ಬೆಂಗಳೂರು: ಹೊಸಕೋಟೆಯಲ್ಲಿ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಅಪ್ರಾಪ್ತ ಬಾಲಕರನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣ ಸಂಬಂಧ ದೂರು ದಾಖಲಿಸಿಕೊಳ್ಳಲು ನಿರಾಕರಿಸಿ, ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಸಬ್ ಇನ್ಸ್ ಪೆಕ್ಟರ್ ದಯಾನಂದ್, ಪೇದೆಗಳಾದ ರಾಜು ಹಾಗೂ ಜಯರಾಮ್ ಅವರನ್ನು ಅಮಾನತುಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.
ಕಳೆದ ಜೂನ್ 30 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದು, ಶಾಮಶೇರ್, ಜಬ್ಬಿ, ಆಯುಬ್ ಹಾಗೂ ಗಾಂಧಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ವ್ಯಾಪಾರಿ ಮುಸ್ತಾಕ್ ಎನ್ನುವವರ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಇದೇ ಆರೋಪದಲ್ಲಿ ಮುಸ್ತಾಕ್ ಅವರ ಪುತ್ರ ನೂರುದ್ದೀನ್ ತನ್ನ 6 ಮಂದಿ ಸ್ನೇಹಿತರೊಂದಿಗೆ ಬಾಲಕರನ್ನು ಶಾಲೆಯಿಂದ ಬಯಲಿಗೆ ಎಳೆದೊಯ್ದು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು.
ಬಾಲಕರು ಬಿದ್ದು ಗೊಗೆರೆದರೂ ಬಿಡದ ಹಲ್ಲೆ ಕೋರರು ಬಾಲಕರ ಕೈಕಾಲುಗಳನ್ನು ತಿರುಚಿ, ಅವರ ಮೈಮೇಲೆ ನಿಂತು ರಕ್ಕಸರಂತೆ ವರ್ತಿಸಿದ್ದರು. ಈ ಎಲ್ಲಾ ಅಟ್ಟಹಾಸವನ್ನು ವಿಡಿಯೋ ಚಿತ್ರಿಕರಣ ಮಾಡಿಕೊಂಡು ಇತರರಿಗೆ ತೋರಿಸಿ ತಮ್ಮ ಏರಿಯಾದಲ್ಲಿ ಹವಾ ಹೇಗಿದೆ ಎನ್ನುವದನ್ನು ತೋರಿಸಲು ಮುಂದಾಗಿದ್ದಾರೆ.
ಹಲ್ಲೆಯ ಬಳಿಕ ತೀವ್ರ ಅಸ್ವಸ್ಥಗೊಂಡ ಬಾಲಕರು ಮನೆಗೆ ಬಂದಾಗ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಬೇಜವಾಬ್ದಾರಿತನ ಪ್ರದರ್ಶಿಸಿ ಪ್ರಕರಣ ದಾಖಲಿಸಿಲು ಹಿಂಜರಿದಿದ್ದರು.
ಘಟನೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಹೊಸಕೋಟೆ ಪೊಲೀಸರು ಪ್ರರಕಣ ದಾಖಲಿಸಿಕೊಂಡಿದ್ದು, ಇತರೆ ಮೂವರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.