ವಿಚಾರವಾದಿ ಕಲ್ಬುರ್ಗಿ ಹತ್ಯೆ: ಸಿಐಡಿ ತನಿಖೆಯ ಮಾಹಿತಿ ನಿರೀಕ್ಷೆಯಲ್ಲಿ ಕುಟುಂಬಿಕರು

ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆ ಕೇಸಿಗೆ ಸಂಬಂಧಪಟ್ಟಂತೆ ವಿಚಾರಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅವರ...
ಡಾ.ಎಂ.ಎಂ.ಕಲ್ಬುರ್ಗಿ
ಡಾ.ಎಂ.ಎಂ.ಕಲ್ಬುರ್ಗಿ

ಬೆಂಗಳೂರು: ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆ ಕೇಸಿಗೆ ಸಂಬಂಧಪಟ್ಟಂತೆ ವಿಚಾರಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅವರ ಕುಟುಂಬದವರಿಗೆ ಅಕ್ಷರಶಃ ಯಾವ ಮಾಹಿತಿ ಕೂಡ ಇಲ್ಲ. ಸಿಐಡಿ ನೀಡಿದ ಭರವಸೆ ಮೇಲೆ ಅವರು ನಂಬಿಕೆಯಿಟ್ಟು ದಿನ ನೂಕುತ್ತಿದ್ದಾರೆ.

ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿದ ಕಲ್ಬುರ್ಗಿಯವರ ಪುತ್ರ ಶ್ರೀವಿಜಯ, ''ಸಿಐಡಿ ಅಧಿಕಾರಿಗಳು ಇತ್ತೀಚೆಗೆ ನಮ್ಮ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೂಡ ಕೇಸಿನ ಬೆಳವಣಿಗೆ ಬಗ್ಗೆ ಬಹಿರಂಗಪಡಿಸಿಲ್ಲ. ನಾವು ಭರವಸೆ ಕಳೆದುಕೊಳ್ಳುವುದು ಬೇಡ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೇಸನ್ನು ಮುಂದುವರಿಸಲು ಸಿಐಡಿಗೆ ಕಷ್ಟವಾಗುತ್ತಿದೆ. ಬಲವಾದ ಸಾಕ್ಷಿ ಅಧಿಕಾರಿಗಳಿಗೆ ಸಿಕ್ಕಿಲ್ಲ ಎಂದೆನಿಸುತ್ತಿದೆ. ಕೊಲೆಯ ಪ್ರಮುಖ ಆರೋಪಿಯನ್ನು ಬಂಧಿಸಲು ಅನೇಕ ತಂತ್ರಗಳನ್ನು ಬಳಸುತ್ತಿದ್ದಾರೆ. ಕೇಸಿನ ಸೂಕ್ಷ್ಮತೆಯನ್ನು ಪರಿಗಣಿಸಿ ಹೆಚ್ಚಿನ ವಿವರ ಈ ಹಂತದಲ್ಲಿ ನೀಡುತ್ತಿಲ್ಲ ಎಂದು ಕಾಣುತ್ತದೆ. ವಿಚಾರಣೆ ವೇಳೆ ನಾವು ಎಲ್ಲಾ ರೀತಿಯ ನೆರವು ನೀಡಿದ್ದೇವೆ'' ಎಂದು ಹೇಳಿದ್ದಾರೆ.

 ಎನ್ಆರ್ ಐ ಪಾತ್ರವಿರುವ ಶಂಕೆ: ಕಲ್ಬುರ್ಗಿಯವರ ಹತ್ಯೆ ಅಮೆರಿಕದ ಅನಿವಾಸಿ ಭಾರತೀಯರು ಆರ್ಥಿಕ ನೆರವು ನೀಡಿ ಮಾಡಿಸಿದ್ದಾರೆ ಎನ್ನುವ ವದಂತಿಯಿರುವ ಬಗ್ಗೆ ಅವರ ಪುತ್ರ ಪ್ರತಿಕ್ರಿಯಿಸಿ, ನಮಗೆ ಈ ಬಗ್ಗೆ ಅರಿವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾದರಷ್ಟೇ ಸಾಕು ಎಂದರು.

ಇನ್ನು ಸಿಐಡಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಒಂದು ಕೇಸಿನ ಜೊತೆ ಇನ್ನೊಂದು ಕೇಸನ್ನು ಥಳಕು ಹಾಕುವುದು ಸರಿಯಲ್ಲ. ಕಲ್ಬುರ್ಗಿಯವರ ಹತ್ಯೆ ವಿಚಾರ ಭಿನ್ನವಾಗಿದೆ. ನಮ್ಮ ತಂಡ ಅಪರಾಧಿಗಳನ್ನು ಹಿಡಿಯಲು ಸತತ ಕೆಲಸ ಮಾಡಿಕೊಂಡು ಬರುತ್ತಿದೆ. ನಮ್ಮ ತಂಡ ಇತ್ತೀಚೆಗೆ ಧಾರವಾಡಕ್ಕೆ ಭೇಟಿ ನೀಡಿ ಕೇಸಿನ ಬೆಳವಣಿಗೆ ಬಗ್ಗೆ ಪರಾಮರ್ಶೆ ನಡೆಸಿತ್ತು. ಬಲಪಂಥೀಯ ನಾಯಕರಿಂದ ಹತ್ಯೆ ನಡೆದಿರಬಹುದೇ ಎಂಬ ಬಗ್ಗೆ ಒಂದು ಕಡೆಯಿಂದ ತನಿಖೆ ನಡೆಯುತ್ತಿದೆ ಎಂದರು.

ಸಿಐಡಿ ಅಧಿಕಾರಿಗಳು ಇತ್ತೀಚೆಗೆ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದರಿಂದ ಕಲ್ಬುರ್ಗಿ ಹತ್ಯೆ ಕೇಸಿನ ತನಿಖೆ ಮೇಲೆ
 ಗಮನ ಸ್ವಲ್ಪ ಕಡಿಮೆಯಾಗಿತ್ತು ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com