ಚಾಲಕ ರಮೇಶ್ ಮತ್ತು ಅಧಿಕಾರಿ ಭೀಮಾನಾಯಕ್
ರಾಜ್ಯ
ಚಾಲಕ ರಮೇಶ್ ಆತ್ಮಹತ್ಯೆ ಪ್ರಕರಣ: ಕೆಎಎಸ್ ಅಧಿಕಾರಿ ಭೀಮಾನಾಯಕ್ ಸಿಐಡಿ ವಶಕ್ಕೆ
ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಚಾಲಕ ರಮೇಶ್ ಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ...
ಮಂಡ್ಯ: ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಚಾಲಕ ರಮೇಶ್ ಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧನಕ್ಕೊಳಗಾಗಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾ ನಾಯಕ್ ಹಾಗೂ ಅವರ ಖಾಸಗಿ ಕಾರು ಚಾಲಕ ಮೊಹಮ್ಮದ್ ಅವರನ್ನು ಮದ್ದೂರು ಜೆಎಂಎಫ್ ಸಿ ಕೋರ್ಟ್ ಐದು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿದೆ.
ಇಂದು ಬೆಳಗ್ಗೆ ಕಲಬುರ್ಗಿಯಲ್ಲಿ ಸಿಐಡಿ ಪೊಲೀಸರು ಭೀಮಾನಾಯಕ್ ಹಾಗೂ ಅಹಮ್ಮದ್ ಅವರನ್ನು ಬಂಧಿಸಿದ್ದರು. ಬಳಿಕ ಮಂಡ್ಯ ಜಿಲ್ಲೆ ಮದ್ದೂರಿಗೆ ಕರೆದೊಯ್ದು ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ಡಿಸೆಂಬರ್ 17ರವರೆಗೆ ಸಿಐಡಿ ವಶಕ್ಕೆ ನೀಡಿದೆ.
ಡಿಸೆಂಬರ್ 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ರಮೇಶ್ ಅವರು, ನನ್ನ ಸಾವಿಗೆ ಭೀಮಾನಾಯಕ್ ಹಾಗೂ ಅವರ ಖಾಸಗಿ ಕಾರು ಚಾಲಕ ಮಹಮದ್ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಈ ಸಂಬಂಧ ಮದ್ದೂರು ಠಾಣೆಯಲ್ಲಿ ದೂರು ದಾಖಲಾದ ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.
ಇಂದು ಮಂಡ್ಯ ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಲಬುರಗಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಭೀಮಾ ನಾಯಕ್ ಅವರನ್ನು ಬಂಧಿಸಿತ್ತು. ಬಳಿಕ ಮೊಹಮದ್ ಅವರನ್ನು ವಶಕ್ಕೆ ಪಡೆದಿತ್ತು.
ರಮೇಶ್ ಅವರು ತಮ್ಮ 17 ಪುಟಗಳ ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಹೆಸರು ಪ್ರಸ್ತಾಪ ಮಾಡಿದ್ದು, ರೆಡ್ಡಿಯ ಸುಮಾರು 100 ಕೋಟಿ ರುಪಾಯಿಯಷ್ಟು ಕಪ್ಪು ಹಣವನ್ನು ಭೀಮಾನಾಯ್ಕ್ ಅವರು ಶೇ.20ರಷ್ಟು ಕಮಿಷನ್ ಪಡೆದು ವೈಟ್ ಆಗಿ ಮಾಡಿಕೊಟ್ಟಿರುವುದಾಗಿ ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