ಒತ್ತುವರಿ ತೆರವು ಕಾರ್ಯಾಚರಣೆ: ಹುತಾತ್ಮ ಯೋಧನ ಕುಟುಂಬಸ್ಥರ ಮನವಿಗೆ ಕಿವುಡಾದ ಬಿಬಿಎಂಪಿ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಠಾಣ್ ಕೋಟ್ ದಾಳಿಯಲ್ಲಿ ಪ್ರಾಣತೆತ್ತ ಯೋಧ ನಿರಂಜನ್​ಕುಮಾರ್ ಮನೆಯನ್ನೂ ಕೆಡವಲು ಬಿಬಿಎಂಪಿ ..
ಹುತಾತ್ಮ ಯೋಧ ನಿರಂಜನ್ ತಾಯಿ ಮತ್ತು ಸಂಬಂಧಿ
ಹುತಾತ್ಮ ಯೋಧ ನಿರಂಜನ್ ತಾಯಿ ಮತ್ತು ಸಂಬಂಧಿ

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಠಾಣ್ ಕೋಟ್ ದಾಳಿಯಲ್ಲಿ ಪ್ರಾಣತೆತ್ತ ಯೋಧ  ನಿರಂಜನ್​ಕುಮಾರ್ ಮನೆಯನ್ನೂ ಕೆಡವಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಪಠಾಣ್​ಕೋಟ್​ನಲ್ಲಿ ನಡೆದ ಉಗ್ರರ ದಾಳಿ ವೇಳೆ ವೀರ ಮರಣವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಮನೆ ದೊಡ್ಡ ಬೊಮ್ಮಸಂದ್ರದ ಸುಬ್ಬಣ್ಣ ಬಡಾವಣೆಯಲ್ಲಿದೆ. ಆದರೆ ಈ ಮನೆ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಮನೆಯ ಒಂದು ಭಾಗ ಒಡೆಯಲು ಸಿದ್ಧತೆ ನಡೆಸಲಾಗಿದೆ.

ಕಳೆದ 3 ವರ್ಷಗಳ ಹಿಂದೆ ಲೆಫ್ಟಿನೆಂಟ್ ಕರ್ನಲ್ ನಿರಂಜನ್​ಕುಮಾರ್ ಮದುವೆ ಆಗುವ ವೇಳೆ ಮನೆಯ ಎಡಭಾಗದಲ್ಲಿ ಕೊಠಡಿಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಅದನ್ನು ನಿರಂಜನ್ ಖುದ್ದು ಮದುವೆ ನಂತರ ಮತ್ತು ಮನೆಗೆ ಬಂದಾಗ ಉಳಿದುಕೊಳ್ಳುವ ಸಲುವಾಗಿ ನಿರ್ಮಿಸಿಕೊಂಡಿದ್ದರು. ಆದರೀಗ, ಆ ಕೊಠಡಿಯನ್ನೇ ನೆಲಸಮಗೊಳಿಸಲಾಗುತ್ತಿದೆ.

ಮನೆ ತೆರವುಗೊಳಿಸಲು 15 ದಿನ ಕಾಲಾವಕಾಶ ಕೇಳಿದ್ಜೇವೆ, ನಾವು ಮನೆ ತೆರವುಗೊಳಿಸುವುದು ಬೇಡ ಎಂದು ಹೇಳುತ್ತಿಲ್ಲ, ಸ್ವಲ್ಪ ಸಮಯಾವಕಾಶ ಕೇಳಿದ್ದೇವೆ ಅಷ್ಟೇ ಎಂದು ನಿರಂಜನ್ ತಾಯಿ ರಾಧಾ ಶಿವರಾಜ್ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕಾನೂನು ಎಲ್ಲರಿಗೂ ಒಂದೇ,. ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ನಾವು ಸಹಿಸುವುದಿಲ್ಲ, ಎಲ್ಲೆಲ್ಲಿ ಗುರುತು ಹಾಕಿದ್ದೇವೋ ಆ ಎಲ್ಲಾ ಮನೆಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.

15 ವರ್ಷದ ಹಿಂದಿನ ಮನೆ: ನಿರಂಜನ್ ತಂದೆ ಈ.ಕೆ. ಶಿವರಾಜ್ 15 ವರ್ಷಗಳ ಹಿಂದೆ 30*40 ಅಳತೆಯ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com