ಮುಖ್ಯಮಂತ್ರಿ ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ರಾಜ್ಯ
ನಿಗಮ-ಮಂಡಳಿ ಅಧ್ಯಕ್ಷರ ನೇಮಕ: ಹೆಚ್ಚುತ್ತಿರುವ ಲಾಬಿ
ಇದೇ 24ಕ್ಕೆ ನಿಗಮ ಮಂಡಳಿಗಳ ಅಧ್ಯಕ್ಷರ 21 ತಿಂಗಳ ಅಧಿಕಾರಾವಧಿ ಕೊನೆಗೊಳ್ಳಲಿರುವುದರಿಂದ...
ಮೈಸೂರು: ಇದೇ 24ಕ್ಕೆ ನಿಗಮ ಮಂಡಳಿಗಳ ಅಧ್ಯಕ್ಷರ 21 ತಿಂಗಳ ಅಧಿಕಾರಾವಧಿ ಕೊನೆಗೊಳ್ಳಲಿರುವುದರಿಂದ ಅನೇಕ ಹುದ್ದೆಗಳಿಗೆ ಲಾಬಿ ನಡೆಸುವವರ ಸಂಖ್ಯೆ ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಲ್ಲಿ ಹೆಚ್ಚಾಗುತ್ತಲೇ ಇದೆ.
ಇನ್ನೆರಡು ದಿನಗಳಲ್ಲಿ ನಿಗಮ ಮಂಡಳಿ ಅಧ್ಯಕ್ಷರ ನೇಮಕ ನಡೆಯುವ ಸಾಧ್ಯತೆಯಿದ್ದು ಇದಕ್ಕಾಗಿ ಆಕಾಂಕ್ಷಿಗಳು ತಮ್ಮ ನಾಯಕರ ಹಿಂದೆ ಓಡಾಡುತ್ತಿದ್ದಾರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ .ಸಿ.ಮಹದೇವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಮನೆ-ಕಚೇರಿ ಬಾಗಿಲಿಗೂ ಎಡತಾಕುತ್ತಿದ್ದಾರೆ. ಅನೇಕರು ತಮ್ಮ ಹತ್ತಿರದ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಬಿಡಿಎ ಮುಖ್ಯಸ್ಥರಾಗಿ ವೆಂಕಟೇಶ್? ಪೆರಿಯಾಪಟ್ನ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಕೆ.ವೆಂಕಟೇಶ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗುವ ಸಾಧ್ಯತೆಗಳಿವೆ. ಒಕ್ಕಲಿಗರಾಗಿರುವ ವೆಂಕಟೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿದ್ದು ಈ ಹಿಂದೆ ಅವರಿಗೆ ಸಚಿವ ಹುದ್ದೆ ಸಿಕ್ಕಿರಲಿಲ್ಲ.
ಮೊದಲ ಸುತ್ತಿನಲ್ಲಿ ನೇಮಕವಾಗದಿದ್ದ ಕುರುಬ ಮತ್ತು ಪರಿಶಿಷ್ಟ ವರ್ಗದವರಿಗೆ ಈ ಬಾರಿ ನಿಗಮ ಮಂಡಳಿ ಅಧ್ಯಕ್ಷ ಹುದ್ದೆಯಲ್ಲಿ ಸಿಂಹಪಾಲು ದೊರಕಲಿದೆ. ಪಕ್ಷದ ಹಿರಿಯ ನಾಯಕರಿಗೂ ಈ ಬಾರಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲನಾ ಸಮಿತಿ ಅಂತಿಮಗೊಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