ಪಿಯು ಪ್ರಾಧ್ಯಾಪಕರ ಪ್ರತಿಭಟನೆ
ಪಿಯು ಪ್ರಾಧ್ಯಾಪಕರ ಪ್ರತಿಭಟನೆ

ಪಿಯು ಪ್ರಾಧ್ಯಾಪಕರೊಂದಿಗಿನ ಸರ್ಕಾರದ ಮಾತುಕತೆ ಮತ್ತೊಮ್ಮೆ ವಿಫಲ: ಮೌಲ್ಯಮಾಪನ ಬಹಿಷ್ಕಾರ ಮುಂದುವರಿಕೆ

ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪಿಯು ಉಪನ್ಯಾಸಕರೊಂದಿಗೆ ರಾಜ್ಯ ಸರ್ಕಾರ ನಡೆಸಿರುವ ಮತ್ತೊಂದು ಸುತ್ತಿನ ಮಾತುಕತೆ ವಿಫಲವಾಗಿದೆ.

ಬೆಂಗಳೂರು: ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪಿಯು ಉಪನ್ಯಾಸಕರೊಂದಿಗೆ ರಾಜ್ಯ ಸರ್ಕಾರ ನಡೆಸಿರುವ ಮತ್ತೊಂದು ಸುತ್ತಿನ ಮಾತುಕತೆ ವಿಫಲವಾಗಿದೆ.
ಪ್ರಾಥಮಿಕ- ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಭಟನಾ ನಿರತ ಉಪನ್ಯಾಸಕರೊಂದಿಗೆ ಸಭೆ ನಡೆಸಿದರು. ಆದರೆ ವೇತನ ತಾರತಮ್ಯ ವಿಷಯದ ಬಗ್ಗೆ ಒಮ್ಮತ ಮೂಡದೇ ಸಭೆ ವಿಫಲವಾಗಿದೆ. ಸಭೆಯ ನಂತರ ಮಾತನಾಡಿರುವ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಸರ್ಕಾರದೊಂದಿಗಿನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ, ಮೌಲ್ಯಮಾಪನ ಬಹಿಷ್ಕಾರ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕಿಮ್ಮನೆ ರತ್ನಾಕರ್, ವೇತನ ತಾರತಮ್ಯ ವಿಷಯ ಎಲ್ಲಾ ಇಲಾಖೆಗಳಲ್ಲೂ ಇದೆ. ಪಿಯು ಪ್ರಾಧ್ಯಾಪಕರ ವೇತನ ತಾರತಮ್ಯವನ್ನು ಮಾತ್ರ ಬಗೆಹರಿಸಲು ಸಾಧ್ಯವಿಲ್ಲ. ಎಲ್ಲಾ 28 ಇಲಾಖೆಗಳ ವೇತನ ತಾರತಮ್ಯವನ್ನು ಬಗೆಹರಿಸಬೇಕಾಗುತ್ತದೆ. ವೇತನ ತಾರತಮ್ಯ ಬಗೆಹರಿಸಲು ಸಿಎಂ ಸಿದ್ದರಾಮಯ್ಯ 40 -50 ಕೋಟಿ ಕೊಡಲು ಸಿದ್ಧರಿದ್ದಾರೆ. ಸಭೆ ವಿಫಲವಾಗಿರುವುದು ಹಾಗೂ ಪ್ರಾಧ್ಯಾಪಕರ ಬೇಡಿಕೆ ಬಗ್ಗೆ ಮತ್ತೊಮ್ಮೆ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುವುದಾಗಿ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.   
ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾತನಾಡಿರುವ ಸಚಿವರು, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮಾ.21 ರಂದೇ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಇನ್ನೂ ಹುದ್ದೆಯಲ್ಲಿ ಮುಂದುವರೆದಿದ್ದೇನೆ. ಏ.12 ರಂದು ಕೆಮಿಸ್ಟ್ರಿ ಪತ್ರಿಕೆ ಸೋರಿಕೆಯಾಗುವುದಿಲ್ಲ, ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com