ಜೀವಮಾನದ ಅಷ್ಟೂ ಉಳಿತಾಯದ ಹಣ ಖರ್ಚು ಮಾಡಿ ಸುಮಾರು 4 ಸಾವಿರ ಮದುವೆ ಮಾಡಿದ!

ತಮ್ಮ ಜೀವಮಾನವಿಡಿ ದುಡಿದು ಕೂಡಿಟ್ಟಿದ್ದ ಹಣವನ್ನೆಲ್ಲಾ 4,350 ಮದುವೆಗಳಿಗಾಗಿ ಖರ್ಚು ಮಾಡಿ ಬರಿಗೈ ಆಗಿದ್ದಾರೆ. ಪ್ರಪಂಚದಲ್ಲೇ ಇವರದ್ದು ಅತಿ ದೊಡ್ಡ ...
ಸ್ವಯಂವರ ಟ್ರಸ್ಟ್ ಮೂಲಕ ವಿವಾಹವಾದವರು
ಸ್ವಯಂವರ ಟ್ರಸ್ಟ್ ಮೂಲಕ ವಿವಾಹವಾದವರು

ಬೆಂಗಳೂರು: ಇವರು ಸಿಎನ್ ವಿಜಯರಾಜ್, ಹಿಂದೊಮ್ಮೆ ಇವರ ಬಳಿ ದೊಡ್ಡ ಬಂಗಲೆ ಹಾಗೂ ಮೂರು ಕಾರುಗಳನ್ನಿಟ್ಟುಕೊಂಡು ಶ್ರೀಮಂತರಾಗಿದ್ದರು, ಆದರೆ ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ತಮ್ಮ ಜೀವಮಾನವಿಡಿ ದುಡಿದು ಕೂಡಿಟ್ಟಿದ್ದ ಹಣವನ್ನೆಲ್ಲಾ 4,350 ಮದುವೆಗಳಿಗಾಗಿ ಖರ್ಚು ಮಾಡಿ ಬರಿಗೈ ಆಗಿದ್ದಾರೆ. ಪ್ರಪಂಚದಲ್ಲೇ ಇವರದ್ದು ಅತಿ ದೊಡ್ಡ ಕುಟುಂಬ.

66 ವರ್ಷದ ವಿಜಯ್ ರಾಜ್ ಅವರಿಗೆ 4,350 ಹೆಣ್ಣು ಮಕ್ಕಳು-ಅಳಿಯಂದಿರು, 1350 ಮೊಮ್ಮಕ್ಕಳು ಇದ್ದಾರೆ. ಎಲ್ಲರೂ ಇವರನ್ನು ಅಪ್ಪ ಎಂದು ಕರೆಯುವುದರಿಂದ ತಮ್ಮ 26 ವರ್ಷದ ಮಗ ಹೊಟ್ಟೆಕಿಚ್ಚು ಪಡುತ್ತಾನೆ ಎಂದು ವಿಜಯ್ ರಾಜ್ ನಗು ನಗುತ್ತಾ ಹೇಳುತ್ತಾರೆ.

ಫರ್ನಿಚರ್ ಬ್ಯುಸಿನೆಸ್ ಮಾಡುತ್ತಿದ್ದ ವಿಜಯ್ ರಾಜ್ ದೊಡ್ಡ ಬಂಗಲೆ, 3 ಕಾರು ಹಾಗೂ 35 ದ್ವಿಚಕ್ರ ವಾಹನಗಳ ಮಾಲೀಕರಾಗಿದ್ದರು. ಈಗ ಎಲ್ಲವನ್ನು ಕಳೆದುಕೊಂಡು ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ಪತ್ನಿ ಹಾಗೂ ಮಗನೊಂದಿಗೆ ವಾಸವಾಗಿದ್ದಾರೆ. ತನ್ನ ಎಲ್ಲಾ ಕೆಲಸಗಳಿಗೆ ತಮ್ಮ ಪತ್ನಿ ಸಂಪೂರ್ಣ ಸಹಕಾರ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಮಹಿಳಾ ದಿನಾಚರಣೆಯೊಂದರಲ್ಲಿ ಭಾಗವಹಿಸಿದ ದಿನದಿಂದ ತನ್ನ ಜೀವನದ ದಿಕ್ಕು ಹಾಗೂ ಉದ್ದೇಶ ಬದಲಾಯಿತು ಎಂಬುದು ವಿಜಯ್ ರಾಜ್ ಅಭಿಪ್ರಾಯ. ಕೆಲ ವರ್ಷಗಳ ಹಿಂದೆ ಕರ್ನಾಟಕ ಶ್ರವಣದೋಷ ಅಸೋಸಿಯೇಷನ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಶ್ರವಣ ದೋಷವುಳ್ಳವರ ಜೊತೆ ಸಂಹವನ ಮಾಡುವುದು ತೀರಾ ಕಷ್ಟದ ಕೆಲಸ ಎಂದು ಅಲ್ಲಿ ನನಗೆ ತಿಳಿಯಿತು. ಕೇವಲ ಕೈ ಸನ್ನೆ ಮಾಡುವ ಮೂಲಕ ಅವರೊಂದಿಗೆ ಮಾತನಾಡಬೇಕು. ಇಂಥವರಿಗಾಗಿ ನಾನು ಏನಾದರೂ ಸಹಾಯ ಮಾಡಬೇಕು ಎಂದು ನನಗೆ ಅನಿಸಿತು.

