
ಕಲಬುರ್ಗಿ/ ಮಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೇಸಿಗೆಯ ಬೇಗೆ ಹೆಚ್ಚುತ್ತಿದ್ದು ಹನಿ ನೀರಿಗೂ ಭಾರಿ ಬೇಡಿಕೆ ಇದೆ. ದೈಹಿಕ ಶ್ರಮವಹಿಸಿ ಕೆಲಸ ನಿರ್ವಹಿಸುವ ಕಾರ್ಮಿಕರಿಗಂತೂ ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ತುಸು ಹೆಚ್ಚಾಗಿಯೇ ಇದ್ದು, ಬಹುತೇಕ ಕಾರ್ಮಿಕರ ದುಡಿಮೆಯ ಶೇ.40 ರಷ್ಟು ಹಣ ಬಾಟಲ್ ನೀರಿಗೆ ಖರ್ಚಾಗುತ್ತಿದೆ.
ಕಲಬುರ್ಗಿ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಭೀಮ್ಶಾ ಚಿತಾಲಿ ಎಂಬ ಕಾರ್ಮಿಕ ತನಗೆ ಸಿಗುವ ದಿನದ ವೇತನ 200 ರೂಪಾಯಿಗಳ ಪೈಕಿ 80 ರೂಪಾಯಿಯನ್ನು ಬಾಟಲ್ ನೀರನ್ನು ಖರೀದಿಸುವುದಕ್ಕಾಗಿಯೇ ಬಳಸಬೇಕಾಗುತ್ತದೆ. ನೀರಿಗಾಗಿ ಖರ್ಚು ಮಾಡಿ ಆತನ ಬಳಿ ಉಳಿಯುವ ಹಣ ಕೇವಲ 120 ರೂಪಾಯಿಗಳಷ್ಟೇ.
ಭೀಮ್ಶಾ ಚಿತಾಲಿ ಎಂಬ ಕಾರ್ಮಿಕ ಕೆಲಸ ಮಾಡುವ ಜಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ ಸಹ ನೀರು ಕಲುಶಿತಗೊಂಡಿರುವುದರಿಂದ ಅದನ್ನು ಯಾರೂ ಬಳಸುವುದಿಲ್ಲ. ಕಳೆದ ವಾರ ಕಲುಷಿತ ನೀರನ್ನೇ ಸೇವಿಸಿದ 156 ಕಾರ್ಮಿಕರು ಅನಾರೋಗ್ಯಕ್ಕೀಡಾಗಿದ್ದಾರೆ. "ಆಹಾರಕ್ಕಿಂತ ನೀರು ಮುಖ್ಯ ಆದ್ದರಿಂದ ನೀರನ್ನು ಖರೀದಿ ಮಾಡದೇ ಬೇರೆ ದಾರಿ ಇಲ್ಲ" ಎನ್ನುತ್ತಾರೆ ಭೀಮ್ಶಾ ಚಿತಾಲಿ.
ಮಂಗಳೂರಿನಲ್ಲಿರುವ ಕಟ್ಟಡ ನಿರ್ಮಾಣದ ಕಾರ್ಮಿಕ ಸಿದ್ದಪ್ಪ, "ನನಗೆ ಹಾಗೂ ನನ್ನ ಪತ್ನಿಗೆ ದಿನವೊಂದಕ್ಕೆ 4 ಲೀಟರ್ ನೀರು ಅಗತ್ಯವಿದೆ. ನೀರನ್ನು ಖರೀದಿ ಮಾಡದೇ ಇರಲು ಸಾಧ್ಯವಿಲ್ಲ, ಪ್ರತಿ ಲೀಟರ್ ಗೆ 12 ರೂ ಕೊಟ್ಟು ನೀರನ್ನು ಖರೀದಿಸುತ್ತೇವೆ ಎಂದಿದ್ದಾರೆ.
ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನೀರಿನ ಮಾರಾಟ ಭರ್ಜರಿಯಿಂದ ಸಾಗುತ್ತಿದೆ. ಕಟ್ಟಡ ನಿರ್ಮಾಣವಾಗುತ್ತಿರುವ ನೆರೆಹೊರೆಯ ಮನೆಗಳಿಂದ ನೀರನ್ನು ಸಂಗ್ರಹಿಸಿಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ಎಲ್ಲೆಡೆ ನೀರಿನ ಸಮಸ್ಯೆ ಉಂಟಾಗಿದೆ. ಆದ್ದರಿಂದ ಕಾರ್ಮಿಕರಿಗೆ ನೀರಿನ ಬಾಟಲ ನ್ನು ಖರೀದಿಸದೇ ಬೇರೆ ದಾರಿ ಇಲ್ಲದಂತಾಗಿದೆ.
Advertisement