ಕಾರಿನಲ್ಲೇ ಕೀ ಮರೆತ ಅಜ್ಜ, ಎರಡು ತಾಸು ಕಾರಿನಲ್ಲೇ ಸಿಕ್ಕಿ ಮಗು ಪರದಾಟ

ಗರದ ಕ್ಯಾಂಪ್ ಪ್ರದೇಶದ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ಕಾರಿನ ಸೆಂಟ್ರಲ್ ಲಾಕ್ ಆಕಸ್ಮಿಕವಾಗಿ ಬಿದ್ದ ಪರಿಣಾಮ, ಅದರಲ್ಲಿದ್ದ ಎರಡೂವರೆ ವರ್ಷದ ಮಗು ಸುಮಾರು 2 ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು: ನಗರದ ಕ್ಯಾಂಪ್ ಪ್ರದೇಶದ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ಕಾರಿನ ಸೆಂಟ್ರಲ್ ಲಾಕ್ ಆಕಸ್ಮಿಕವಾಗಿ ಬಿದ್ದ ಪರಿಣಾಮ, ಅದರಲ್ಲಿದ್ದ ಎರಡೂವರೆ ವರ್ಷದ ಮಗು ಸುಮಾರು 2 ತಾಸುಗಳವರೆಗೆ ಹೊರಬರಲಾಗದೆ ಪರದಾಡಿತು.

ಹಟ್ಟಿಚಿನ್ನದಗಣಿ ಗ್ರಾಮದ ಸಿದ್ಧಾರೂಢಮಠ ಬಳಿಯ ನಿವಾಸಿ, ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲೀಕ ವಿಜನ್ ಅವರ ಮೊಮ್ಮಗ ಸೋನು ಕಾರಿನಲ್ಲಿ ಸಿಲುಕಿಕೊಂಡಿದ್ದ ಬಾಲಕ. ಮನೆಯಿಂದ ಕಾರಿನಲ್ಲಿ ತಮ್ಮ ಮೊಮ್ಮಗನೊಂದಿಗೆ ಬಂದಿದ್ದ ಅಜ್ಜ, ಬಾಲಕನನ್ನು ಕಾರಿನಲ್ಲಿ ಕೂರಿಸಿ, ಜನರಲ್ ಸ್ಟೋರ್‌ನಲ್ಲಿ ಸಾಮಾನು ಖರೀದಿಸಲು ತೆರಳಿದ್ದರು. ಅವಸರದಲ್ಲಿ ಕೀಲಿಯನ್ನು ಕಾರಿನಲ್ಲೇ ಮರೆತಿದ್ದರು. ಈ ಸಂದರ್ಭದಲ್ಲಿ ಕಾರಿನ ಸೆಂಟ್ರಲ್ ಲಾಕ್ ಆಕಸ್ಮಿಕವಾಗಿ ಬಿದ್ದಿದೆ. ಸ್ಟೋರ್‌ನಿಂದ ಮರಳಿಬಂದು, ಲಾಕ್ ತೆಗೆಯಲು ವಿಜನ್ ಅವರು ಹರಸಾಹಸ ಮಾಡಿದರು. ಸುತ್ತಲಿನ ಜನರೂ ಆತಂಕಗೊಂಡರು.

ಕೆಲವರು ಕಾರಿನ ಬಾಗಿಲು ಮುರಿದು, ಮಗುವನ್ನು ಹೊರಗೆ ತರಲು ಮಾಡಿದ ಯತ್ನವೂ ಕೈಗೂಡಲಿಲ್ಲ. ಈ ವೇಳೆ ಮನೆಯಲ್ಲಿ ಮತ್ತೊಂದು ಕೀಲಿ ಇರುವುದು ವಿಜನ್ ಅವರಿಗೆ ನೆನಪಾಯಿತು. ಮನೆಗೆ ಹೋಗಿ ಅವರು ಕೀಲಿ ತರುವಷ್ಟರ ಹೊತ್ತಿಗೆ ಎರಡು ತಾಸು ಕಳೆದಿತ್ತು. ಮತ್ತೊಂದು ಕೀಲಿಯಿಂದ ಕಾರಿನ ಬಾಗಿಲು ತೆರೆದು, ಮಗುವನ್ನು ಹೊರಗೆ ತರಲಾಯಿತು. ಕಾರಿನಲ್ಲಿ ಎಸಿ ಚಾಲೂ ಇದ್ದುದರಿಂದ ಮಗುವಿನ ಉಸಿರಾಟಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ.

ಕಾರಿನಲ್ಲಿದ್ದ ಮಗು ಗಾಬರಿಯಿಂದ ಚೀರಾಡಿತ್ತು. ಅಳುತ್ತಲೇ 2 ತಾಸು ಕಾರಿನಲ್ಲಿ ಕಳೆದಿತ್ತು. ಹೊರಗೆ ಬಂದಾಗ ತೀವ್ರ ಬಳಲಿದಂತೆ ಕಂಡು ಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com