ಗಯ್ಯಾಳಿಗಳು ಪುರುಷ ಸಮಾಜದ ಮಿಥ್ ಒಡೆಯುತ್ತಾರೆ

”ಕಿರಗೂರಿನ ಗಯ್ಯಾಳಿಗಳು’ ಕತೆ ಪ್ರಸ್ತುತಕ್ಕೆ ಹತ್ತಿರವಾಗಿದೆ. ಅಲ್ಲಿ ವುಮೆನ್ ಎಂಪವರ್ ಮೆಂಟ್ ಇದೆ. ಅಂದರೆ ಅಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅಲ್ಲಿ ಅಂತರ್ಗತವಾದ...
ಸುಮನಾ ಕಿತ್ತೂರ್
ಸುಮನಾ ಕಿತ್ತೂರ್
'ಕಳ್ಳರ ಸಂತೆ' , 'ಎದೆಗಾರಿಕೆ'ಯಂಥ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ ಸುಮನಾ ಕಿತ್ತೂರು ಈಗ ಕಿರಿಗೂರಿನ ಗಯ್ಯಾಳಿ ಚಿತ್ರವನ್ನು ನಮ್ಮ ಮುಂದಿಡುತ್ತಿದ್ದಾರೆ. ಈ ಸಿನಿಮಾದ ಚಿತ್ರಕತೆ ಮತ್ತು ಸಂಭಾಷಣೆ ಸುಮನಾ ಕಿತ್ತೂರ್ ಮತ್ತು ಅಗ್ನಿ ಶ್ರೀಧರ್ ಅವರದು. ತಮ್ಮ ಹೊಸ ಸಿನಿಮಾದ ಬಗ್ಗೆ  ಬಹಳ ಉತ್ಸಾಹ ಮತ್ತು ಆತ್ಮ ವಿಶ್ವಾಸದಿಂದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಸುಮನಾ.
೧. ಕಿರಗೂರಿನ ಗಾಳಿ ಹೇಗೆ ಬೀಸುತ್ತಾ ಇದೆ? ಅದರ ಮಹಿಮೆ ಹೇಗಿದೆ!?
(ನಗು) ’ಎದೆಗಾರಿಕೆ’  ಮಾಡಿದ ನಂತರ ಒಂದೊಳ್ಳೆ ಸಿನಿಮಾ ಮಾಡಬೇಕು ಎಂದಿತ್ತು. ಅಲ್ಲದೆ ಅದನ್ನು ನೋಡಿದವರೆಲ್ಲರೂ ಅದೊಂದು ಭೂಗತ ಜಗತ್ತಿನ ಕತೆಯನ್ನೇ ತೆಗೆದುಕೊಂಡು ಸಿನೆಮಾ ಮಾಡುತ್ತೀರಿ ಎಂಬ ಪ್ರತಿಕ್ರಿಯೆಯೇ ಇತ್ತು.  ಆ ದಿನಗಳು ಇದೇ ಹಿನ್ನೆಲೆಯ ಕತೆಯಾಗಿತ್ತು.  ಆದರೆ ಅವು ಅದಕ್ಕಿಂತಲೂ ಮುಖ್ಯವಾಗಿ ಮನುಷ್ಯ ಸಂಬಂಧಗಳ, ಮಾನಸಿಕ ತುಮುಲಗಳನ್ನು ವಿಶ್ಲೇಷಿಸುವ ಕತೆಯೇ ಆಗಿದೆ. ’ಕಳ್ಳರ ಸಂತೆ’ ವಿಡಂಬನಾತ್ಮಕ ಚಿತ್ರವಾಗಿತ್ತು. ಹಾಗಾಗಿ ಇವೆಲ್ಲವಕ್ಕಿಂತ ಭಿನ್ನವಾದ ಕತೆಯನ್ನು ಮಾಡಬೇಕೆಂಬ ಆಶಯ ನಮ್ಮದಾಗಿತ್ತು.
೨.ಕಿರಗೂರಿನ ಗಯ್ಯಾಳಿಗಳು ಕತೆಯನ್ನು ಆಯ್ಕೆ ಮಾಡಲು ಬಹು ಮುಖ್ಯ ಕಾರಣಗಳೇನು ? ಮತ್ತು ಅದಕ್ಕೆ ಕಾಪಿರೈಟ್ ಸಿಕ್ಕ ಸಂದರ್ಭವನ್ನು ಹೇಳಿ. 
