ಕೆಎಎಸ್ ಅಧಿಕಾರಿ ಚಾಲಕನ ಆತ್ಮಹತ್ಯೆ ಪ್ರಕರಣ: ನಮ್ಮ ಮಗ ಮುಗ್ಧ- ರಮೇಶ್ ಪೋಷಕರು

ಆತ ಮುಗ್ಧ, ಅವನು ಯಾರೋಂದಿಗೂ, ಯಾವತ್ತು ಜಗಳವಾಡಿದವನಲ್ಲ, ನಾವು ನಮಗೆ ಅನ್ನ ನೀಡುತ್ತಿದ್ದ ದಣಿಯನ್ನು ಕಳೆದುಕೊಂಡಿದ್ದೇವೆ ಎಂದು ಆತ್ಮಹತ್ಯೆ ....
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ರಮೇಶ್

ಮೈಸೂರು: ಆತ ಮುಗ್ಧ, ಅವನು ಯಾರೋಂದಿಗೂ, ಯಾವತ್ತು ಜಗಳವಾಡಿದವನಲ್ಲ, ನಾವು ನಮಗೆ ಅನ್ನ ನೀಡುತ್ತಿದ್ದ ದಣಿಯನ್ನು ಕಳೆದುಕೊಂಡಿದ್ದೇವೆ ಎಂದು ಆತ್ಮಹತ್ಯೆ ಮಾಡಿಕೊಂಡ ಚಾಲಕ ಕೆ.ಸಿ ರಮೇಶ್ ಪೋಷಕರು ಹೇಳಿದ್ದಾರೆ.

ಬೆಂಗಳೂರಿನ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ಭೀಮಾ ನಾಯಕ್‌ ಅವರ ಕಾರು ಚಾಲಕ ರಮೇಶ್ ಆತ್ಮಹತ್ಯೆ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತ್ತು. ತಮ್ಮ ಮಗನ ಸಾವಿನ ಸುದ್ದಿ ಕೇಳಿ ರಮೇಶ್ ಪೋಷಕರಾದ ಚಿಕ್ಕ ಹೊಂಬಾಳೆಗೌಡ ಮತ್ತು ಸಾಕಮ್ಮ ಆಘಾತಕ್ಕೊಳಗಾಗಿದ್ದರು.

ರಮೇಶ್ ಮಧುಮೇಹದಿಂದ ಬಳಲುತ್ತಿರುವ ಅಪ್ಪ, ಅಮ್ಮ ಹಾಗೂ ಸಹೋದರ ಜೀವನ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದ್ದರು. ತಮ್ಮ ಸ್ವಗ್ರಾಮದಲ್ಲಿ ಮನೆಯೊಂದನ್ನು ಖರೀದಿಸಿ ಬ್ಯಾಂಕ್ ನಿಂದ ಸಾಲ ಮಾಡಿ ಮನೆ ನವೀಕರಣ ಮಾಡಿಸಿದ್ದರು.

ಒತ್ತಡದಲ್ಲಿದ್ದ ರಮೇಶ್ ತನ್ನ ಪೋಷಕರ ಬಳಿ ಹಾಗೂ ಸ್ನೇಹಿತರ ಬಳಿ ಯಾವುದೇ ವಿಷಯವನ್ನು ಹೇಳಿಕೊಂಡಿರಲಿಲ್ಲ. ಬೆಂಗಳೂರಿಗೆ ಹೋಗುತ್ತಿರುವುದಾಗಿ ಭಾನುವಾರ ಮಧ್ಯಾಹ್ನ ಮನೆಯಿಂದ ರಮೇಶ್ ಹೊರಟಿದ್ದರು.  ಭೀಮಾ ನಾಯಕ್ ಮತ್ತು ಅವರ ಕಾರು ಚಾಲಕ ಮೊಹಮದ್ ತನ್ನನ್ನು ಹಿಂಬಾಲಿಸುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು  ಲಾಡ್ಜ್ ನಲ್ಲಿ ಕೊಠಡಿ ಬುಕ್ ಮಾಡಿ ಒಳಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ತನ್ನ ಸ್ವೇಹಿತರು ಊಟ ತರುತ್ತಾರೆಂದು ಹೇಳಿ ರೂಂ ಒಳಗೆ ಹೋದವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭೀಮಾ ನಾಯಕ್ ಮತ್ತು ಅವರ ಕಾರು ಚಾಲಕ ಮೊಹಮದ್ ಅವರ ಮಾನಸಿಕ ಕಿರುಕುಳದಿಂದಾಗಿ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಹೇದರ ಮಹೇಶ್ ಆರೋಪಿಸಿದ್ದಾರೆ. ರಮೇಶ್ ಮನೆಯ ಆಧಾರ ಸ್ಥಂಭವಾಗಿದ್ದರು. ಅವರ ಸಂಬಳವೇ ನಮ್ಮ ಜೀವನಕ್ಕೆ ಆಧಾರವಾಗಿತ್ತು. ಪ್ರತಿ ವಾರ ನನ್ನ ಪೋಷಕರಿಗೆ 4 ಸಾವಿರ ರು ಔಷಧಿ ಬೇಕು, ಅದನ್ನು ನಾನು ಎಲ್ಲಿಂದ ತರಲಿ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ದೊಡ್ಡವರ ಹಣದಾಹಕ್ಕೆ ಬಡ ಮಕ್ಕಳು ಬಲಿಯಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ರಮೇಶ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಕೊತ್ತನಹಳ್ಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರಮೇಶ್ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com