ಸರ್ಕಾರಕ್ಕೆ ಶಾಕ್ ನೀಡಿದ ಗವರ್ನರ್ : ಎಸ್ಸಿ- ಎಸ್ಟಿ ಗುತ್ತಿಗೆ ಮೀಸಲು ಮಸೂದೆಗೆ ಬ್ರೇಕ್
ಬೆಂಗಳೂರು: ರಾಜ್ಯ ಸರ್ಕಾರದ ಗುತ್ತಿಗೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗುತ್ತಿಗೆದಾರರಿಗೆ ಮೀಸಲು ಸೌಲಭ್ಯ ಕಲ್ಪಿಸುವ ಮಸೂದೆಗೆ ರಾಜ್ಯಪಾಲ ವಜುಭಾಯ್ ವಾಲ ಅಂಕಿತ ಹಾಕಲು ಹಿಂದೇಟು ಹಾಕಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ವರ್ಗದ ಗುತ್ತಿಗೆದಾರರಿಗೆ 50 ಲಕ್ಷ ರೂ. ವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲು ನೀಡುವ ಉದ್ದೇಶದ ವಿಧೇಯಕವನ್ನು ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಲು ರಾಜ್ಯಪಾಲ ವಜುಭಾಯಿ ವಾಲಾ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರವು ಈ ವಿಧೇಯಕ ಜಾರಿ ಬಗ್ಗೆ ತೀವ್ರ ಆಸಕ್ತಿ ಹೊಂದಿತ್ತು. ಆದರೆ, ರಾಜ್ಯಪಾಲರು ಈ ವಿಧೇಯಕಕ್ಕೆ ಅಂಕಿತ ಹಾಕಲು ಹಿಂಜರಿದಿದ್ದು, ತಮ್ಮ ಆಕ್ಷೇಪಣೆಗಳೊಂದಿಗೆ ಸದರಿ ವಿಧೇಯಕವನ್ನು ರಾಷ್ಟ್ರಪತಿಗಳ ಅವಗಾಹನೆಗೆ ಕಳುಹಿಸಲು ತೀರ್ಮಾನಿಸಿದ್ದಾರೆ.
ಈ ಮೂಲಕ ವಿಧೇಯಕ ಜಾರಿ ತೀವ್ರ ವಿಳಂಬವಾಗುವ ಸಾಧ್ಯತೆ ಅಥವಾ ವಿಧೇಯಕವೇ ಕೈ ಬಿಟ್ಟು ಹೋಗುವ ಸಾಧ್ಯತೆ ಮೂಡಿರುವುದು ಸರ್ಕಾರಕ್ಕೆ ತೀವ್ರ ಹಿನ್ನಡೆ ಎನ್ನಲಾಗುತ್ತಿದೆ. ಮೀಸಲಾತಿ ನೀಡುವ ವಿಶೇಷ ಸವಲತ್ತಿಗೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲ ಎಂಬ ಕಾರಣ ನೀಡಿರುವ ರಾಜ್ಯಪಾಲರು ವಿಧೇಯಕ ರಾಷ್ಟ್ರಪತಿಗೆ ಕಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಜ್ಯಸರ್ಕಾರವು ಎಸ್‌ಸಿ-ಎಸ್‌ಟಿ ಗುತ್ತಿಗೆದಾರರಿಗೆ 50 ಲಕ್ಷ ರೂ. ಮೊತ್ತದವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಮೀಸಲು ನೀಡಲು ಅವಕಾಶ ಕಲ್ಪಿಸಲು ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರಿಗೆ ಕಳುಹಿಸಿತ್ತು.


