ದ್ವಿತೀಯ ಪಿಯುಸಿ ಫಲಿತಾಂಶ ಸಿಇಟಿ ರಿಸಲ್ಟ್ ಗೆ ಮುನ್ನ ಘೋಷಣೆ: ಕಿಮ್ಮನೆ ರತ್ನಾಕರ್

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ತಡವಾಗಿ ಪ್ರಕಟವಾಗಬಹುದು ಎಂಬುದನ್ನು ಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್...
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್

ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ತಡವಾಗಿ ಪ್ರಕಟವಾಗಬಹುದು ಎಂಬುದನ್ನು ಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕೊನೆಗೂ ಒಪ್ಪಿಕೊಂಡಿದ್ದಾರೆ. ಇದುವರೆಗೂ ಸಮಯಕ್ಕೆ ಸರಿಯಾಗಿ ಫಲಿತಾಂಶ ಪ್ರಕಟಿಸುತ್ತೇವೆ ಎಂದು ಹೇಳುತ್ತಿದ್ದ ಸಚಿವರು ನಿನ್ನೆ ಮಾತನಾಡುತ್ತಾ ''ಈ ಹಿಂದೆ ಕೂಡ ಮೇ ಮೊದಲ ವಾರದ ನಂತರವೇ ಫಲಿತಾಂಶ ಪ್ರಕಟವಾಗುತ್ತಿತ್ತು'' ಎಂದು ಸಮರ್ಥಿಸಿಕೊಂಡಿದ್ದಾರೆ.

'' ಈ ಹಿಂದೆ ನಾನು ಮೇ 2ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಿದ್ದೆವು. ಆದರೆ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರಿಗೆ ಗಾಬರಿಪಡಿಸುವುದು ಇಷ್ಟವಿಲ್ಲ. ಅವರಿಗೆ ಮತ್ತೆ ಭರವಸೆ ನೀಡುತ್ತಿದ್ದೇನೆ. ಸಿಇಟಿ ಫಲಿತಾಂಶಕ್ಕೆ ಮುನ್ನ ಪಿಯುಸಿ ಫಲಿತಾಂಶ ಪ್ರಕಟಿಸುತ್ತೇವೆ ಎಂದು ಹೇಳಿದರು.

ಸಿಇಟಿ ಫಲಿತಾಂಶ ಮೇ 28ರಂದು ಫೋಷಣೆಯಾಗಲಿದ್ದು, ಅದಕ್ಕೂ ಮುನ್ನ ಪಿಯುಸಿ ಫಲಿತಾಂಶ ಹೊರಬೀಳಬೇಕಿದೆ. ಉಪನ್ಯಾಸಕರು ಮೌಲ್ಯಮಾಪನ ತಿರಸ್ಕರಿಸಿರುವುದರಿಂದ ಖಾಸಗಿ ಪಿಯು ಕಾಲೇಜುಗಳ ಉಪನ್ಯಾಸಕರು ಮತ್ತು ಹೈಸ್ಕೂಲ್  ಶಿಕ್ಷಕರ ಸಹಾಯ ಪಡೆದು ಮೌಲ್ಯಮಾಪನ ಮಾಡಲು ಸರ್ಕಾರ ನಿರ್ಧರಿಸಿದೆ.

11 ಸಾವಿರ ಮೌಲ್ಯಮಾಪಕರನ್ನು ಪಡೆಯುವ ವಿಶ್ವಾಸ ಪಿಯು ಶಿಕ್ಷಣ ಇಲಾಖೆಗಿದೆ. ಆದರೆ 15 ಸಾವಿರ ಮೌಲ್ಯಮಾಪಕರ ಅಗತ್ಯವಿದೆ. ಇಷ್ಟು ಮಂದಿ ಕೆಲಸಕ್ಕೆ ಬಂದರೆ ಪೂರ್ವ ಮೌಲ್ಯಮಾಪನ ಮತ್ತು ಮೌಲ್ಯಮಾಪನಕ್ಕೆ ಸಾಮಾನ್ಯವಾಗಿ 12 ದಿನಗಳು ಬೇಕು. ಆದರೆ ಇದೀಗ 20 ದಿನಗಳು ಬೇಕಾಗಬಹುದು. ನಾಳೆಯಿಂದ ಮೌಲ್ಯಮಾಪನ ಆರಂಭಿಸುವ ನಿರೀಕ್ಷೆಯಿದೆ.

'' ಅನುಭವಿ ಉಪನ್ಯಾಸಕರಿಂದಲೇ ಮೌಲ್ಯಮಾಪನ ಮಾಡಿಸಲಾಗುವುದು. ನಿರ್ದಿಷ್ಟ ವಿಷಯಗಳನ್ನು ಬೋಧಿಸುವ ಉಪನ್ಯಾಸಕರು ಆಯಾ ವಿಷಯಗಳನ್ನೇ ಮೌಲ್ಯಮಾಪನ ಮಾಡುತ್ತಾರೆ. ಮೌಲ್ಯಮಾಪನ ಮಾಡುವವರಿಗೆ ಪ್ರಶ್ನೆಪತ್ರಿಕೆ ಹಾಗೂ ಮಾಡೆಲ್ ಉತ್ತರ ಪತ್ರಿಕೆಗಳನ್ನು ನೀಡಲಾಗುವುದು. ಮೌಲ್ಯಮಾಪಕರಿಗೆ ಮಾರ್ಗದರ್ಶನ ಮತ್ತು ವಿಡಿಯೋ ಕಾನ್ಫರೆನ್ಸ್ ನಡೆಸಲಾಗುವುದು. ನಿವೃತ್ತ ಉಪನ್ಯಾಸಕರನ್ನು ಕೂಡ ಕರ್ತವ್ಯಕ್ಕೆ ಬಳಸಿಕೊಳ್ಳುವ ಯೋಚನೆಯಿದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಸಿಐಡಿ ದಾಳಿ ನಡೆದ 11 ಕಾಲೇಜುಗಳ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಸಚಿವರು ತಿಳಿಸಿದರು.ಮುಷ್ಕರದಲ್ಲಿ ನಿರತರಾಗಿರುವ ಉಪನ್ಯಾಸಕರಿಗೆ ಸರ್ಕಾರ ನೊಟೀಸ್ ಜಾರಿ ಮಾಡಿದೆ. ಮುಷ್ಕರ ನಿಲ್ಲಿಸಿ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಕಿಮ್ಮನೆ ರತ್ನಾಕರ್ ಉಪನ್ಯಾಸಕರಿಗೆ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com