ಬೆಂಗಳೂರು: 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ. 2019ರ ಜುಲೈನಿಂದ ಈವರೆಗೆ ಅಧಿಕಾರ ಹಿಡಿದಿದ್ದ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದ ಕಾರಣ ರಾಜ್ಯದ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದರು. ಈ ಬಾರಿ ಬಿಜೆಪಿ 65 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, 12 ಸಚಿವರು ಸೇರಿದಂತೆ ಘಟಾನುಘಟಿ ನಾಯಕರೇ ಸೋಲು ಕಂಡಿದ್ದಾರೆ.
ನಿನ್ನೆ ಸಂಜೆ ಮುಖ್ಯಮಂತ್ರಿ ಹುದ್ದೆಗೆ ಬಸವರಾಜ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೋಲಿಗೆ ನೈತಿಕ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಅವರು ರಾಜೀನಾಮೆ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಮತ್ತೊಮ್ಮೆ ಅಧಿಕಾರ ಹಿಡಿಯುವ ಆಸೆಯಲ್ಲಿದ್ದ ಬಿಜೆಪಿ ಪಕ್ಷಕ್ಕೆ, ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ. ನಿನ್ನೆ ಫಲಿತಾಂಶದ ಬಳಿಕ ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನೇ ಸೋಲಿನ ಹೊಣೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಈ ಕಾರಣದಿಂದ ನಳಿನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತಿದ್ದು, ನಾಳೆ ಸೋಮವಾರ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರತಿಕ್ರಿಯೆ ನೀಡಿರುವ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
Advertisement