   ಹಾಗೆ ಬೇರೊಂದು ಚಿತ್ರ ಮಾಡಬೇಕು ಅಂದಿದ್ದಾಗ ಯೋಚನೆ ಮಾಡಿದ್ದು ’ಕೃಷ್ಣೇಗೌಡರ ಆನೆ ’ ಕತೆಯನ್ನು. ಅದು ಬಹಳ ಛಾಲೆಂಜಿಂಗ್ ಆದ ಕತೆ. ಆನೆಯನ್ನು ಬಳಸಿಕೊಂಡು ಚಿತ್ರ ಮಾಡುವುದು ತಾಂತ್ರಿಕವಾಗಿ ಸುಲಭದ ಕೆಲಸವಲ್ಲ. ಜೊತೆಗೆ ಆ ಕತೆಗೆ  ಬಜೆಟ್  ಕೂಡ  ಜಾಸ್ತಿ ಬೇಕಾಗಿತ್ತು. ಮಾತ್ರವಲ್ಲ ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳುವುದು ರಿಸ್ಕ್ ವಿಷಯವೇ ಆಗಿತ್ತು. ಅಲ್ಲದೆ ತೇಜಸ್ವಿಯವರ ಕತೆಗಳೇ ನನ್ನ ಮುಂದಿನ ಸಿನೆಮಾ ಮಾಡಲು ಮೊದಲಿನಿಂದಲೂ ನನ್ನ ಮನಸ್ಸಿನಲ್ಲಿ ಇದ್ದದ್ದು. ಹಾಗಾಗಿಯೇ ”ಕೃಷ್ಣೇಗೌಡರ ಆನೆ’ ಕತೆಯನ್ನು ಬಿಟ್ಟು ’ಕಿರಗೂರಿನ ಗಯ್ಯಾಳಿಗಳು ” ಕತೆಯನ್ನು ಆಯ್ಕೆ ಮಾಡಿದೆ. 
ಈ ಕತೆಯನ್ನು ಆಯ್ಕೆ ಮಾಡಿಕೊಂಡಾಗ ಹಲವಾರು ಜನ ಸಿನಿಮಾ ಮಾಡಲು ಕಾಪಿರೈಟ್ಸ್ ತೆಗೆದುಕೊಂಡಿದ್ದಾರೆ ಎಂಬುದು ಕೇಳಿ ಬಂತು. ಆದರೆ ಯಾರೂ ಸಿನಿಮಾ ಮಾಡಲಿಲ್ಲ.
ತೇಜಸ್ವಿಯವರ ಕತೆಯನ್ನೋದಿ ಅದರ ಹಕ್ಕುಗಳನ್ನು ಪಡೆದುಕೊಳ್ಳಲು ಶ್ರೀಮತಿ  ರಾಜೇಶ್ವರಿಯವರನ್ನು ಭೇಟಿ ಮಾಡಿದಾಗ ಅವರು ಬಹಳ ಸಂತೋಷ ಪಟ್ಟರು. ಧಾರಾಳವಾಗಿ ಚಿತ್ರ ಮಾಡಿ ಎಂದರು. ಅವರು ನನಗೆ ತೇಜಸ್ವಿಯವರ ಒಂದು ಪತ್ರವನ್ನು ಕೊಟ್ಟರು.  ಅದು ತೇಜಸ್ವಿಯವರು  ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಬರೆದ ಪತ್ರ.  ಆ ಪತ್ರದಲ್ಲಿ ಹೀಗೆ ಬರೆದಿತ್ತು: 
1.ನೀವು ಕತೆಯ ಆಶಯವನ್ನು ಮಾತ್ರ ತೆಗೆದುಕೊಂಡು ಕತೆ ಮಾಡಬೇಕು
2.ಜನ ನೋಡುವಂತಹ ಸಿನಿಮಾ ಮಾಡಬೇಕು. 
    ನನ್ನ ಆಶಯವೂ ಅದೇ ಜನ ನೋಡುವಂತಹ ಸಿನೆಮಾ ಮಾಡಬೇಕು ಅನ್ನುವುದು. 
೩. ತೇಜಸ್ವಿಯವರ ಕತೆಗಳಲ್ಲಿ ಮೂಲ ಕತೆಯ ಹಲವು ಕವಲುಗಳಿರುತ್ತವೆ. ಹಲವು ವಿಶಿಷ್ಟ ಆಯಾಮಗಳಿರುತ್ತವೆ. ಅವನ್ನೆಲ್ಲಾ  ದೃಶ್ಯದಲ್ಲಿ ಚಿತ್ರೀಕರಿಸಲು ಹೇಗೆ ಸಹಾಯಕವಾಯಿತು? ಸವಾಲು ಅನ್ನಿಸಿತಾ ?
