ಪ್ಲಾಸ್ಟಿಕ್ ಕಸಗಳಿಗೆ ಬಲಿಯಾಗುತ್ತಿರುವ ಬೀದಿ ಪ್ರಾಣಿಗಳು

ನಗರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಬೀದಿ ಪ್ರಾಣಿಗಳಿಗೆ ಮಾರಕವಾಗಿದೆ. ಹಸು, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳು ಪ್ಲಾಸ್ಟಿಕ್ ಚೀಲಗಳನ್ನು...
ಬೆಂಗಳೂರಿನ ಬೀದಿಯೊಂದರಲ್ಲಿ ರಾಶಿ ಹಾಕಿರುವ ಪ್ಲಾಸ್ಟಿಕ್ ಕಸಗಳನ್ನು ತಿನ್ನುತ್ತಿರುವ ಹಸು, ಮೇಕೆಗಳು
ಬೆಂಗಳೂರಿನ ಬೀದಿಯೊಂದರಲ್ಲಿ ರಾಶಿ ಹಾಕಿರುವ ಪ್ಲಾಸ್ಟಿಕ್ ಕಸಗಳನ್ನು ತಿನ್ನುತ್ತಿರುವ ಹಸು, ಮೇಕೆಗಳು

ಬೆಂಗಳೂರು: ನಗರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಬೀದಿ ಪ್ರಾಣಿಗಳಿಗೆ ಮಾರಕವಾಗಿದೆ. ಹಸು, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳು ಪ್ಲಾಸ್ಟಿಕ್ ಚೀಲಗಳನ್ನು ತಿನ್ನುವುದರಿಂದ ಅವು ಹೊಟ್ಟೆಗೆ ಸೇರಿ ಪ್ರಾಣಕ್ಕೆ ಕುತ್ತು ಬರುವ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಯ ವೈದ್ಯರೊಬ್ಬರು ಹೇಳುವ ಪ್ರಕಾರ, ಹೊಟ್ಟೆಯಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್ ಬ್ಯಾಗುಗಳನ್ನು ತಿಂದು ತುಂಬಿಸಿಕೊಂಡು ಹೊಟ್ಟೆಯ ಬಾಧೆಯಿಂದ ಪ್ರತಿ ತಿಂಗಳು ಆಸ್ಪತ್ರೆಗೆ 15ರಿಂದ 20 ಹಸುಗಳು ಬರುತ್ತವಂತೆ. ಅವುಗಳಲ್ಲಿ ಹೆಚ್ಚಿನವು ಕಲಾಸಿಪಾಳ್ಯ, ಮಡಿವಾಳ, ಚಾಮರಾಜಪೇಟೆ, ವಿ.ವಿ.ಪುರಂ ಮತ್ತು ಕಾಟನ್ ಪೇಟೆಯಿಂದ ಜಾಸ್ತಿಯಂತೆ.

ಹಸುಗಳು ಕಸದ ಬುಟ್ಟಿಯಿಂದ ಹಣ್ಣು-ತರಕಾರಿಗಳನ್ನು ತಿಂದುಕೊಂಡು ಬರಲಿ ಎಂದು ಮಾಲೀಕರು ತಮ್ಮ ಹಸುಗಳನ್ನು ಬಿಟ್ಟುಬಿಡುತ್ತಾರೆ. ಹಸುಗಳಿಗೆ ಪ್ಲಾಸ್ಟಿಕ್ ಕವರ್ ಗಳನ್ನು ತಿನ್ನಲು ಸಾಧ್ಯವಾಗದಾಗ ಇಡೀ ಕವರನ್ನೇ ತಿನ್ನುತ್ತವೆ. ಅವು ಕರಗದೆ ಹೊಟ್ಟೆಯಲ್ಲಿ ಹಾಗೆ ಉಳಿದುಬಿಡುತ್ತವೆ. ಪ್ಲಾಸ್ಟಿಕ್ ಕವರ್ ಗಳು ಹೊಟ್ಟೆಯಲ್ಲಿದ್ದಾಗ ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಆಗ ಹಾಲು ಸಿಗುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.
ಒಂದು ಹಸುವಿನ ಹೊಟ್ಟೆಯಿಂದ 50ರಿಂದ 70 ಕೆಜಿ ಪ್ಲಾಸ್ಟಿಕ್ ಕವರ್ ಗಳನ್ನು ಹೊರತೆಗೆದಿದ್ದೇವೆ. ಕೆಲವು ಹಸುಗಳ ಹೊಟ್ಟೆಯಿಂದ ಬ್ಲೇಡ್, ಉಗುರು, ಕಬ್ಬಿಣದ ತುಂಡುಗಳು ಕೂಡ ಸಿಕ್ಕಿವೆ ಎನ್ನುತ್ತಾರೆ ವೈದ್ಯರು.

ಪ್ರಾಣಿ ದಯಾ ಮಂಡಳಿಯ ಅಧಿಕಾರಿ ಮತ್ತು ವಕೀಲ ಎನ್.ಉಮೇಶ್ ಅವರು ಹೇಳುವ ಪ್ರಕಾರ, ಹಸುಗಳು ಬೀದಿ ಕಸಗಳನ್ನು ತಿಂದು ಹೆಚ್ಚು ದುಷ್ಪರಿಣಾಮಕ್ಕೆ ಒಳಗಾಗುತ್ತವೆ. ಹಸುಗಳ ಮಾಲೀಕರು ಹಸುಗಳನ್ನು ಎಲ್ಲೆಂದರಲ್ಲಿ ಮೇಯಲು ಬಿಡಬಾರದು. ನಗರಗಳಲ್ಲಿ ಹಸು ಮತ್ತು ಇತರ ಪ್ರಾಣಿಗಳನ್ನು ಸಾಕುವವರು ಜೋಪಾನವಾಗಿ ಸಾಕಬೇಕು ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com