ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಆರೋಪಿ ನಿರಂಜನ್ ಆತ್ಮಹತ್ಯೆಗೆ ಯತ್ನ

ಕೋಟ್ಯಾಧಿಪತಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ ಭಟ್‌ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ...
ನಿರಂಜನ್ ಭಟ್
ನಿರಂಜನ್ ಭಟ್
ಉಡುಪಿ: ಕೋಟ್ಯಾಧಿಪತಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ನಿರಂಜನ ಭಟ್‌ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ
ಮಣಿಪಾಲ ಪೊಲೀಸರು ನಿನ್ನೆಯಷ್ಟೇ ಬೀದರ್ ನಲ್ಲಿ ನಿರಂಜನ್ ಭಟ್ ನನ್ನು ಬಂಧಿಸಿದ್ದರು. ಈಗ ಪೊಲೀಸ್ ವಶದಲ್ಲಿರುವ ಭಟ್‌ ಇಂದು  ಕೈ ಬೆರಳಿನಲ್ಲಿದ್ದ ವಜ್ರದುಂಗುರವನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ನಿಗೂಢವಾಗಿ ನಾಪತ್ತೆಯಾಗಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾಗಿರುವುದು ಈಗ ಖಚಿತವಾಗಿದೆ. ಪ್ರಕರಣದ ಸಂಬಂಧ ಭಾಸ್ಕರ್‌ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್‌ನನ್ನು ಪೊಲೀಸರು ಬಂಧಿಸಿದ್ದಾರೆ. 
ಆಸ್ತಿ ವಿಷಯವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಭಾಸ್ಕರ್ ಶೆಟ್ಟಿ ಅವರ ಮೊಬೈಲ್‌ನಲ್ಲಿದ್ದ ಕೆಲವು ವಿಡಿಯೊಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೌದಿ ಅರೇಬಿಯಾದಲ್ಲಿದ್ದ ಭಾಸ್ಕರ್‌ ಶೆಟ್ಟಿ ಅವರು ಕೆಲ ದಿನಗಳ ಹಿಂದೆ ಉಡುಪಿಗೆ ಬಂದ ನಂತರ ಪತ್ನಿ ಮತ್ತು ಮಗನೊಂದಿಗೆ  ಜಗಳವಾಗಿತ್ತು. ಭಾಸ್ಕರ್ ಅವರ ಮೇಲೆ ನವನೀತ್‌ ಹಲ್ಲೆಯನ್ನೂ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಈ ಘಟನೆಗಳ ನಂತರ ಭಯಭೀತರಾಗಿದ್ದ ಅವರು ಮನೆಯಲ್ಲಿ ಮಲಗುತ್ತಿರಲಿಲ್ಲ. ಅವರದ್ದೇ ಒಡೆತನದ ಉಡುಪಿ ನಗರದಲ್ಲಿರುವ ದುರ್ಗಾ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಅವರು ಮಲಗುತ್ತಿದ್ದರು. ಬೆಳಿಗ್ಗೆ ಹೊತ್ತು ಮಾತ್ರ ಮನೆಗೆ ಬಂದು ಸ್ನಾನ ಮಾಡಿಕೊಂಡು ಹೋಗುತ್ತಿದ್ದರು. ಮೂರೂ ಮಂದಿ ಆರೋಪಿಗಳು ಸೇರಿ ಭಾಸ್ಕರ್ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಿದ್ದರು.
ಜುಲೈ 28ರಂದು ಸ್ನಾನ ಮಾಡಿಕೊಂಡು ಹೊರಗೆ ಬರುತ್ತಿದ್ದ ಭಾಸ್ಕರ್‌ ಶೆಟ್ಟಿ ಅವರ ಕಣ್ಣಿಗೆ ಪೆಪ್ಪರ್‌ ಸ್ಪ್ರೇ ಮಾಡಿದ ಆರೋಪಿಗಳು ಕಬ್ಬಿಣದ ಸಲಾಕೆಯಿಂದ ಅವರ ತಲೆಗೆ ಹೊಡೆದಿದ್ದರು. ಕುಸಿದು ಬಿದ್ದ ಅವರನ್ನು ಬಾತ್‌ಟಬ್‌ಗೆ ತಳ್ಳಿ ಇನ್ನಷ್ಟು ಹೊಡೆದು ಕೊಲೆ ಮಾಡಿದ್ದರು.
ಆ ನಂತರ ಹಿತ್ತಲ ಬಾಗಿಲ ಬಳಿ ಕಾರನ್ನು ತಂದು ಶವವನ್ನು ಡಿಕ್ಕಿಯಲ್ಲಿಟ್ಟುಕೊಂಡು ನಂದಳಿಕೆಗೆ ಕೊಂಡೊಯ್ದಿದ್ದರು. ಅಲ್ಲಿ ಅವರ ಶವವನ್ನು ಸುಟ್ಟು, ಅವಶೇಷಗಳನ್ನು ಸಮೀಪದ ಹೊಳೆಗೆ ಎಸೆದಿದ್ದರು. ಹೋಮದ ಕುಂಡದಲ್ಲಿಯೇ ಶವ ಸುಟ್ಟಿದ್ದರು ಎನ್ನಲಾಗಿದೆ.
ಭಾಸ್ಕರ್ ಅವರು ನಾಪತ್ತೆಯಾದ ಬಗ್ಗೆ ಅವರ ತಾಯಿ ಗುಲಾಬಿ ಶೆಟ್ಟಿ ಅವರು ಜುಲೈ 31ರಂದು ದೂರು ನೀಡಿದ ನಂತರ ತನಿಖೆ ಆರಂಭಿಸಿದ ಪೊಲೀಸರು, ತಾಯಿ– ಮಗನನ್ನು ವಿಚಾರಣೆಗೆ ಒಳಪಡಿಸಿದ್ದರೂ ಅವರು ಯಾವುದೇ ವಿಷಯ ಬಾಯಿ ಬಿಟ್ಟಿರಲಿಲ್ಲ. ಪತಿ ಎಲ್ಲಿಗೆ ಹೋಗಿದ್ದಾರೆ ಎಂದಿದ್ದಕ್ಕೆ ‘ಗೊತ್ತಿಲ್ಲ’ ಎಂದಷ್ಟೇ ಹೇಳುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com