ಒಳಚರಂಡಿಯಲ್ಲಿ ಉಸಿರುಗಟ್ಟಿ ನಾಲ್ವರು ಸಾವು

ದೊಡ್ಡಬಳ್ಳಾಪುರ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ಒಳಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಹಾಗೂ ಅವರನ್ನು ರಕ್ಷಿಸಲು ಹೋದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:  ದೊಡ್ಡಬಳ್ಳಾಪುರ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ಒಳಚರಂಡಿ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ಹಾಗೂ ಅವರನ್ನು ರಕ್ಷಿಸಲು ಹೋದ ಇಬ್ಬರು ದಾರಿಹೋಕರು ಮ್ಯಾನ್‌ಹೋಲ್‌ನಲ್ಲಿ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟ ಕಾರ್ಮಿಕರನ್ನು ತಮಿಳುನಾಡಿನ ಗೌಂಡರ್  ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಜಗನ್ನಾಥ್‌(24) ಎಂದು ಗುರುತಿಸಲಾಗಿದೆ. ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಇಬ್ಬರು ಕಾರ್ಮಿಕರು ಅಲ್ಲಿ ಸಿಲುಕಿರುವುದನ್ನು ನೋಡಿ ಅವರನ್ನು ರಕ್ಷಿಸಲು ಹೋದ ದೊಡ್ಡಬಳ್ಳಾಪುರ ನಗರದ ವನ್ನಿಗರಪೇಟೆ ನಿವಾಸಿ ಮಧು(21) ಮತ್ತು  ಹಮಾಮ್‌ ಗ್ರಾಮದ ಮುನಿರಾಜು (22) ಕೂಡಾ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ನಡೆದದ್ದೇನು? : ಶ್ರೀನಗರದಲ್ಲಿ ಒಳಚರಂಡಿ ಸ್ವಚ್ಛಗೊಳಿಸಿ ನೀರು ಹರಿಯುವಂತೆ ಮಾಡಲು ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುತ್ತಿಗೆ ಕಾರ್ಮಿಕ ಮುನಿಸ್ವಾಮಿ ಮ್ಯಾನ್‌ಹೋಲ್‌ ಒಳಗೆ ಇಳಿದಿದ್ದಾರೆ. ಸುಮಾರು 14 ಅಡಿಗಳಷ್ಟು ಆಳವಾಗಿದ್ದ ಮ್ಯಾನ್‌ಹೋಲ್‌ ಒಳಗೆ ಮಿಥೇನ್‌ ಗ್ಯಾಸ್‌ ತುಂಬಿಕೊಂಡಿತ್ತು ಎನ್ನಲಾಗಿದೆ. ಒಳಗೆ ಇಳಿದಿದ್ದ ಕಾರ್ಮಿಕ ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಮೇಲೆತ್ತುವಂತೆ ಕೂಗಿಕೊಂಡಾಗ ಮೇಲಿದ್ದ ಮತ್ತೊಬ್ಬ ಕಾರ್ಮಿಕ ಜಗನ್ನಾಥ್‌ ಸಹ ಒಳಗೆ ಇಳಿದಿದ್ದಾರೆ.
ಇಬ್ಬರು ಕಾರ್ಮಿಕರು ಮ್ಯಾನ್‌ಹೋಲ್‌ ಒಳಗೆ ಸಿಕ್ಕಿಹಾಕಿಕೊಂಡು ಕೂಗಿಕೊಳ್ಳುತ್ತಿದ್ದನ್ನು ಬೈಕ್‌ನಲ್ಲಿ ಹೋಗುತ್ತಿದ್ದ ಮಧು ಕೇಳಿಸಿಕೊಂಡು ಮೇಲೆತ್ತಲು ಸಹಾಯ ಮಾಡಲು ಒಳಗಿದ್ದ ಕಾರ್ಮಿಕರಿಗೆ ಕೈಗಳನ್ನು ನೀಡಿದ್ದಾರೆ. ಮ್ಯಾನ್‌ಹೋಲ್‌ ಒಳಗಿದ್ದ ಕಾರ್ಮಿಕರು ಮಧುವನ್ನು ಒಳಗೆ ಎಳೆದುಕೊಂಡಿದ್ದಾರೆ. ಇದನ್ನು ನೋಡಿದ ಮುನಿರಾಜು ಮಧುವನ್ನು ರಕ್ಷಿಸಲು ಮುಂದಾಗಿದ್ದಾರೆ. ಆವೇಳೆ ಮುನಿರಾಜು ಕೂಡಾ ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಕಂಪನಿ ವಿರುದ್ಧ ಕ್ರಮ: ಒಳಚರಂಡಿ ಕಾಮಗಾರಿ ಗುತ್ತಿಗೆಯನ್ನು ಹೈದರಾಬಾದ್‌ ಮೂಲದ ರಾವುಸ್‌ ಕಂಪೆನಿ ಗುತ್ತಿಗೆ ಪಡೆದಿದೆ. ಇದೀಗ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ದೊಡ್ಡಬಳ್ಳಾಪುಪ ಮುನ್ಸಿಪಲ್ ಕೌನ್ಸಿಲ್ ಪ್ರಧಾನ ಆಯುಕ್ತ ನರಸಿಂಹಲು ಹೇಳಿದ್ದಾರೆ.  
ಪ್ರಕರಣದ ಬಗ್ಗೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com