
ಬೆಂಗಳೂರು: ಮದ್ಯ ಉತ್ಪನ್ನಗಳ ಪ್ರಚಾರಕ್ಕಾಗಿ ಬಿಎಂಟಿಸಿ ಬಸ್ ಗಳ ಮೇಲೆ ಜಾಹೀರಾತು ಪ್ರದರ್ಶಿಸುತ್ತಿರುವುದು ಸಾಮಾಜಿಕ ಹೋರಾಟಗಾರರ ಕಣ್ಣನ್ನು ಕೆಂಪಾಗಿಸಿದೆ.
ಬಸ್ ಮೇಲೆ ಜಾಹೀರಾತು ಪ್ರದರ್ಶನದಿಂದಾಗಿ ಬಿಎಂಟಿಸಿಗೆ ಪ್ರತಿ ವರ್ಷ ಸುಮಾರು 16 ಕೋಟಿ ರು ವರಮಾನ ಬರುತ್ತದೆ. ಹೀಗಾಗಿ ತಲೆಕೆಡಿಸಿಕೊಳ್ಳದ ಬಿಎಂಟಿಸಿ ಲಿಕ್ಕರ್ಸ್ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಎಗ್ಗಿಲ್ಲದೇ ಪ್ರದರ್ಶಿಸುತ್ತಿದೆ.
ನಿಷೇಧಿತ ವಸ್ತುಗಳ ಜಾಹೀರಾತನ್ನು ಪ್ರಮೋಟ್ ಮಾಡುತ್ತಿರುವುದು ಹಾಸ್ಯಾಸ್ಪದ. ಇಂಥ ಜಾಹೀರಾತುಗಳು ಸಾಮಾನ್ಯರ ಮನಸ್ಸನ್ನು ಗಲಿಬಿಲಿ ಮಾಡುತ್ತವೆ ಎಂದು ರಾಜ್ಯ ತಂಬಾಕು ನಿಯಂತ್ರಣ ಸಮಿತಿ ಸದಸ್ಯ ಡಾ. ವಿಶಾಲ್ ರಾವ್ ಹೇಳಿದ್ದಾರೆ.
ಬಿಎಂಟಿಸಿ ಬಸ್ ಮೇಲಿನ ಇಂಥ ಜಾಹೀರಾತುಗಳು ಕೆಲವರಿಗೆ ಇರಿಸು ಮುರುಸು ಉಂಟು ಮಾಡುತ್ತದೆ. ಜಾಹೀರಾತುಗಳಿಂದಾಗಿ ಬಿಎಂಟಿಸಿ ಹಾಗೂ ಖಾಸಗಿ ಬಸ್ ನಡುವಿನ ವ್ಯತ್ಯಾಸವೇ ತಿಳಿಯುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಜಾಹೀರಾತುಗಳಿಂದಾಗಿ ಬಿಎಂಟಿಸಿ ಬಸ್ ಲೋಗೋ ಕೂಡ ಕಾಣಿಸುವುದಿಲ್ಲ, ನಾನು ಮೊದಲು ಇದೊಂದು ಖಾಸಗಿ ಬಸ್ ಎಂದು ತಿಳಿದು ಹತ್ತಿದೆ. ನಂತರ ಕಂಡಕ್ಟರ್ ಟಿಕೆಟ್ ನೀಡುತ್ತಿರುವುದನ್ನು ನೋಡಿ ನಂತರ ತಿಳಿಯಿತು ಅದು ಬಿಎಂಟಿಸಿ ಬಸ್ ಎಂದು ವಸಂತ್ ಕುಮಾರ್ ಎಂಬ ಪ್ರಯಾಣಿರು ತಮ್ಮ ಅನುಭವ ತಿಳಿಸಿದ್ದಾರೆ.
ಖಾಸಗಿ ಹಾಗೂ ಸರ್ಕಾರಿ ವಾಹನಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಸ್ಥಳೀಯ ಸಾರಿಗೆ ಆಯುಕ್ತರ ಅನುಮತಿ ಪಡೆಯಬೇಕು ಎಂದು ಕರ್ನಾಟಕ ಮೋಟಾರು ವಾಹನ ಕಾಯ್ದೆ ನಿಯಮವಿದೆ. ಆದರೆ ಅನುಮತಿ ಪಡೆದು ಜಾಹೀರಾತು ಪ್ರದರ್ಶನ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ ನಡೆಯಲು ಕಾರಣವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಜಾಹೀರಾತುಗಳು ಟ್ರಾಫಿಕ್ ಸಿಗ್ನಲ್ ಗಳಲ್ಲಿ ವಾಹನ ಸವಾರರ ಗಮನ ಬೇರೆಡೆ ಸೆಳೆಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತವಾಗುವ ಸಾಧ್ಯತೆಯಿದೆ. ವಾಹನ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂಥ ಜಾಹೀರಾತು ನಿಷೇದಿಸಬೇಕು, ಹಣಕ್ಕಿಂತ ವ್ಯಕ್ತಿಯ ಸುರಕ್ಷತೆ ಹೆಚ್ಚು ಮುಖ್ಯ ಎಂದು ಟ್ರಾಫಿಕ್ ತಜ್ಞ ಶ್ರೀಹರಿ ಹೇಳಿದ್ದಾರೆ.
ಒಮ್ಮೆ ಒಪ್ಪಂದದ ಅವಧಿ ಮುಗಿದ ನಂತರ ಬಸ್ ಮೇಲಿರುವ ಜಾಹೀರಾತುಗಳನ್ನು ತೆಗೆಯಬೇಕಾಗುತ್ತದೆ. ಈ ವೇಳೆ ಬಸ್ ಗಲೀಜಾಗುತ್ತದೆ, ಬಸ್ ಮೇಲೆ ಗೆರೆಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವು ಬಿಎಂಟಿಸಿ ಬಸ್ ಡ್ರೈವರ್ ಗಳು ಆರೋಪಿಸಿದ್ದಾರೆ.
Advertisement