ದೂರ ಪ್ರಯಾಣದ ಖಾಸಗಿ ಬಸ್ಸುಗಳಿಗೆ ಬೆಂಗಳೂರು ನಗರದೊಳಗೆ ಪ್ರವೇಶ ನಿಷಿದ್ಧ

ರಾಜ್ಯದಲ್ಲಿ ಮತ್ತು ಹೊರರಾಜ್ಯಗಳಲ್ಲಿ ಸಂಚರಿಸುತ್ತಿರುವ ಖಾಸಗಿ ಬಸ್ಸುಗಳನ್ನು ಬೆಂಗಳೂರು ನಗರದೊಳಗೆ ಪ್ರವೇಶವಿರುವುದಿಲ್ಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಮತ್ತು ಹೊರರಾಜ್ಯಗಳಲ್ಲಿ ಸಂಚರಿಸುತ್ತಿರುವ ಖಾಸಗಿ ಬಸ್ಸುಗಳನ್ನು ಬೆಂಗಳೂರು ನಗರದೊಳಗೆ ಪ್ರವೇಶವಿರುವುದಿಲ್ಲ. ಖಾಸಗಿ ಬಸ್ಸಿನವರು ಪ್ರಯಾಣಿಕರನ್ನು ನಗರದ ಹೊರವಲಯದಲ್ಲಿರುವ ನಿಲ್ದಾಣಗಳಲ್ಲಿ ಬಿಡಬೇಕು. ಈ ತೀರ್ಮಾನವನ್ನು ಇತ್ತೀಚೆಗೆ ನಡೆದ ರಾಜ್ಯ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಬೆಂಗಳೂರು ನಗರದಲ್ಲಿ ಮಾಲಿನ್ಯ ಮತ್ತು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಈ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂಬಂಧ ಸಾರಿಗೆ ಇಲಾಖೆ ಸದ್ಯದಲ್ಲಿಯೇ ಆದೇಶ ಹೊರಡಿಸಲಿದೆ.ಈ ವಿಷಯವನ್ನು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಖಚಿತಪಡಿಸಿದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು,  ಈ ಸಭೆ ನಡೆಸುವುದಕ್ಕೆ ಒಂದು ವಾರಕ್ಕೂ ಮುನ್ನ ಖಾಸಗಿ ಬಸ್ಸು ನಿರ್ವಾಹಕರಿಗೆ ನೊಟೀಸ್ ಕಳುಹಿಸಲಾಗಿತ್ತು. ಖಾಸಗಿ ಬಸ್ಸು ನಿರ್ವಾಹಕರನ್ನು ಪ್ರತಿನಿಧಿಸಿ ವಕೀಲರು ಈ ಸಂದರ್ಭದಲ್ಲಿ ಹಾಜರಿದ್ದರು ಎಂದರು.
ಹೊಸ ಆದೇಶದಂತೆ ಹೊರವಲಯಗಳಲ್ಲಿ ಖಾಸಗಿ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಮತ್ತು ಇಳಿಸಬೇಕು. ಉದಾಹರಣೆಗೆ ಮಂಗಳೂರು ಕಡೆಯಿಂದ ಬರುವ ಬಸ್ಸು ಪೀಣ್ಯ ಕೆಎಸ್ ಆರ್ ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಬೇಕು. ಮೈಸೂರು ಕಡೆಯಿಂದ ಬರುವ ಬಸ್ಸು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೊನೆಯ ಸ್ಟಾಪ್ ನೀಡಬೇಕು. ಸಂಚಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಆರ್ ಹಿತೇಂದ್ರ ವರದಿಯನ್ನು ಸಲ್ಲಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಯಿತು. ಇತ್ತೀಚೆಗೆ ನಗರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದ್ದು, ಅದಕ್ಕೆ ಖಾಸಗಿ ಬಸ್ಸುಗಳು ಕಾರಣವೂ ಹೌದು. ಹೀಗಾಗಿ ಈ ಕ್ರಮ ಕೈಗೊಂಡಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು.
ಖಾಸಗಿ ಬಸ್ಸು ನಿರ್ವಾಹಕರು ಇದನ್ನು ಒಪ್ಪುತ್ತಿಲ್ಲ. ನೂತನ ನಿರ್ವಾಹಕರಿಗೆ ನಿಷೇಧವನ್ನು ಹೇರಬೇಕೆಂದು ಅವರು ಒತ್ತಾಯಿಸುತ್ತಿದ್ದರೂ ಸಾರಿಗೆ ಇಲಾಖೆ ತನ್ನ ನಿಲುವನ್ನು ಬದಲಾಯಿಸುತ್ತಿಲ್ಲ. '' ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದು ಕೇವಲ ಮಾಲಿನ್ಯಕ್ಕೆ ಸಂಬಂಧಿಸಿಲ್ಲ. ಖಾಸಗಿ ಬಸ್ಸುಗಳು ನಗರದಲ್ಲಿ ಸಂಚಾರ ದಟ್ಟಣೆಯನ್ನು ಸೃಷ್ಟಿಸುತ್ತದೆ ಎಂದು ಹಲವಾರು ದೂರುಗಳು ನಮಗೆ ಬಂದಿವೆ. ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವುದು ಹೇಗೆ ಎಂಬ ಪ್ರಶ್ನೆ ಕೇಳುತ್ತಾರೆ, ಎಲ್ಲಾ ಮಾರ್ಗಗಳಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಿರುವಾಗ ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ. ಕೆಲವು ಮಾರ್ಗಗಳಲ್ಲಿ ಮೆಟ್ರೋ ಸೇವೆ ಕೂಡ ಪ್ರಯಾಣಿಕರಿಗೆ ಲಭ್ಯವಿರುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com