
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ "ಸಾಮೂಹಿಕ ಪ್ರಯತ್ನದ ಫಲ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಹೇಳಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ದೇಶದ ಅತ್ಯಂತ ಹಳೆಯ ಪಕ್ಷ ಸ್ಪಷ್ಟ ಬಹುಮತ ಪಡೆದಿದೆ. ಫಲಿತಾಂಶ ಮತ್ತು ಮುಂದಿನ ಮುಖ್ಯಮಂತ್ರಿ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಒಮ್ಮತದ ನಿರ್ಧಾರದ ಮೂಲಕ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು.
ಎಲ್ಲಾ ಸಮುದಾಯದ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಚುನಾವಣಾ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷ ಶ್ರಮಿಸಲಿದೆ ಎಂದರು.
ಖರ್ಗೆಯವರು ಕರ್ನಾಟಕದವರಾಗಿದ್ದು, ಅವರಿಗೆ ವಿಧಾನಸಭೆ ಚುನಾವಣೆ ನಿರ್ಣಾಯಕವಾಗಿತ್ತು. ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
"ಕಾಂಗ್ರೆಸ್‌ಗೆ ಭಾರೀ ಜನಾದೇಶ ನೀಡಿದ್ದಕ್ಕಾಗಿ ಕರ್ನಾಟಕದ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ನಾವು ಜನಾದೇಶವನ್ನು ಗೌರವಿಸುತ್ತೇವೆ ಮತ್ತು ನಮ್ಮ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ ಎಲ್ಲಾ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಧನ್ಯವಾದ ಹೇಳುತ್ತೇನೆ. ಸೋನಿಯಾ ಗಾಂಧಿ ಅವರು ಚೆನ್ನಾಗಿಲ್ಲದಿದ್ದರೂ ಪ್ರಚಾರ ಮಾಡಿದ್ದರು ಎಂದು ಖರ್ಗೆ ಹೇಳಿದರು.
Advertisement