ಕಿರಗೂರಿನ ಗಯ್ಯಾಳಿಗಳು ಕತೆ ಆಯ್ಕೆ ಮಾಡಿಕೊಂಡಾಗ, ಏನಾಯ್ತೆಂದರೆ ಹಲವಾರು ಜನರು ಈ  ಕತೆಯನ್ನು ಸಿನಿಮಾಕ್ಕೆ ಆಯ್ದುಕೊಂಡಿದ್ದರಂತೆ. ಕೆಲವರು ಕತೆಯ ಹಕ್ಕುಗಳನ್ನು ಪಡೆದುಕೊಂಡಿದ್ದರೂ ಯಾರೂ ಸಿನಿಮಾ ಮಾಡಲಿಲ್ಲ. ಅಂದಹಾಗೆ ಅದೊಂದು ಸಣ್ಣ ಕತೆ. ಆ ಸಣ್ಣ ಕತೆಯನ್ನಿಟ್ಟುಕೊಂಡು ಸಿನಿಮಾ ಮಾಡುವುದು ಚಾಲೆಂಜಿಂಗ್ ಆಗಿತ್ತು. ನಾನು ಆ ಕತೆಯನ್ನಿಟ್ಟುಕೊಂಡೇ ಸಿನಿಮಾ ಮಾಡಲು  ಸಿದ್ಧತೆ ಮಾಡಿದೆ. ಕಿರಗೂರಿನ ಗಯ್ಯಾಳಿಗಳು ಕತೆಯಲ್ಲಿ ಇರುವುದು ಬರೀ ಜಗಳಗಳೇ. ಜಗಳವನ್ನು ಮಾತ್ರ ಇಟ್ಟುಕೊಂಡು ಸಿನಿಮಾ ಮಾಡಲು ಆಗುವುದಿಲ್ಲವಲ್ಲಾ..ಅದಕ್ಕೆ ಸ್ವಲ್ಪ ಕುಸುರಿ ಕೆಲಸವನ್ನು ಮಾಡಿದ್ವಿ. 
ದೃಶ್ಯ ಮಾಧ್ಯಮದ ಅರಿವು ಮೂಲ ಲೇಖಕರಿಗೆ ಇದ್ದಾಗ ಅಂಥವರ ಕತೆ ಚಿತ್ರವಾದಾಗ, ಅದರ ಆಶಯವನ್ನು  ಮೂಲ ಲೇಖಕರು ಖಂಡಿತಾ ಅರ್ಥ ಮಾಡಿಕೊಳ್ಳುತ್ತಾರೆ. ಅಂಥ ಅರಿವುಳ್ಳ ಲೇಖಕರು  ಪೂರ್ಣ ಚಂದ್ರತೇಜಸ್ವಿ. 
೪. ಇದು ತುಂಬಾ ಸಂಕೀರ್ಣವಾದ ಕತೆ. ಅದನ್ನು ಸಿನೆಮಾ ಮಾಡಲೇ ಬೇಕು ಅನ್ನಿಸಿದ್ದು ಹೇಗೆ ?
”ಕಿರಗೂರಿನ ಗಯ್ಯಾಳಿಗಳು’ ಕತೆ ಪ್ರಸ್ತುತಕ್ಕೆ ಹತ್ತಿರವಾಗಿದೆ. ಅಲ್ಲಿ ವುಮೆನ್ ಎಂಪವರ್ ಮೆಂಟ್ ಇದೆ. ಅಂದರೆ ಅಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅಲ್ಲಿ ಅಂತರ್ಗತವಾದ ಯುದ್ಧವೊಂದು ನಡೆಯುತ್ತಲೇ ಇತ್ತು. ಅಲ್ಲಿನ ಮಹಿಳೆಯರು ಪುರುಷ ಸಮಾಜದ ಮಿತ್ ಗಳನ್ನು ಒಡೆದು ಹಾಕುತ್ತಾರೆ. ಸೋಮಾರಿ ಗಂಡಸರನ್ನು ಎದುರಿಸಿ ದಿಟ್ಟವಾಗಿ ನಿಲ್ಲುತ್ತಾರೆ. ಲೈಂಗಿಕ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಇಲ್ಲಿನ ಗಯ್ಯಾಳಿಯರು ವ್ಯಕ್ತಪಡಿಸುತ್ತಾರೆ. 
ಕತೆ ಸಂಕೀರ್ಣವಾದರೂ ಅದರ ಆಶಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನು ಮಾತ್ರ  ನಾವು ಚಿತ್ರದಲ್ಲಿ ಅಳವಡಿಸಿಕೊಳ್ಳಬೇಕು. ಉದಾಹರಣೆಗೆ, ಇಲ್ಲಿ  ಗಾಳಿಯನ್ನು ಭೌತಿಕವಾಗಿ ಚಿತ್ರದಲ್ಲಿ ತರಲು ಹೇಗೆ ಸಾಧ್ಯ?  ಇಲ್ಲಿ ಗಾಳಿ ಎಂದರೆ ಗಂಡಸರ ಅಹಂ ಎಂಬ ಗಾಳಿ. ಅದನ್ನು  ಕಿರಗೂರಿನ ಗಯ್ಯಾಳಿಯರು  ತಹಬದಿಗೆ ತರುತ್ತಾರೆ. ಅದೊಂದು ಬದಲಾವಣೆಯ ಗಾಳಿ. ಕತೆ ತಾಂತ್ರಿಕವಾಗಿ ಸಂಕೀರ್ಣವಾಗಿಲ್ಲ. ಮನುಷ್ಯ ಸಂಬಂಧಗಳ ಸಂಕೀರ್ಣತೆ ಅದು. ಇವನ್ನೆಲ್ಲಾ ಬಿಡಿಸುತ್ತಾ, ಅರ್ಥಮಾಡಿಕೊಳ್ಳುತ್ತಾ ಹೋದಾಗ ಚಿತ್ರಗಳು ಹೊಳೆಯುತ್ತವೆ. 
