ಚಿನ್ನದಂತ ನನ್ನ ಕ್ಷೇತ್ರ ಬಿಟ್ಟು ಹೈಕಮಾಂಡ್ ಆದೇಶದಂತೆ ಹೋಗಿ ಸ್ಪರ್ಧಿಸಿ ಸೋತೆ, ನಾನೀಗ ನಿರುದ್ಯೋಗಿ: ವಿ ಸೋಮಣ್ಣ
ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆ ಮತದಾನದ ಫಲಿತಾಂಶದಲ್ಲಿ ವರುಣಾ ಮತ್ತು ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋತಿರುವ ವಿ ಸೋಮಣ್ಣ ಇಂದು ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ತಮ್ಮ ಮನದ ಭಾವನೆಗಳನ್ನು ಹಂಚಿಕೊಂಡರು.
‘ಸೋತಾಗಿದೆ, ಏನು ಮಾತಾಡಲಿ? ಮಾತಾಡೋದು ಅಗತ್ಯ ಇಲ್ಲ. ಸೋತಿದ್ದೇನೆ ಅಷ್ಟೇ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದ್ದೆ. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡೆ, ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತೆಂದು ಹೋದೆ. ಇದೀಗ ಜನ ತೀರ್ಮಾನ ಮಾಡಿದ್ದಾರೆ. ಚೆನ್ನಾಗಿ ದುಡಿಯುತ್ತಿದ್ದ ನಾನು ಈಗ ನಿರುದ್ಯೋಗಿಯಾಗಿದ್ದೇನೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದಿದ್ದಾರೆ.
ಬಿಜೆಪಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿದೆಯೇ ಎಂದು ಕೇಳಿದ್ದಕ್ಕೆ ‘ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಿಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದೀವಲ್ಲ? ಯಡಿಯೂರಪ್ಪ ಹೇಳಿದ್ದಾರಾ ಮೂಲೆಗುಂಪು ಮಾಡಿದ್ದಾರೆ ಅಂತ. ಸೋತ ತಕ್ಷಣ ಎಲ್ಲವೂ ಮುಗಿದು ಹೋಯ್ತಾ, ಪಕ್ಷಕ್ಕೆ ಹಿನ್ನಡೆ ಆಗಿದ್ದು ನಮಗೆಲ್ಲ ಎಚ್ಚರಿಕೆ ಗಂಟೆ, ಜನರ ತೀರ್ಮಾನ ಇದು, ಬದ್ಧರಾಗಬೇಕು. ದೇಶಕ್ಕೆ ಮೋದಿ ಪ್ರಶ್ನಾತೀತ ನಾಯಕರು, ಅವರ ಕೆಲಸಗಳು ಅವಿಸ್ಮರಣೀಯ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳೇ ಅವರ ಗೆಲುವಿಗೆ ಕಾರಣ ಎಂದಿದ್ದಾರೆ.
ಮಗನಿಗೆ ಸೀಟು ಕೇಳಿದ್ದೆ: ಎಲ್ಲರಂತೆ ನನಗೂ ಆಸೆಯಿದೆ, ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದೆ. ಕೊಡಲಿಲ್ಲ, ಎಲ್ಲ ವಿಧಿನಿಯಮದಂತೆ ಆಗಿದೆ ಎಂದು ಬೇಸರದಿಂದ ಹೇಳಿಕೊಂಡರು.
ಡಿಕೆಶಿಗೆ ಪರೋಕ್ಷ ಒಲವು: ಇನ್ನು ಇದೇ ವೇಳೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ, ಡಿಕೆಶಿ ನಡುವೆ ಪೈಪೋಟಿ ಕುರಿತು ‘ಅದು ಅವರ ಪಕ್ಷದ ನಿರ್ಧಾರ. ಡಿ.ಕೆ. ಶಿವಕುಮಾರ್ ನಮ್ಮ ತಾಲ್ಲೂಕಿನವರು. ಸಿದ್ದರಾಮಯ್ಯ ಹಿರಿಯ ನಾಯಕರು, ಜೊತೆಗೆ ಈಗಾಗಲೇ ಒಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ಈಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಾಗಿರುವವರು. ಯಾರನ್ನು ಸಿಎಂ ಮಾಡಬೇಕೆಂದು ಅವರ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಶಿವಕುಮಾರ್ ಸಿಎಂ ಆಗಬೇಕೆಂಬ ಒಲವು ತೋರಿಸಿದರು ಸೋಮಣ್ಣ.

