
ಬೆಂಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪ್ರಭಾವಿಗಳ ಹೆಸರು ಬಹಿರಂಗವಾಗುವ ಸಾಧ್ಯತೆಯಿದೆ ಎಂದು ಮೂಲಗಳ ತಿಳಿಸಿವೆ.
ಕೆಲವು ಪ್ರಸಿದ್ದ ಹಾಗೂ ಪ್ರಭಾವಿ ವ್ಯಕ್ತಿಗಳು ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಖಾಂಡ್ಯನನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತೀರಾ ಬಡ ಕುಟುಂಬದಿಂದ ಬಂದಿದ್ದ ಕಲ್ಲಪ್ಪ ಹಂಡಿಭಾಗ್ ಕಿಡ್ನಾಪ್ ಪ್ರಕರಣವೊಂದರಲ್ಲಿ ತಮ್ಮ ಹೆಸರು ಕೇಳಿ ಬಂದಿದ್ದಕ್ಕೆ ಮನನೊಂದು ಜುಲೈ 5ರಂದು ಆತ್ಮಹತ್ಯೆಗೆ ಶರಣಾಗಿದ್ದರು, ತಮ್ಮ ಮಗನ ಸಾವಿಗೆ ಚಿಕ್ಕಮಗಳೂರು ಎಸ್ಪಿ ಸಂತೋಷ್ ಬಾಬು ನೇರ ಹೊಣೆ ಎಂದು ಕಲ್ಲಪ್ಪ ಪೋಷಕರು ಆರೋಪಿಸಿದ್ದರು.
ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಪ್ರಾಥಮಿಕ ತನಿಖಾ ವರದಿಯಲ್ಲಿ ತೇಜಸ್ ಗೌಡ ಅಪಹರಣದ ಬಗ್ಗೆ ಅರಿವಿಲ್ಲದ ಕಲ್ಲಪ್ಪ ಹಿರಿಯ ಅಧಿಕಾರಿಗಳ ಆದೇಶದಂತೆ ಹಣ ಪಡೆದುಕೊಳ್ಳಲು ಹೋಗಿದ್ದು ಎಂದು ತಿಳಿಸಿತ್ತು.
ಅಪಹರಣಗೊಂಡಿದ್ದ ತೇಜಸ್ ಗೌಡ ತನ್ನ ಸ್ನೇಹಿತ ಪವನ್ ಮೂಲಕ 10 ಲಕ್ಷ ಹಣವನ್ನು ಕಲ್ಲಪ್ಪ ಅವರಿಗೆ ತಲುಪಿಸಿದ ನಂತರ ಬಿಡುಗಡೆ ಗೊಂಡ. ಬಿಡುಗಡೆಯಾದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ ತೇಜಸ್ ಗೌಡ ಎಲ್ಲಾ ವಿಷಯವನ್ನು ತಿಳಿಸಿದ್ದ.
ತೇಜಸ್ ಗೌಡ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ ವಿಷಯ ಪ್ರವೀಣ್ ಖಾಂಡ್ಯಗೆ ತಿಳಿದು ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬರಲಿದೆ ಎಂದು ಖಾಂಡ್ಯ ಭಯಗೊಂಡಿದ್ದ.
ತೇಜಸ್ ಗೌಡ ಚಿಕ್ಕಮಗಳೂರು ಜಿಲ್ಲೆಯ ಹಿಂದೂ ಬಲ ಪಂಥೀಯ ನಾಯಕನಾಗಿದ್ದ. ಜೂನ್ 29 ರಂದು ಕೆಲ ಹಿಂದೂ ಸಂಘಟನೆ ಮುಖಂಡರು ಅನಧಿಕೃತ ಗೋಹತ್ಯೆ ಮಾಡುವವರ ಕುಟುಂಬದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಿಂಸಾಚಾರ ನಡೆಯಲಿದೆ ಎಂದು ಖಾಂಡ್ಯ ನಂಬಿದ್ದ. ಆದರೆ ಪೊಲೀಸರ ಮಧ್ಯಸ್ಥಿಕೆಯಿಂದ ಶಾಂತಿಯುತವಾಗಿ ಘರ್ಷಣೆ ಅಂತ್ಯಗೊಂಡಿತು.
ಅಪಹರಣ ಸಂಬಂಧ ಕಲ್ಪಪ್ಪ ಹಂಡಿಭಾಗ್ ಅವರನ್ನು ಪೊಲೀಸ್ ಇಲಾಖೆ ಅಮಾನತು ಮಾಡುತ್ತದೆ ಎಂದು ತೇಜಸ್ ಗೌಡ ನಂಬಿದ್ದ. ಆದರೆ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕಲ್ಪನೆಯೂ ಅವನಿಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
Advertisement