೫. ಗಯ್ಯಾಳಿಗಳನ್ನೆಲ್ಲಾ ಹೇಗೆ ಒಟ್ಟುಗೂಡಿಸಿದಿರಿ !? ಅದರಲ್ಲಿ ಪಾತ್ರಗಳಾಗಿ ಆಯ್ಕೆಯಾದವರೆಲ್ಲಾ ಪಟ್ಟಣದ ಮಾಡ್ ಹುಡುಗಿಯರು. ಅವರ ಮೇಕ್ ಓವರ್ ಹೇಗಿತ್ತು. ಅವರನ್ನೆಲ್ಲಾ ಹೇಗೆ ಪಳಗಿಸಿದಿರಿ?
 (ನಗು)  ಈ ಚಿತ್ರದಲ್ಲಿ ಗಯ್ಯಾಳಿಗಳು ಮಾತ್ರವಲ್ಲ ಗಾಯಾಳುಗಳೂ ಇದ್ದಾರೆ!! ಅವರನ್ನೂ ನಾವು ಮರೆಯಬಾರದು.
          ಹೌದು. ಗಯ್ಯಾಳಿಯ ಪಾತ್ರಕ್ಕೆ ಆಯ್ಕೆಯಾದವರು ಮಾಡರ್ನ್ ಹುಡುಗಿಯರೇ.  ಅವರಿಗೆ  ಪಾತ್ರಗಳು ಹೇಗಿರುತ್ತವೆ ಎಂಬುದನ್ನು ವಿವರಿಸಿದ್ದೆ. ಅದಲ್ಲದೆ ಹೆಚ್ಚಿನವರು ರಂಗಭೂಮಿ ಹಿನ್ನೆಲೆಯಿಂದ ಬಂದವರು, ಗ್ರಹಿಕೆಯಿರುವ ಕಲಾವಿದರು. ಹಾಗಾಗಿ ಅಷ್ಟೊಂದು ಕಷ್ಟ ಅನಿಸಲಿಲ್ಲ.  ಇದು ನನ್ನ ಅದೃಷ್ಟವೆಂದೇ ಹೇಳಬೇಕು. ಗಯ್ಯಾಳಿಗಳನ್ನು ಪಳಗಿಸುವ ಸಂದರ್ಭ ಒದಗಿ ಬರಲಿಲ್ಲ.
 ಇನ್ನೊಂದು ವಿಷ್ಯ  ಹೇಳಬೇಕು ಅಂದರೆ ನಾನು ಯಾವ ಕಲಾವಿದರಿಗೂ ಸ್ಪೂನ್ ಫೀಡಿಂಗ್ ಮಾಡಿಲ್ಲ. ಎಲ್ಲರಿಗೂ ಸ್ವೀಕರಿಸುವ ಗುಣವಿದೆ. ಇಲ್ಲಿನ ಕಲಾವಿದರೆಲ್ಲರೂ ಗ್ರಹಿಕೆಯುಳ್ಳವರಾಗಿರುವುದರಿಂದ  ಮೇಕ್ ಓವರ್ ಮಾಡಬೇಕಾದ ಅಗತ್ಯವಿರಲಿಲ್ಲ. ಅವರ ಪಾತ್ರಕ್ಕೆ ತಕ್ಕ ವೇಷವನ್ನು ಧರಿಸಿದಾಗ ಅವರು ಆ ಪಾತ್ರಗಳನ್ನು ತಮ್ಮೊಳಗೆ ಅವಾಹನೆ ಮಾಡಿಕೊಂಡವರಂತೆ ಇರುತ್ತಿದ್ದರು. ಮಾಡರ್ನ್ ಹುಡುಗಿಯರಿಗೆ ಹಳ್ಳಿಯವರ ಸೀರೆ ರವಿಕೆ ತೊಟ್ಟಾಗ ಅವರು ಥೇಟು ಹಳ್ಳಿ ಹೆಣ್ಮಕ್ಕಳಾಗಿ ಬಿಡುತ್ತಿದ್ದರು. ಕಲಾವಿದೆಯರು ಮಾತ್ರವಲ್ಲ, ಇಲ್ಲಿನ ಎಲ್ಲಾ ಕಲಾವಿದರೂ ಚಿತ್ರಕತೆಯ ಆಶಯಕ್ಕೆ ತಕ್ಕಂತೆ ಉತ್ತಮವಾಗಿ ನಟಿಸಿದ್ದಾರೆ. 
