ನೋಟು ನಿಷೇಧ: ವಿದ್ಯುತ್ ಮಗ್ಗ ಕಾರ್ಖಾನೆಗಳು ನಷ್ಟದ ಹಾದಿಯಲ್ಲಿ, ವಲಸೆ ಕಾರ್ಮಿಕರು ಊರುಗಳತ್ತ

500 ಮತ್ತು 1000 ಮುಖಬೆಲೆಯ ನೋಟು ನಿಷೇಧದಿಂದಾಗಿ ಕಾಮಾಕ್ಷಿ ಪಾಳ್ಯ, ವೃಷಭಾವತಿ ನಗರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: 500 ಮತ್ತು 1000 ಮುಖಬೆಲೆಯ ನೋಟು ನಿಷೇಧದಿಂದಾಗಿ ಕಾಮಾಕ್ಷಿ ಪಾಳ್ಯ, ವೃಷಭಾವತಿ ನಗರ, ಕಮಲಾನಗರ ಮತ್ತು ಕಾರೆಕಲ್ಲುಗಳಲ್ಲಿ ಸಣ್ಣ ಮಟ್ಟದ ಕೈಗಾರಿಕೆಗಳು ಮತ್ತು ವಿದ್ಯುತ್ ಮಗ್ಗ ಫ್ಯಾಕ್ಟರಿಗಳಿಗೆ ಬಿಸಿ ತಟ್ಟಿದೆ. ಫ್ಯಾಕ್ಟರಿಗಳಲ್ಲಿನ ಅನೇಕ ಯಂತ್ರಗಳನ್ನು ಮನೆಗಳಿಗೆ ಇಲ್ಲವೇ ಗ್ಯಾರೇಜ್ ಗಳಿಗೆ ಸಾಗಿಸಲಾಗಿದೆ. ಉತ್ಪಾದನೆ ವಿಪರೀತ ಕುಸಿದಿದ್ದು ಶೇಕಡಾ 60 ರಷ್ಟು ವ್ಯಾಪಾರ ಕುಸಿದಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೇರೆಡೆ ಉದ್ಯೋಗ ಹುಡುಕಬೇಕಾದ ಪರಿಸ್ಥಿತಿ ಬಂದಿದೆ.
ಪ್ರತಿಯೊಂದು ವಿದ್ಯುತ್ ಮಗ್ಗ ಫ್ಯಾಕ್ಟರಿಗಳಲ್ಲಿ 2ರಿಂದ 15 ಮೆಶಿನ್ ಗಳಿದ್ದು ಅವುಗಳಲ್ಲಿ ಕೆಲವು ರೇಷ್ಮೆ ಸೀರೆಗಳನ್ನು ತಯಾರಿಸುತ್ತವೆ. ಪ್ರತಿ ಯಂತ್ರ ಒಂದು ರೇಷ್ಮೆ ಸೀರೆ ತಯಾರಿಸಲು 5ರಿಂದ 6 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ದಿನದಲ್ಲಿ 2 ಸೀರೆಗಳು ತಯಾರಾಗುತ್ತವೆ. ಕಾರ್ಮಿಕರಿಗೆ ವಾರಕ್ಕೊಮ್ಮೆ ವೇತನ ಸಿಗುತ್ತದೆ. 
ವಿದ್ಯುತ್ ಮಗ್ಗ ನೇಯ್ಗೆ ಉತ್ಪಾದಕರ ಸಂಘದ ಅಧ್ಯಕ್ಷ ಶಿವಕುಮಾರ್ ಹೇಳುವ ಪ್ರಕಾರ, ನೋಟು ನಿಷೇಧ ಘೋಷಣೆಯಾದ ದಿನದಿಂದ ನಮ್ಮ ವ್ಯಾಪಾರ ತೀವ್ರ ಕುಸಿದಿದೆ. ಇಲ್ಲಿ ಕೆಲಸ ಮಾಡುವ ಶೇಕಡಾ 70 ಕಾರ್ಮಿಕರ ಬಳಿ ಬ್ಯಾಂಕ್ ಖಾತೆಯಿಲ್ಲ. ಮಾಲಿಕರಿಗೆ ವೇತನ ನೀಡಲು ಕಷ್ಟವಾಗುತ್ತಿದೆ. ಕಾರ್ಮಿಕರು ಹಳೆ ನೋಟುಗಳನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಒಟ್ಟಾರೆ ಉತ್ಪಾದನೆ, ವ್ಯಾಪಾರ ಕುಸಿದಿದೆ ಎನ್ನುತ್ತಾರೆ.
ವೆಂಕಟ್ ಎಂಬ ಕಾರ್ಮಿಕ ಕಳೆದ 25 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ನಾನು ಬ್ಯಾಂಕಿಗೆ ಹಣಕ್ಕೆಂದು ಹೋದರೆ ಸರದಿಯಲ್ಲಿ ನಿಲ್ಲಬೇಕು. ಫ್ಯಾಕ್ಟರಿಯಲ್ಲಿ ಕೆಲಸ ಕಳೆದುಕೊಳ್ಳುತ್ತೇನೆ ಎಂಬ ಭೀತಿ ಉಂಟಾಗುತ್ತದೆ ಎನ್ನುತ್ತಾರೆ.
