕು ಉಲ್ಲಂಘನೆಗೆ ಸಂಬಂಧಪಟ್ಟ ದೂರುಗಳನ್ನು ವಿಚಾರಣೆ ನಡೆಸುವ ಅಧಿಕಾರ ಆಯೋಗಕ್ಕಿದೆ. ಆಯೋಗವು ಸಿವಿಲ್ ನ್ಯಾಯಾಲಯದ ರೀತಿ ಕಾರ್ಯ ನಿರ್ವಹಿಸಿ ಅನೇಕ ದೂರುಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸುತ್ತದೆ. ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿರುವುದು ಕಂಡುಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ. ಕೇಂದ್ರ ಸರ್ಕಾರದ ಶಿಕ್ಷಣ ಹಕ್ಕು ಕಾಯ್ದೆಗೆ ಸಂಬಂಧಪಟ್ಟ ವಿಷಯಗಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಆಯೋಗದ ವ್ಯಾಪ್ತಿಗೆ ಬರುತ್ತದೆ.

ಕರ್ನಾಟಕದಲ್ಲಿ ಆರ್ ಟಿಇ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿದೆಯೇ?
ನನ್ನ ಅನುಭವದ ಪ್ರಕಾರ ಆರ್ ಟಿಇ ಕಾಯ್ದೆಯಿಂದ ಬಡ ಮಕ್ಕಳಿಗೆ ಅನುಕೂಲವಾಗುತ್ತಿದೆ. ಯಾರು ಫಲಾನುಭವಿಗಳೋ ಅವರಿಗೆ ಇದರ ಪ್ರಯೋಜನವಾಗುತ್ತಿದೆ. ಆರ್ ಟಿಇ ಕಾಯ್ದೆ ದುರ್ಬಳಕೆಯಾಗುತ್ತಿಲ್ಲ ಎಂಬುದು ನನ್ನ ಅನಿಸಿಕೆ.
-ಸುಮನಾ ಉಪಾಧ್ಯಾಯ
 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com