೫. ಪಾತ್ರಗಳ ಆಯ್ಕೆ ಮತ್ತು ನಿರ್ವಹಣೆ ನಿಮ್ಮ  ದೊಡ್ಡ ಶಕ್ತಿ. ಅದು ಎದೆಗಾರಿಕೆ ಸಿನಿಮಾದಲ್ಲಿ ನಿರೂಪಿತವಾಗಿದೆ. ಎಲ್ಲಾ ಪಾತ್ರಗಳು ಹೇಳಿ ಮಾಡಿಸಿದ ಹಾಗಿವೆ. ಈ ಚಿತ್ರದಲ್ಲೂ ಅದನ್ನು ನಿರೀಕ್ಷಿಸಬಹುದಾ?
        ಹೌದು. ಅದಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷಿಸಬಹುದು. ನಿಜ. ನನ್ನ ಪಾತ್ರ ವರ್ಗ ನನ್ನ ಶಕ್ತಿ.  ಇಲ್ಲಿ ಹಲವಾರು ಕಲಾವಿದರಿದ್ದಾರೆ. ನೀವು ಊಹಿಸಲು ಸಾಧ್ಯವಾಗದೇ ಇರುವ ಗೆಟಪ್ ನಲ್ಲಿ ಕೆಲವು ಕಲಾವಿದರ ಪಾತ್ರಗಳಿವೆ. ಬಹುತೇಕ ಕಲಾವಿದರು ಕೊನೆಯವರೆಗೂ ಒಂದೇ ರೀತಿಯ ಪಾತ್ರಗಳಲ್ಲಿ ಜೀವ ಸವೆಸಬೇಕಾಗುತ್ತದೆ. ಏಕತಾನತೆಯ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ, ಅವರಲ್ಲಿನ ಜೀವಂತಿಕೆ ಹೊರಹೊಮ್ಮಲು ಅವಕಾಶಗಳು ದಕ್ಕದಂತಾಗುತ್ತದೆ. ಆದರೆ ನನ್ನ ಸಿನೆಮಾಗಳ ಪಾತ್ರಗಳು ಹಾಗಾಗುವುದಿಲ್ಲ. ಪಾತ್ರಗಳ ರಸದೌತಣವೇ ಇದೆ.  
೬.ಹಾಗಾದರೆ ನೀವು ಸಾಂಪ್ರದಾಯಿಕ ಪಾತ್ರ ಆಯ್ಕೆ ಮತ್ತು ನಿರ್ವಹಣೆಗಿಂತ ವಿಭಿನ್ನವಾಗಿ ನಿಲ್ಲುತ್ತೀರಿ. Out of box ಚಿಂತನೆ ನಿಮ್ಮದು ?
ಹೌದು. ಖಂಡಿತ. ಇಂಥವರು ಇಂಥದ್ದೇ ಪಾತ್ರಗಳನ್ನು   ಕೊನೆಯವರವಿಗೂ ನಿರ್ವಹಿಸಬೇಕು ಎನ್ನುವುದೇನು ಇಲ್ಲವಲ್ಲ. ಇಂಥವರು ಇಂಥ ಪಾತ್ರವನ್ನೂ ಮಾಡಬಲ್ಲರಾ ಎನ್ನುವ ಆಶ್ಚರ್ಯ ನಿಮ್ಮದಾಗುವುದು ಖಂಡಿತ ! ಇದೊಂದು ಫುಲ್ ಎನರ್ಜಿ ಪ್ಯಾಕ್  ಸಿನಿಮಾ.
 ೭.ತೇಜಸ್ವಿಯವರ ಕತೆಗಳು ಯಾವತ್ತೂ ಮುಗಿಯುವುದೇ ಇಲ್ಲ. ಈ  ಕತೆಯಲ್ಲಿ ಅವರೇ ಹೇಳುವಂತೆ, "ಇಲ್ಲಿಗೆ ಕತೆ ಮುಗಿಯಿತೆಂದು ತಿಳಿಯಬೇಡಿ. ಕತೆ ಎಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಹಾಕುತ್ತದಷ್ಟೆ." ಕತೆಗೆ ಒಂದು ಚೌಕಟ್ಟು ಹಾಕದಂತೆ ಚಿತ್ರಿಸುವುದು ಸಾಧ್ಯವಾಯಿತಾ ?
