ಕೆ.ಮರಿಗೌಡ
ರಾಜ್ಯ
ಡಿಸಿಗೆ ಬೆದರಿಕೆ ಪ್ರಕರಣ: ಸಿಎಂ ಆಪ್ತ ಮರಿಗೌಡಗೆ ಜಾಮೀನು
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರಿಗೆ ಬೆದರಿಕೆ ಹಾಕಿ ಜೈಲು ಪಾಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ...
ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ಅವರಿಗೆ ಬೆದರಿಕೆ ಹಾಕಿ ಜೈಲು ಪಾಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರಿಗೆ ಗುರುವಾರ 7ನೇ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮರಿಗೌಡ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಸತ್ರ ನ್ಯಾಯಾಲಯ 1 ಲಕ್ಷ ರುಪಾಯಿ ವೈಯಕ್ತಿಕ ಬಾಂಡ್, ಇಬ್ಬರು ಸರ್ಕಾರಿ ನೌಕರರಿಂದ ಭದ್ರತೆ, ತಿಂಗಳಲ್ಲಿ 2 ಶನಿವಾರ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಬೇಕು ಮತ್ತು ತನಿಖೆಗೆ ಸಹಕರಿಸುವಂತೆ ಸೂಚಿಸಿ, ಜಾಮೀನು ನೀಡಿದೆ.
ಸುಮಾರು ಒಂದು ತಿಂಗಳ ನಂತರ ಪೊಲೀಸರಿಗೆ ಶರಣಾಗಿದ್ದ ಮರಿಗೌಡ ಅವರನ್ನು ನಜರ್ ಬಾದ್ ಪೊಲೀಸರು ಮೈಸೂರಿನ ಮೂರನೇ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ದೀಪಾ ಅವರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಬಳಿಕ ಪೊಲೀಸರು ಸಿಎಂ ಆಪ್ತನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದರು.
ಮರಿಗೌಡ ಅವರು ಅಧಿಕಾರಿಯ ವರ್ಗಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶಿಖಾ ಅವರಿಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಶಿಖಾ ಅವರು ಜುಲೈ 3ರಂದು ಕಾಂಗ್ರೆಸ್ ನಾಯಕ ಸಿಎಂ ಆಪ್ತ ಮರಿಗೌಡ ವಿರುದ್ಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಮರಿಗೌಡ ತಲೆಮರೆಸಿಕೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