ಪೊಲೀಸ್ ಮುಷ್ಕರಕ್ಕೆ ಕರೆ ನೀಡಿದ್ದ ವಿ.ಶಶಿಧರ್‌ ಜೈಲಿನಿಂದ ಬಿಡುಗಡೆ

ಪೊಲೀಸ್ ಪ್ರತಿಭಟನೆಗೆ ಕರೆ ನೀಡಿ ರಾಜದ್ರೋಹ ಆರೋಪದ ಮೇಲೆ ಜೈಲು ಪಾಲಾಗಿದ್ದ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ ಶಶಿಧರ್ ಅವರು ಶುಕ್ರವಾರ ...
ವಿ.ಶಶಿಧರ್
ವಿ.ಶಶಿಧರ್
ಬೆಂಗಳೂರು: ಪೊಲೀಸ್ ಪ್ರತಿಭಟನೆಗೆ ಕರೆ ನೀಡಿ ರಾಜದ್ರೋಹ ಆರೋಪದ ಮೇಲೆ ಜೈಲು ಪಾಲಾಗಿದ್ದ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ ಶಶಿಧರ್ ಅವರು ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರಾಜದ್ರೋಹ ಆರೋಪ ಎದುರಿಸುತ್ತಿರುವ ಶಶಿಧರ್, ಬಸವರಾಜ್ ಕೂರವರ ಹಾಗೂ ಗುರುಪಾದಯ್ಯ ಅವರಿಗೆ ಹೈಕೋರ್ಟ್ ನಿನ್ನೆ ಷರತುಬದ್ದ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ  85 ದಿನಗಳ ನಂತರ ಪರಪ್ಪನ ಅಗ್ರಹಾರ ಜೈಲಿನಿಂದ ಶಶಿಧರ್ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಧರ್, ದುಷ್ಟ ರಾಜಕಾರಣಿಗಳಿಂದಾಗಿ ನಾನು ಜೈಲು ಸೇರುವಂತಾಯಿತು. ನಾನು ದೇಶಪ್ರೇಮಿ, ಅನ್ಯಾಯದ ವಿರುದ್ಧ ಹೋರಾಡುತ್ತೇನೆ. ಆದರೆ ದೇಶದ್ರೋಹದ ಆರೋಪದ ಮೇಲೆ ನನ್ನನ್ನು ಬಂಧಿಸಿದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಕಾರಣ ಎಂದು ಆರೋಪಿಸಿದರು.
ಜಾಮೀನಿಗೆ ೫೦ ಸಾವಿರ ಮೊತ್ತದ ಬಾಂಡ್, ಒಬ್ಬರ ಶ್ಯೂರಿಟಿ, ಅನುಮತಿಯಿಲ್ಲದೇ ಕೋರ್ಟ್ ವ್ಯಾಪ್ತಿ ದಾಟುವಂತಿಲ್ಲ,ಪೊಲೀಸ್ ಮುಷ್ಕರಕ್ಕೆ ಕರೆ ನೀಡುವುದಾಗಲಿ,ಪೊಲೀಸರ ಸಭೆ ಕರೆಯುವುದಾಗಲಿ ಮಾಡಬಾರದು ಅಲ್ಲದೇ ಸಾಕ್ಷಾಧಾರ ನಾಶಪಡಿಸದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.
ಕಳೆದ ಜೂ.೪ರಂದು ಪೊಲೀಸರ ಪ್ರತಿಭಟನೆಗೆ ಕರೆನೀಡಿದ್ದ ಶಶಿಧರ್ ಅವರನ್ನು ಜೂ.೨ರಂದು ರಾತ್ರಿ ಪೊಲೀಸರು ಬಂಧಿಸಿ ರಾಷ್ಟ್ರದ್ರೊಹ, ಸರ್ಕಾರದ ವಿರುದ್ಧ ಪಿತ್ತುರಿ,ಒಳಸಂಚು ಮತ್ತು ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು.
ಶಶಿಧರ್ ಬಂಧನದ ದಿನವೇ ಧಾರವಾಡದ ಬಸವರಾಜ ಕೊರ್ ವಾರ್ ಮತ್ತು ದಾವಣಗೆರೆಯ ಗುರುಪಾದಯ್ಯ ಬಂಧನವಾಗಿತ್ತು. ಇವರ ವಿರುದ್ಧವೂ ರಾಷ್ಟ್ರದ್ರೋಹ, ಸರ್ಕಾರದ ವಿರುದ್ಧ ಪಿತ್ತುರಿ,ಒಳಸಂಚು ಮತ್ತು ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಶಶಿಧರ್ ಸೇರಿದಂತೆ ಮೂರು ಆರೋಪಿಗಳು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಹೈಕೋರ್ಟ್ ನಲ್ಲಿ ಆರೋಪಿಗಳು ಜಾಮೀನು ಅರ್ಜಿ ಸಲ್ಲಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com