            ಹೌದು.  ತೇಜಸ್ವಿ ಹೇಳಿದಂತೆ ಕತೆ ಇಲ್ಲಿಗೆ ಮುಗಿಯುತ್ತಿಲ್ಲ. ಕತೆ ಮುಗಿಯಲೂ ಬಾರದು. ಕತೆಯಲ್ಲಿ ಬರುವ  ಶೇಂದಿ ಅಂಗಡಿಗೆ ಬೆಂಕಿ ಇಡುವ ಆ ಒಂದು ಕಿಡಿ ಬೇರೆಲ್ಲಿಯೋ ಪ್ರತಿಧ್ವನಿಸಬಹುದು. ಒಂದು ಕಿಡಿ ಬೇರೊಂದೆಡೆ ಪ್ರತಿಧ್ವನಿಸಿದೆ ಎಂದಾದರೆ ಅದು ಬದಲಾವಣೆಯೇ ಅಲ್ವಾ. ಬರಹವೊಂದನ್ನು ದೃಶ್ಯ ಮಾಧ್ಯಮಕ್ಕೆ ಇಳಿಸುವಾಗ ಅಲ್ಲಿನ ಆಲೋಚನಾ ಕ್ರಮಗಳು ಬದಲಾಗುತ್ತವೆ. ಸಿನಿಮಾ ಅನ್ನೋದು ಸೃಷ್ಟಿ ಕ್ರಿಯೆ. ನಾವಲ್ಲಿ ಕತೆಯೊಂದನ್ನು ರಿಕ್ರಿಯೇಟ್ ಮಾಡುತ್ತೇವೆ. ಕತೆಯಲ್ಲಿ ಏನಿದೆಯೋ ಅದನ್ನು ನಾವು ನಿರ್ದಿಷ್ಟ ಚೌಕಟ್ಟಿನಲ್ಲಿ ಒಗ್ಗಿಸಿಕೊಳ್ಳಬೇಕಾಗುತ್ತದೆ. ಪ್ರಸ್ತುತಕ್ಕೆ ಒಗ್ಗಿಸಿಕೊಳ್ಳುವ ಗುಣ ಅದು. 
೮. ನೀವು ಸೆಟ್ ನಲ್ಲಿ ಹೇಗೆ ಇರುತ್ತೀರಿ. ಗಯ್ಯಾಳಿಗಳು ನಿರ್ದೇಶಿಸುವಾಗ ನಿಮಗೆ ಆದ ವಿಶಿಷ್ಟ ಅನುಭವಗಳೇನು ?
ಸೆಟ್ ನಲ್ಲಿ ನಾನೂ ಗಯ್ಯಾಳಿಯಂತಿರುತ್ತೇನೆ (ನಗು). ತೇಜಸ್ವಿಯವರು  ಹೆಣ್ಮಕ್ಕಳ ಬಗ್ಗೆ ಬರೆದಿರುವುದು ಕಡಿಮೆ. ಕಿರಿಗೂರಿನ ಗಯ್ಯಾಳಿ ಕತೆಯಲ್ಲಿ ತೇಜಸ್ವಿವರು ಏನು ಬರೆದಿಲ್ಲವೋ ಅದರ ಹುಡುಕಾಟ ನಡೆಸು ಎಂದು ಶ್ರೀಧರ್ ಸರ್ ನನಗೆ ಹೇಳಿದ್ದರು. ಹಾಗೊಂದು ಹುಡುಕಾಟವನ್ನು ನಾನಿಲ್ಲಿ ಮಾಡಿದ್ದೀನಿ 
ಕತೆಯ ಆಯ್ಕೆಯ ಬಗ್ಗೆ ಮತ್ತೆ ಕೇಳಬೇಕೆಂದರೆ, ಸಿನೆಮಾ ಆಗುವ ಕತೆಗಳಲ್ಲಿ ಯಾವುದಾದರು ಥೀಮ್ ಇರಬೇಕು ಅಂಥವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಒಂದು ಸಂದರ್ಭದಲ್ಲಿ ನೀವು ಹೇಳಿದ್ದಿರಿ. ಹಾಗಾದರೆ ತೇಜಸ್ವಿಯವರ ಈ  ಕತೆಯಲ್ಲಿ ಯಾವ ದೃಷ್ಟಿಕೋನ ನಿಮಗೆ ಇಷ್ಟವಾಯಿತು?
             ವಿಭಿನ್ನವಾದ ಸಾಮಾಜಿಕ ಕಥನ ಇದು. ಒಂದು ಊರಿನಲ್ಲಿನ ಜನ ಜೀವನದ ಕತೆ. ಒಂದು ಕತೆಯ ಆಶಯವನ್ನು ನಾವು  ಸರಿಯಾಗಿ  ಅರ್ಥ ಮಾಡಿಕೊಳ್ಳಬೇಕು. 
೯. ’ಎದೆಗಾರಿಕೆ’ ಸಿನೆಮಾ ಭೂಗತ ಜಗತ್ತಿನ ವಿವರಗಳುಳ್ಳ ಕತೆಯಾದರೂ, ಮನುಷ್ಯ ಸಂಬಂಧಗಳ ಸೂಕ್ಷ್ಮತೆಗಳು   ತೊಳಲಾಟಗಳು ಕಾಣುತ್ತವೆ. ಆದರೆ ಕಿರಗೂರಿನ ಗಯ್ಯಾಳಿಗಳಲ್ಲಿ ಬೇರೊಂದು ರೀತಿಯಲ್ಲೇ ವ್ಯಕ್ತವಾಗುತ್ತದೆ.   ಕತೆಯುದ್ದಕ್ಕೂ ಒಂದು ರೀತಿಯ ಅಬ್ಬರದ ಗಾಳಿ ಬೀಸುತ್ತದೆ. ವಿಭಿನ್ನವಾದ ಸಾಮಾಜಿಕ ವಾತಾವರಣ ಇದೆ. ಇದನ್ನು ಹೇಗೆ ಪರಿಭಾವಿಸುತ್ತೀರಿ ?
