ಜನವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆ ಜಾರಿ

ಮುಂದಿನ ತಿಂಗಳು ಜನವರಿಯಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಗರ್ಭಿಣಿ ಮತ್ತು ಹಾಲುಣಿಸುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂದಿನ ತಿಂಗಳು ಜನವರಿಯಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಗರ್ಭಿಣಿ ಮತ್ತು ಹಾಲುಣಿಸುವ ಬಡ ಮಹಿಳೆಯರಿಗೆ ಪ್ರತಿದಿನ ಪೌಷ್ಟಿಕ ಊಟ ಸರ್ಕಾರದ ವತಿಯಿಂದ ಸಿಗಲಿದೆ.
ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ರಾಜ್ಯದ ಜನತೆಗೆ ಹಲವು ಭಾಗ್ಯಗಳನ್ನು ಕರುಣಿಸಿದ್ದ ರಾಜ್ಯ ಸರ್ಕಾರ ಇದೀಗ ಮಹಿಳೆಯರಿಗಾಗಿ ಮಾತೃಪೂರ್ಣ ಎಂಬ ವಿನೂತನ ಯೋಜನೆಯೊಂದನ್ನು ಆರಂಭಿಸಲಿದೆ. 
ಜನವರಿ ತಿಂಗಳಿನಿಂದ ರಾಜ್ಯದ 4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭವಾಗಲಿದ್ದು, ನಂತರ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆ ಮೂಲಕ ಜಾರಿಯಾಗುತ್ತಿರುವ ಮಾತೃಪೂರ್ಣ ಯೋಜನೆ ಜನವರಿ ತಿಂಗಳ ಮೊದಲ ವಾರದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ, ಬಾಗಲಕೋಟೆಯ ಜಮಖಂಡಿ, ರಾಯಚೂರಿನ ಮಾನ್ವಿ ಹಾಗೂ ಮೈಸೂರಿನ ಎಚ್.ಡಿ.ಕೋಟೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಗಲಿದೆ.  ಮೊದಲ ಹಂತದಲ್ಲಿ 32 ಸಾವಿರ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಈ ಯೋಜನೆಯ ನೆರವು ದೊರಕಲಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯನ್ನು ನಿರ್ವಹಿಸಲಿದ್ದಾರೆ.
ಮಾತೃಪೂರ್ಣ ಯೋಜನೆಯ ಮುಖ್ಯ ಉದ್ದೇಶವೆಂದರೆ ಅಪೌಷ್ಠಿಕತೆಯನ್ನು ತಡೆಗಟ್ಟಿ , ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದರಿಗೆ ಪೌಷ್ಠಿಕಾಂಶದ ಆಹಾರಗಳನ್ನು ನೀಡುವುದಾಗಿದೆ.  ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಅಪೌಷ್ಠಿಕತೆಯಿಂದ ಗರ್ಭಿಣಿಯರು ಅಸುನೀಗುವುದನ್ನು ತಡೆಯಲು , ಅಂಗವೈಕಲ್ಯವಾಗಿ ಮಕ್ಕಳು ಜನಿಸುವುದನ್ನು ತಡೆಯುವುದಾಗಿದೆ.
ಯೋಜನೆಯ ಮೂಲಕ ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಮಧ್ಯಾಹ್ನ ಮೊಟ್ಟೆ , ಅನ್ನಸಾಂಬಾರು, ಸೊಪ್ಪು-ತರಕಾರಿ ನೀಡಲಾಗುತ್ತದೆ. ಮೊಟ್ಟೆ ಸೇವಿಸದ ವರಿಗೆ ಬೆಲ್ಲ , ಕೊಬ್ಬರಿ, ಕಡಲೆಬೀಜ ಮಿಶ್ರಣದ ಪೌಷ್ಠಿಕಾಂಶವನ್ನೊಳಗೊಂಡ ಪದಾರ್ಥವನ್ನು ವಿತರಣೆ ಮಾಡಲಾಗುತ್ತದೆ. ಅಂಗನವಾಡಿಗಳ ಮೂಲಕ ಊಟವನ್ನು ವಿತರಣೆ ಮಾಡಲಾಗುವುದು, ಪ್ರತಿ ಊಟಕ್ಕೆ 21 ರೂಪಾಯಿಗಳಷ್ಟು ವೆಚ್ಚವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ದೀಪಾ ಎಂ.ಚೋಲನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com