ನೋಟು ನಿಷೇಧದಿಂದಾಗಿ ಉಂಟಾದ ತೊಂದರೆಯಿಂದಾಗಿ ಇಲ್ಲಿನ ಕಾರ್ಮಿಕರು ಪರ್ಯಾಯ ಕೆಲಸ  ಹುಡುಕುತ್ತಿದ್ದಾರೆ. ಕಾರ್ಮಿಕರಿಗೆ ದಿನನಿತ್ಯದ ಬದುಕು ದುಸ್ತರವಾಗುತ್ತಿದೆ.
ಹಣದ ಸಮಸ್ಯೆಯಿಂದ ಊರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು: ಮರಿಯಪ್ಪನಪಾಳ್ಯದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆ ಕಾರ್ಮಿಕರಾಗಿ ಕಲಬುರಗಿಯ ಮಲ್ಲಿಕಾರ್ಜುನ ಕೆಲಸ ಮಾಡುತ್ತಿದ್ದರು. ಮೊನ್ನೆ ಸೋಮವಾರ ಸಂಜೆ ಮಲ್ಲಿಕಾರ್ಜುನ ತನ್ನ ಪತ್ನಿ ಮತ್ತು ಐವರು ಮಕ್ಕಳೊಂದಿಗೆ ಊರಿನತ್ತ ಮುಖ ಮಾಡಿದರು. ಅದಕ್ಕೆ ಕಾರಣ ನೋಟು ನಿಷೇಧದ ನಂತರ ಉಂಟಾದ ಕೆಲಸದ ಕೊರತೆ ಮತ್ತು ಸಂಬಳ ಸಿಗದಿರುವುದು.
ನನಗೆ ನನ್ನ ಗುತ್ತಿಗೆದಾರರಿಂದ ಸಂಪೂರ್ಣ ಹಣ ಸಿಕ್ಕಿಲ್ಲ. ಇನ್ನು ಸ್ವಲ್ಪ ದಿನ ನಾವಿಲ್ಲಿದ್ದರೆ ನಾನು, ನನ್ನ ಹೆಂಡಿರು ಮಕ್ಕಳು ಉಪವಾಸ ಬೀಳಬೇಕಾಗುತ್ತದೆ. ಹೊಸ ಕೆಲಸವೇನೂ ಇಲ್ಲ ಮತ್ತು ಹಳೆ ವೇತನವೇ ಇನ್ನೂ ಸಂಪೂರ್ಣ ಸಿಕ್ಕಿಲ್ಲ. ನಾನು ನನ್ನೂರಿಗೆ ಹೋದರೆ ಕನಿಷ್ಠ ನ್ಯಾಯಬೆಲೆ ಅಂಗಡಿಯಿಂದಲಾದರೂ ಅಕ್ಕಿ ಸಿಗಬಹುದು. ಪರಿಸ್ಥಿತಿ ಮೊದಲ ಸ್ಥಿತಿಗೆ ಬಂದ ನಂತರ ಇಲ್ಲಿಗೆ ಬರುತ್ತೇನೆ ಎಂದು ಊರ ಕಡೆ ಮುಖ ಮಾಡಿದರು.
ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಪಶ್ಚಿಮ ಬಂಗಾಳದ ಕಾರ್ಮಿಕ ಸಂಜಯ್ ಬರ್ಮನ್ ಹೆಚ್ ಎಸ್ಆರ್ ಲೇ ಔಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಈಗ ಯಾರ ಹತ್ತಿರವೂ ಹಣವಿಲ್ಲ, ಹಾಗಾಗಿ ಹೊಸ ಕೆಲಸ ಆರಂಭಿಸುತ್ತಿಲ್ಲ. ಕಾಂಟ್ರಾಕ್ಟರ್ ಗಳಿಗೆ ಬ್ಯಾಂಕಿನಲ್ಲಿ ಸಾಕಷ್ಟು ಹಣ ಸಿಗುತ್ತಿಲ್ಲ. ಹೀಗಾಗಿ ಕಳೆದೊಂದು ತಿಂಗಳಿನಿಂದ ನಮಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಇದರಿಂದ ನನ್ನ ಅನೇಕ ಸ್ನೇಹಿತರು ಊರಿಗೆ ಹೋಗಿದ್ದಾರೆ ಎನ್ನುತ್ತಾರೆ.
ಬೆಂಗಳೂರು ನಗರದಲ್ಲಿ ಖರ್ಚು ವೆಚ್ಚ ಅಧಿಕವಾಗಿರುವುದರಿಂದ ಸರಿಯಾದ ದುಡಿಮೆಯಿಲ್ಲದೆ ಸಂಬಳ ಸಿಗದಿರುವುದರಿಂದ ಅನೇಕ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ಮುಖಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com