ಇದು ನನಗೆ ಹತ್ತಿರವಾದ ಕತೆ. ಚಿಕ್ಕಂದಿನಿಂದಲೂ ನಾನು ಅದನ್ನು ನೋಡುತ್ತಾ ಬಂದಿದ್ದೇನೆ.  ತೇಜಸ್ವಿಯವರು ಹೇಳಿದ ಕಿರಿಗೂರಿನ ಹಳ್ಳಿಗಿಂತ ವಿಭಿನ್ನವಾದ ಜಗತ್ತನ್ನು ನೋಡಿದ್ದೀನಿ, ನೋಡುತ್ತಿದ್ದೀನಿ.  ಅಲ್ಲಿನ ಹೆಣ್ಮಕ್ಕಳ ಮನಸ್ಥಿತಿ ಹೇಗೆ ಇರುತ್ತದೆ ಎಂಬುದನ್ನು ನಾನು ಅರಿಯಬಲ್ಲೆ . ಆದ ಕಾರಣ  ಈ ಸಿನಿಮಾ ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ.
 ೧೦ ”ಎದೆಗಾರಿಕೆ’ಯಲ್ಲಿ ಸಿಗರೇಟ್ ಒಂದು ಪಾತ್ರವಾಗಿ ಬಂದಿದೆ. ಕಾಕತಾಳೀಯವಾಗಿ ಈ ಕತೆಯಲ್ಲಿಗೂ ಹೆಬ್ಬಲಸಿನ ಮರದ ಸುತ್ತ ಪಾತ್ರಗಳು ಹೆಣೆದು ಕೊಂಡಿದೆ . ಇದು ನಿಮಗೆ ಹೇಗೆ ಸಹಕಾರಿಯಾಯಿತು?
   ಎದೆಗಾರಿಕೆಯಲ್ಲಿ ನಾವು ಈಗಾಗಲೆ ’ಸಿಗರೇಟ್’ ಅನ್ನು ಒಂದು ಪಾತ್ರವಾಗಿ  ತೆರೆಯ ಮೇಲೆ ತಂದಿದ್ದೇವೆ..   ವಸ್ತುಗಳಿಗೂ ಜೀವವನ್ನು ಕಲ್ಪಿಸಿಕೊಟ್ಟಿದ್ದೇವೆ. ಪ್ರಸ್ತುತ ಕತೆಯಲ್ಲಿ  ಮರ ಎಂಬುದು ಜೀವಂತ ಚಿತ್ರಿಕೆ.  
೧೧. ಹೆಬ್ಬಲಸಿನ ಮರದ ದಿಮ್ಮಿ ಉರುಳುವ ಸ್ಕ್ರಿಪ್ಟ್ ಅನ್ನು ಹೇಗೆ ಚಿತ್ರಿಸಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ನಮ್ಮದು !
ಹೆಬ್ಬಲಸಿನ ಮರದ ದಿಮ್ಮಿ ಉರುಳುವ ಸೀನ್  ..ಅದು ಸಿನಿಮಾ ನೋಡಿದ ನಂತರ ನೀವೇ ಹೇಳಬೇಕು. ಹಾಗೆಯೇ ಕತೆಯಲ್ಲಿ ಬರುವ ದೃಶ್ಯಗಳೆಲ್ಲವೂ ಅವು ಇರುವಂತೆಯೇ ಚಿತ್ರದಲ್ಲಿ ಬರಲು ಸಾಧ್ಯವಿಲ್ಲ. ಕೆಲವು ಬದಲಾವಣೆಗಳು ಆಗುತ್ತವೆ. ಅದರಂತೆಯೇ ನಾವು ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡಿದ್ದೇವೆ.
೧೨. ಈಗ ತೇಜಸ್ವಿಯವರು ನಮ್ಮೊಡನೆ ಇಲ್ಲ. ಅವರು ನಿಮ್ಮ ಸಿನಿಮಾ ನೋಡಿದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು ಅಂತ ನಿಮಗೆ ಅನಿಸುತ್ತದೆ. 
