ದಣಿದ ಸಿದ್ದರಾಮಯ್ಯ: ಪುನಶ್ಚೇತನಕ್ಕಾಗಿ ಆಯುರ್ವೇದ ಚಿಕಿತ್ಸೆ

ವಿಧಾನ ಪರಿಷತ್ತು ಮತ್ತು ಪಂಚಾಯತ್ ಚುನಾವಣೆ, ಬಜೆಟ್ ಅಧಿವೇಶನ, ಭ್ರಷ್ಟಾಚಾರ ನಿಗ್ರಹ ದಳ ರಚನೆ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ...
ಸಿದ್ದರಾಮಯ್ಯ ರೇಖಾಚಿತ್ರ
ಸಿದ್ದರಾಮಯ್ಯ ರೇಖಾಚಿತ್ರ
Updated on

ಮೈಸೂರು: ವಿಧಾನ ಪರಿಷತ್ತು ಮತ್ತು ಪಂಚಾಯತ್ ಚುನಾವಣೆ, ಬಜೆಟ್ ಅಧಿವೇಶನ, ಭ್ರಷ್ಟಾಚಾರ ನಿಗ್ರಹ ದಳ ರಚನೆ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹೀಗೆ ಒಂದರ ಮೇಲೊಂದರಂತೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಡುವಿಲ್ಲದ ಕೆಲಸಗಳಿಂದ ಮತ್ತು ಒತ್ತಡಗಳಿಂದ ಬಸವಳಿದು ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಅಲ್ಪ ವಿಶ್ರಾಂತಿ ಪಡೆಯಲು ಬಯಸಿದ್ದಾರೆ.

ಕೆಲ ದಿನಗಳ ಹಿಂದೆ ಹೂಬ್ಲಾಟ್ ವಾಚು ಮತ್ತು ಎಸಿಬಿ ರಚನೆಗೆ ಸಂಬಂಧಪಟ್ಟಂತೆ ಮತ್ತು ಈಗ ಸಚಿವ ಸಂಪುಟ ಪುನಾರಚನೆಗೆ ಕುರಿತು ವಿರೋಧ ಪಕ್ಷದವರಿಂದ ತೀವ್ರ ಟೀಕೆ, ಒತ್ತಡಕ್ಕೆ ಗುರಿಯಾಗಿ ಸುಸ್ತಾಗಿ ಹೋಗಿರುವ ಅವರು ಮನಸ್ಸು ಮತ್ತು ದೇಹದ ಪುನಶ್ಚೇತನಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿರುವ ಆಯುರ್ವೇದ ತಾಣದತ್ತ ಮುಖ ಮಾಡಿದ್ದಾರೆ.

ಬಿಡುವಿಲ್ಲದ ವೇಳಾಪಟ್ಟಿಯಿಂದ ಕೊಂಚ ಮುಕ್ತಿ ಪಡೆಯಲು ಮುಖ್ಯಮಂತ್ರಿಯವರು ಒಳ್ಳೆಯ ಆಯುರ್ವೇದ ಗಿಡಮೂಲಿಕೆಗಳನ್ನು ಹೊಂದಿರುವ ಸಾವಯವ ಕೃಷಿ ಮಾಡುವ ಪರಿಸರ ಸ್ನೇಹಿ ವಾತಾವರಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.

ವಿಧಾನಸಭೆ ಕಲಾಪದ ವೇಳೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿದ್ದೆ ಮಾಡಿ ಹಲವು ಬಾರಿ ಟೀಕೆಗೆ ಗುರಿಯಾಗುವ ಅವರು ನಿದ್ರಾ ಸಮಸ್ಯೆಯಿಂದ ಹೊರಬರಲು ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಹೆಚ್ಚು ನಿದ್ದೆ ಮಾಡುವುದು ಮತ್ತು ಜೋರಾಗಿ ಗೊರಕೆ ಹೊಡೆಯುವುದು, ರಾತ್ರಿ ವೇಳೆ ನಿದ್ದೆ ಬಾರದಿರುವ ಸಮಸ್ಯೆ ಮುಖ್ಯಮಂತ್ರಿಯವರಿಗಿದ್ದು, ಅದರಿಂದ ಹೊರಬರಲು ಯೋಗಾಭ್ಯಾಸ ಮಾಡುತ್ತಿದ್ದಾರೆ. ತೂಕದಲ್ಲಿಯೂ ಹೆಚ್ಚಳ ಕಂಡುಬಂದಿರುವುದರಿಂದ ಮಸಾಜ್, ಆಯುರ್ವೇದ ಥೆರಪಿ ಮತ್ತು ಆಯುರ್ವೇದ ಡಯಟ್ ಎಂದು ತೂಕ ಇಳಿಸಲು ಯತ್ನಿಸುತ್ತಿದ್ದಾರೆ.

ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಎಸಿಬಿ ರಚನೆ ಮತ್ತು ಸರ್ಕಾರದ ಕೆಲವು ನ್ಯೂನತೆಗಳಿಂದ ಹಿರಿಯ ಕಾಂಗ್ರೆಸ್ ನಾಯಕರಿಂದ ಸಿದ್ದರಾಮಯ್ಯ ಅವರು ಟೀಕೆಗೆ ಗುರಿಯಾಗಿದ್ದು, ಅವರ ಮನವೊಲಿಸಲು ತಕ್ಷಣವೇ ನಿಗಮ, ಮಂಡಳಿಗಳಿಗೆ ನಿರ್ದೇಶಕರ ನೇಮಕಾತಿ ಮಾಡಲು ಒಲವು ತೋರಿದ್ದಾರೆ. ಹೀಗಾಗಿ ತಮ್ಮ ನಿಕಟವರ್ತಿಗಳೊಂದಿಗೆ ನಿಗಮ ಮಂಡಳಿಗೆ ನಿರ್ದೇಶಕರ ನೇಮಕಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ತೊಡಗಿದ್ದಾರೆ. ಯುಗಾದಿ ಹಬ್ಬದೊಳಗೆ ಪಟ್ಟಿ ಹೊರಬರುವ ನಿರೀಕ್ಷೆಯಿದೆ. ಎಂಟು ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿಯವರು ಬಹಳ ಜಾಣ್ಮೆಯಿಂದ 2018ರ ರಾಜ್ಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಸಚಿವರು, ಶಾಸಕರು, ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಬ್ಲಾಕ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಸಂಪುಟ ಪುನಾರ್ರಚನೆ ಮಾಡುವ ಯೋಚನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com