ಈ ವೇಳೆ ಅಲ್ಲಿ ಕಿವಿ ಕೇಳದ 45 ವರ್ಷದ ಮಹಿಳೆಯೊಬ್ಬರನ್ನು ವಿಜಯ್ ರಾಜ್ ಭೇಟಿಯಾದರು. ನನಗೆ ಕೆಲಸವು ಸಿಗಲಿಲ್ಲ, ಮದುವೆಯೂ ಆಗಲಿಲ್ಲ ಎಂದು ಆಕೆ ತಮ್ಮ ಕಷ್ಟವನ್ನು ವಿಜಯ್ ರಾಜ್ ಬಳಿ ಹೇಳಿಕೊಂಡರು. 2000 ನೇ ಇಸವಿಯಲ್ಲಿ ಸ್ವಯಂವರ ಟ್ರಸ್ಟ್ ಸ್ಥಾಪಿಸಿದ ವಿಜಯ್ ರಾಜ್ ಪ್ರತಿ ವರ್ಷ ಶ್ರವಣ ದೋಷವುಳ್ಳ ವಧು-ವರರ ಸಮಾವೇಶ ನಡೆಸುತ್ತಾರೆ. ಇದಕ್ಕೆ ಎಲ್ಲಾ ಜಿಲ್ಲೆಗಳಿಂದ ಅಭ್ಯರ್ಥಿಗಳು ಬರುತ್ತಾರೆ. ಇಲ್ಲಿ ಬಂದು ಗಂಡು ಹಾಗೂ ಹೆಣ್ಣಿನ ಮನೆಯವರು ಒಪ್ಪಿಕೊಂಡರೇ ವಿವಾಹ ಮಾಡಿಸಲಾಗುತ್ತದೆ. ಮದುವೆಗೆ ಬೇಕಾಗುವ ಬಟ್ಟೆ, ಮಂಗಳ ಸೂತ್ರ , ಊಟ ಸೇರಿದಂತೆ ಎಲ್ಲಾ ಅಗತ್ಯಗಳನ್ನು ಟ್ರಸ್ಟ್ ಪೂರೈಸುತ್ತದೆ ಎಂದು ವಿಜಯ್ ರಾಜ್ ಹೇಳಿದ್ದಾರೆ.

ಪ್ರತಿ ವರ್ಷ ಸ್ವಯಂವರ ಟ್ರಸ್ಟ್ ಈ ಸಮಾವೇಶ ನಡೆಸುತ್ತಿದ್ದು, ಈಗ ಮದುವೆಗಾಗಿ ಅನುದಾನ ಪಡೆದು ಹಲವು ಜನಹಿತ ಕಾರ್ಯಗಳನ್ನು ಮಾಡುತ್ತಿದೆ. ಸ್ವಯಮವರ ಟ್ರಸ್ಟ್ ಪಿಯು ಕಾಲೇಜು ಸ್ಥಾಪಿಸಿದೆ. ಇಲ್ಲಿ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ.

2017ರ ಜನವರಿ 5ಮತ್ತು 6 ನೇ ತಾರೀಖಿನಂದು ಹಲಸೂರು ಜೌಗುಪಾಳ್ಯದ  ಬಿಬಿಎಂಪಿ ಕಾರ್ಪೋರೇಶನ್ ಛತ್ರದಲ್ಲಿ ಸ್ವಯಂವರ ಏರ್ಪಡಿಸಲಾಗಿದೆ. ಜನವರಿ 5ನೇ ತಾರೀಖಿನಿಂದ ಬೆಳಗ್ಗೆ 8 ಗಂಟೆಗೆ ರಿಜಿಸ್ಟ್ರೇಷನ್ ಆರಂಭವಾಗಲಿದೆ.ಅಂದೇ ವಧು ವರರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com