ನನಗೆ ನೆನಪಿರುವಂತೆ ಅಗ್ನಿ ಪತ್ರಿಕೆಯಲ್ಲಿ  ನಾನು  ಪತ್ರಕರ್ತೆಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಗ್ನಿ ಕಚೇರಿಗೆ ಒಮ್ಮೆ ತೇಜಸ್ವಿಯವರು ಬಂದಿದ್ದರು. ಒಬ್ಬ ಲೇಖಕನಾಗಿ ತೇಜಸ್ವಿಯವರು ಹೇಗಿದ್ದರು ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಈ ಕತೆಯ ಆಶಯವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎನ್ನುವ ನಂಬಿಕೆ ನನ್ನದು. ಜನ ನೋಡುವ ಸಿನೆಮಾ ಮಾಡಿ ಎನ್ನುವ ತೇಜಸ್ವಿಯವರ ಆಶಕ್ಕೆ ತಕ್ಕಂತೆ ಸಿನೆಮಾ ಮಾಡಿದ್ದೇವೆ. ಹಾಗಾಗಿ ಖಂಡಿತವಾಗಿಯೂ ಈ ಸಿನಿಮಾವನ್ನು ನೋಡಿ ತೇಜಸ್ವಿ  ಮೆಚ್ಚಿಕೊಳ್ಳುತ್ತಿದ್ದರು. 'ಒಳ್ಳೆಯ ಕೆಲಸವನ್ನೇ ಮಾಡಿದ್ದೀ' ಎಂದು ಬೆನ್ನು ತಟ್ಟುತ್ತಿದ್ದರು !!
ಇಂಗ್ಲಿಷ್ ಗಯ್ಯಾಳಿಗಳು
ಕಿರಿಗೂರಿನ ಗಯ್ಯಾಳಿ ಚಿತ್ರದಲ್ಲಿ ನನ್ನದು ಕಾಳಿಯ ಪಾತ್ರ. ಪಾತ್ರಕ್ಕೆ ಆಯ್ಕೆಯಾದಾಗ ಸ್ವಲ್ಪ ಭಯ ಇತ್ತು. ಶೂಟಿಂಗ್ ಮಾಡುವ ಮುನ್ನ ಹಳ್ಳಿಯ ಪರಿಸರವನ್ನು ಅರಿತುಕೊಳ್ಳಲು ನಮ್ಮನ್ನು ಬಿಟ್ಟಿದ್ದರು. ಅಲ್ಲಿನ ಗ್ರಾಮದಲ್ಲಿ ಒಬ್ಬರು ಅಜ್ಜಿ ನಮಗೆ ಹೇಗೆ ಬೈಯೋದು ಅನ್ನೋದನ್ನ ಹೇಳಿ ಕೊಟ್ಟರು.ಮೊದ ಮೊದಲು ಬೈಗುಳ ಹೇಳುವುದಕ್ಕೆ ಕಷ್ಟವಾಗಿತ್ತು. ಆಮೇಲೆ ಚೆನ್ನಾಗಿ ಬೈಯೋದನ್ನು ಕಲಿತುಕೊಂಡೆ. ನಾನು ಪೇಟೆಯವಳಾದ ಕಾರಣ ನನಗೆ ಹಳ್ಳಿ ಜೀವನದ ಬಗ್ಗೆ ಯಾವುದೇ ಐಡಿಯಾ ಇರಲಿಲ್ಲ. ಆದ್ರೆ ಹಳ್ಳಿಯವರ ವೇಷ ತೊಟ್ಟಾಗ ನಾನು ಥೇಟು ಹಳ್ಳಿಯವಳಂತೆ ಆಗಿ ಬಿಟ್ಟೆ. ಬಾಡಿ ಲ್ಯಾಂಗ್ವೇಜ್  ಕೂಡಾ ಬದಲಾಯಿತು.  ಮೊದಲ ಮೂರು ದಿನಗಳ ಕಾಲ ನಾವು ಗಯ್ಯಾಳಿ ಪಾತ್ರಗಳೆಲ್ಲಾ ಸೆಟ್ ನಲ್ಲಿ ಇಂಗ್ಲೀಷನಲ್ಲೇ ಪರಸ್ಪರ ಮಾತಾಡಿಕೊಂಡಿರುತ್ತಿದ್ದೆವು. ಆಮೇಲೆ ಈ ಡ್ರೆಸ್ ಹಾಕೊಂಡು ಇಂಗ್ಲಿಷ್ ಮಾತಾಡುವುದು ಸಿಂಕ್ ಆಗುತ್ತಿರಲಿಲ್ಲ ಎಂದು ನಮಗೆ ಅನಿಸತೊಡಗಿತು. ಆಮೇಲೆ ಎಲ್ಲರೂ ಕನ್ನಡದಲ್ಲೇ ವ್ಯವಹರಿಸತೊಡಗಿದೆ. ನಾವೆಲ್ಲಾ ಅಲ್ಲಿ ಲಿವಿಂಗ್ ಕ್ಯಾರೆಕ್ಟರ್ ಆಗಿ ಬಿಟ್ಟಿದ್ದೆವು.
-ಸುಕೃತಾ ವಾಗ್ಲೆ  , ನಟಿ
ಸಂದರ್ಶನ :-ರಶ್ಮಿ ಕಾಸರಗೋಡು, ಎಂ ಆರ್ ಭಗವತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com