
ಬೆಂಗಳೂರು: ಮಕ್ಕಳನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಠಾಣೆಯ ಎಸ್‌ಐ ಹಾಗೂ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಕರ್ತವ್ಯ ಲೋಪ ಆರೋಪದಡಿ ಅಮಾನತುಗೊಳಿಸಲಾಗಿದೆ.
ಆರೋಪಿಗಳ ವಿರುದ್ಧ ಮೊದಲು ಹಲ್ಲೆ ಹಾಗೂ ಅಪಹರಣ ಆರೋಪದಡಿ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಿಡಿಯೊ ಪರಿಶೀಲಿಸಿದ ಬಳಿಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನೂ (ಪೋಕ್ಸೊ) ಪ್ರಯೋಗಿಸಿದ್ದಾರೆ.
ಎಸ್‌ಐ ದಯಾನಂದ್, ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಜು ಮತ್ತು ದಯಾನಂದ್ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಆರೋಪಿಗಳು ಮಕ್ಕಳನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿರುವುದರಿಂದ ಅವರ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ನಡೆದ ದಿನ ದೂರು ದಾಖಲಿಸಿಕೊಳ್ಳದೆ ಪೊಲೀಸರು ವಿಳಂಬ ಮಾಡಿದ್ದಾರೆ. ಮಾರನೇ ದಿನ ಎಫ್‌ಐಆರ್ ದಾಖಲಿಸಿಕೊಂಡರೂ, ಸೂಕ್ತ ಸೆಕ್ಷನ್‌ಗಳನ್ನು ಹಾಕದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಬಾಲಕನ ಅಪಹರಣವಾದ ಬಳಿಕವೂ ಶಿಕ್ಷಕರು ಸಂಬಂಧಪಟ್ಟವರ ಗಮನಕ್ಕೆ ತಂದಿಲ್ಲ.
ಅಂಗಡಿಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಜೂನ್ 30ರಂದು ಮೂವರು ಮಕ್ಕಳನ್ನು ಕಾರಿನಲ್ಲಿ ಅಪಹರಿಸಿದ್ದ ಯುವಕರು, ಹೊಸಕೋಟೆಯ ಸಂತೆಗೇಟ್ ಬಳಿ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದರು.
Advertisement