ಕೆಂಪೇಗೌಡ ಲೇ ಔಟ್ ಸೈಟ್ ಗಳ ಹಂಚಿಕೆಯ ಮೊದಲ ಪಟ್ಟಿ ಬಿಡುಗಡೆ

ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ 5 ಸಾವಿರ ಸೈಟ್ ಗಳ ಫಲಾನುಭವಿಗಳ ಮೊದಲ ಪಟ್ಟಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ...
ಬಿಡಿಎ ಆಯುಕ್ತ ರಾಜ್ ಕುಮಾರ್ ಕತ್ರಿ ಹೆಚ್ ಎಸ್ ಆರ್ ಲೇ ಔಟ್ ನಲ್ಲಿ ಸಾರ್ವಜನಿಕ ಕುಂದುಕೊರತೆಗಳಿಗೆ ಉತ್ತರಿಸುತ್ತಿರುವುದು.
ಬಿಡಿಎ ಆಯುಕ್ತ ರಾಜ್ ಕುಮಾರ್ ಕತ್ರಿ ಹೆಚ್ ಎಸ್ ಆರ್ ಲೇ ಔಟ್ ನಲ್ಲಿ ಸಾರ್ವಜನಿಕ ಕುಂದುಕೊರತೆಗಳಿಗೆ ಉತ್ತರಿಸುತ್ತಿರುವುದು.
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ 5 ಸಾವಿರ ಸೈಟ್ ಗಳ ಫಲಾನುಭವಿಗಳ ಮೊದಲ ಪಟ್ಟಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಶನಿವಾರ ಬಿಡುಗಡೆ ಮಾಡಿದೆ. ವೆಬ್ ಸೈಟ್ ವಿಳಾಸ: www.bdabangalore.org.
ಸಾರ್ವಜನಿಕರು ತಮ್ಮ ಆಕ್ಷೇಪಗಳಿದ್ದಲ್ಲಿ ಜುಲೈ 30ರೊಳಗೆ ಸಲ್ಲಿಸಬಹುದು, ಅಂತಿಮ ಪಟ್ಟಿ ಜುಲೈ 30ರ ನಂತರ ಪ್ರಕಟಗೊಳ್ಳಲಿದೆ.
5 ಸಾವಿರ ಸೈಟ್ ಗಳಿಗೆ ಒಟ್ಟು 31 ಸಾವಿರದ 349 ಅರ್ಜಿಗಳು ಬಂದಿದ್ದವು. 1984ರ ಬಿಡಿಎ ನಿಯಮದ ಪ್ರಕಾರ, ಸೈಟ್ ಗಳ ಹಂಚಿಕೆ ವೇಳೆ ಎಷ್ಟು ಬಾರಿ ಅರ್ಜಿ ಸಲ್ಲಿಸಿದ್ದಾರೆ ಎಂದು ನೋಡಿಕೊಂಡು ಅತಿ ಹೆಚ್ಚು ಸಲ ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗಿದೆ. 
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಡಿಎ, 5 ಸಾವಿರ ಸೈಟ್ ಗಳಲ್ಲಿ 20*30 ಅಳತೆಯ ಸಾವಿರದ 500 ಸೈಟ್ ಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ, 20*30 ಅಳತೆಯ 500 ಸೈಟ್ ಗಳನ್ನು ಸಾಮಾನ್ಯ ವರ್ಗಕ್ಕೆ, 2 ಸಾವಿರ 30*40 ಅಳತೆಯ ಸೈಟ್ ಗಳು, 40*60 ಅಳತೆಯ ಸಾವಿರ ಸೈಟ್ ಗಳು ಮತ್ತು 50*80 ಅಳತೆಯ 500 ಸೈಟ್ ಗಳನ್ನು ಹಂಚಿಕೆ ಮಾಡಿದೆ.
ಬೆಂಗಳೂರಿನ ಯಶವಂತಪುರ, ಕೆಂಗೇರಿ ಹೋಬಳಿ, ಶೀಗೆಹಳ್ಳಿ, ಕನ್ನೆಲ್ಲಿ, ಕೊಡಿಗೇಹಳ್ಳಿ, ಮಂಗನಹಳ್ಳಿ, ಕೊಮ್ಮಗಟ್ಟ, ಭೀಮನಕುಪ್ಪೆ, ಭೀಮನಕುಪ್ಪೆ ರಾಮಸಾಗರ, ಸೂಲಿಕೆರೆ, ಕೆಂಚನಾಪುರ, ರಾಮಸಂದ್ರ, ಕೊಮ್ಮಗಟ್ಟ ಕೃಷ್ಣಸಾಗರ ಮತ್ತು ಚಲ್ಲಘಟ್ಟಗಳಲ್ಲಿ ಸೈಟ್ ಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗಿದೆ.
91 ವರ್ಷದಲ್ಲಿ ಬಿಡಿಎ ಸೈಟ್: ಬಿಡಿಎ ಸೈಟ್ ಖರೀದಿಸಬೇಕೆಂದು ಕನಸು ಕಾಣುತ್ತಾ ಹಲವು ಸಲ ಅರ್ಜಿ ಹಾಕುತ್ತಿದ್ದ 91 ವರ್ಷದ ವೆಂಕಟರಾಮ ರಾವ್ ಅವರಿಗೆ 40*60 ಅಳತೆಯ ಸೈಟ್ ನ್ನು ಹಂಚಿಕೆ ಮಾಡಲಾಗಿದೆ. ಇವರು ಸೈಟ್ ಪಡೆದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದರೆ, 20 ವರ್ಷದ ಎಸ್.ಸುಷ್ಮಾಗೆ ಆರ್ಥಿಕವಾಗಿ ಹಿಂದುಳಿದ ವರ್ಗದಡಿಯಲ್ಲಿ 20*30  ಅಳತೆಯ ಸೈಟ್ ಸಿಕ್ಕಿದೆ.ಆಕೆ ಇದು 5ನೇ ಬಾರಿಗೆ ಪ್ರಯತ್ನಿಸುತ್ತಿರುವುದು.
10ನೇ ಪ್ರಯತ್ನ: 58 ವರ್ಷ ವಯಸ್ಸಿನ ಎ.ಕೆ.ಪ್ರಭಾವತಿಯವರಿಗೆ 10ನೇ ಪ್ರಯತ್ನದಲ್ಲಿ 30*40 ಅಳತೆಯ ಸೈಟ್ ಸಿಕ್ಕಿದೆ. ಎರಡರಿಂದ 10 ಸಲ ಅರ್ಜಿ ಹಾಕಿದವರಿಗೆ ಆದ್ಯತೆ ಮೇರೆಗೆ ಈ ಬಾರಿ ಸೈಟ್ ಹಂಚಿಕೆ ಮಾಡಲಾಗಿದೆ ಎನ್ನುತ್ತದೆ ಬಿಡಿಎ.
ಇನ್ನು ವರ್ಗ 1ರಡಿ ಕಲೆ, ವಿಜ್ಞಾನ ಮತ್ತು ಕ್ರೀಡೆ ಹಾಗೂ 9 ಮಂದಿ ಮಾಜಿ ಸೈನಿಕರಿಗೆ 20*30 ಅಳತೆಯ ಸೈಟ್ ಹಂಚಿಕೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com