
ಬೆಂಗಳೂರು: ಇತ್ತೀಚೆಗೆ ಮುಗಿದ ಎಸ್ ಎಸ್ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರಿಗೆ ಆಶ್ಚರ್ಯವೊಂದು ಕಾದಿತ್ತು. ಕೆಲವು ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮೌಲ್ಯಮಾಪಕರು ತಮಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ವಾಟ್ಸಾಪ್ ನಲ್ಲಿ ಹರಿದಾಡಿದ್ದ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ಬೇರೆ ರೀತಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಒಬ್ಬ ವಿದ್ಯಾರ್ಥಿ ಗಣಿತ ಉತ್ತರ ಪತ್ರಿಕೆಯಲ್ಲಿ, ''ನಾನು ಪ್ರತಿದಿನ ಬೆಳಗ್ಗೆ 5.30ಕ್ಕೆ ಒದಲು ಎದ್ದೇಳುತ್ತಿದ್ದೆ. ಆದರೆ ನನಗೆ ಅರ್ಥವಾಗುತ್ತಿರಲಿಲ್ಲ. ದಯವಿಟ್ಟು ನನಗೆ 60 ಅಂಕಗಳನ್ನು ನೀಡಿ'' ಎಂದು ಮನವಿ ಮಾಡಿಕೊಂಡಿದ್ದ.
ಮತ್ತೊಬ್ಬ ವಿದ್ಯಾರ್ಥಿ, ನಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೆ. ಆದರೆ ಅಲ್ಲಿ ಗಣಿತಕ್ಕೆ ಶಿಕ್ಷಕರಿರಲಿಲ್ಲ. ಹಾಗಾಗಿ ನನ್ನನ್ನು ಹತ್ತಿರದ ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿಸಿದರು. ಆದರೆ ಅಲ್ಲಿ ನನಗೆ ಇಂಗ್ಲೀಷ್ ನಲ್ಲಿ ಮಾಡುತ್ತಿದ್ದ ಪಾಠಗಳು ಅರ್ಥವಾಗುತ್ತಿರಲಿಲ್ಲ. ನಾನು ನಿಮ್ಮ ಮಗನೆಂದು ಭಾವಿಸಿ ನನ್ನನ್ನು ತೇರ್ಗಡೆ ಮಾಡಿ'' ಎಂದು ಬರೆದಿದ್ದ.
ಇನ್ನು ಕೆಲವು ವಿದ್ಯಾರ್ಥಿಗಳು ಒಂದು ಹಂತ ಮುಂದೆ ಹೋಗಿ ಉತ್ತರ ಪತ್ರಿಕೆಯ ಒಳಗೆ ಹಣವನ್ನಿಟ್ಟು ಶಿಕ್ಷಕರಿಗೆ ಲಂಚ ನೀಡಲು ಮುಂದಾಗಿದ್ದರು. ಮತ್ತೆ ಕೆಲವರು ಉತ್ತರ ಪತ್ರಿಕೆಯಲ್ಲಿ ಉತ್ತರ ಬರೆಯುವ ಬದಲು ಪದ್ಯ, ಸಿನಿಮಾ ಕಥೆಯನ್ನು ಬರೆದಿಟ್ಟಿದ್ದರು. ಇಂತಹದ್ದೇ ಘಟನೆ ಕಳೆದ ವರ್ಷ ಕೂಡ ನಡೆದಿದ್ದರಿಂದ ಮೌಲ್ಯಮಾಪಕರು ಮೌಲ್ಯಮಾಪನ ಕೊಠಡಿಯೊಳಗೆ ಮೊಬೈಲ್ ಫೋನ್ ಗಳನ್ನು ಕೊಂಡೊಯ್ಯದಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಚ್ಚರಿಕೆ ನೀಡಿದೆ.
Advertisement