
ಬೆಂಗಳೂರು; ಸಹಪಾಠಿಗಳು ತೇಜೋವಧೆ ಮಾಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಾಲ್ಡ್ವಿನ್ ಶಾಲೆ ಪ್ರಾಂಶುಪಾಲರು, ಶಾಲಾ ಆವರಣದಲ್ಲಾಗಲಿ ಅಥವಾ ಶಾಲೆಯ ಬಸ್ ನಲ್ಲಾಗಲಿ ಸಹ ಪಾಠಿಗಳು ರೌನಕ್ ನನ್ನು ನಿಂದಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಬಾಲ್ಡವಿನ್ ಶಾಲೆಯ 9ನೇ ತರಗತಿಯ ರೌನಕ್ ಬ್ಯಾನರ್ಜಿ ಜೂನ್ 29ರಂದು ಶಾಲೆಯ ವ್ಯಾನಿನಿಂದ ಇಳಿದು ಮನೆಗೆ ಬಂದವನೇ ಲಿಫ್ಟ್ ಬಳಿ ಬ್ಯಾಗ್ ಇಟ್ಟು ನೇರವಾಗಿ ಅಪಾರ್ಟ್‍ಮೆಂಟ್‍ನ 10ನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗಡೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೋನಕ್ ಬ್ಯಾನರ್ಜಿ ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿದ್ದು ಬ್ಯಾಗ್‍ನಲ್ಲಿ ಪತ್ತೆಯಾಗಿದೆ. ಡೆತ್‍ನೋಟ್‍ನಲ್ಲಿ, ತರಗತಿಯ ಸ್ನೇಹಿತರು ಪ್ರತಿನಿತ್ಯ ತೇಜೋವಧೆ ಮಾಡುತ್ತಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡಿದ್ದಾನೆ.
ಘಟನೆ ನಂತರ ನಾವು ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಚರ್ಚೆ ನಡೆಸಿದ್ದೇವೆ. ಈ ವೇಳೆ ಹಾಜರಿದ್ದ ಪೊಲೀಸರು ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ರೋನಕ್ ಬ್ಯಾನರ್ಜಿ ಬರೆದಿರುವಂತೆ ಯಾವುದೇ ವಿದ್ಯಾರ್ಥಿಗಳು ಆತನನ್ನು ನಿಂದಿಸಿಲ್ಲ. ಇಂಥ ಘಟನೆ ಶಾಲೆ ಆವರಣದಲ್ಲಿ ಅಥವಾ ಶಾಲೆಯ ಬಸ್ ನಲ್ಲಿ ನಡೆದಿಲ್ಲ ಎಂದು ಪ್ರಾಂಶುಪಾಲ ದಿನಕರ್ ವಿಲ್ಸನ್ ಹೇಳಿದ್ದಾರೆ.
ಇನ್ನೂ ರೌನಕ್ ಬ್ಯಾನರ್ಜಿ ಸಹೋದರಿ ದ್ಯುತಿ ಬ್ಯಾನರ್ಜಿ ತನ್ನ ತಮ್ಮನ ಸಾವಿನ ಬಗ್ಗೆ ಆನ್ ಲೈನ್ ನಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾಳೆ. ಶಾಲೆಗಳಲ್ಲಿ ನಡೆಯುವ ನಿಂದನೆ, ತೇಜೋವಧೆ ಸಂಬಂಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾಳೆ. ನಾವು ಪ್ರತಿದಿನ ಶಾಲೆಯಲ್ಲಿ ನಡೆಯುವ ಅಸೆಂಬ್ಲಿಯಲ್ಲಿ ವಿದ್ಯಾರ್ಥಿಗಳಿಗೆ ಬೇರೆ ವಿದ್ಯಾರ್ಥಿಗಳ ತೇಜೋವದೆ ನಿಂದನೆ ಮಾಡಬಾರದು ಎಂದು ಹೇಳುತ್ತಿರುತ್ತೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಶಾಲಾ ಮಕ್ಕಳ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತಡೆಯಲು ವ್ಯವಸ್ಥೆ ಮುಂದಾಗುತ್ತಿಲ್ಲ. ಈ ಸಾಮಾಜಿಕ ಪಿಡುಗಿನಿಂದ ಬೇರೆ ಯಾವ ಮಕ್ಕಳು ತಮ್ಮ ಜೀವನವನ್ನು ಅಂತ್ಯಗೊಳಿಸಬಾರದು ಎನ್ನುವ ಉದ್ದೇಶದಿಂದ ಈ ಆನ್ ಲೈನ್ ಜಾಗೃತಿ ಅಭಿಯಾನ ಮಾಡುತ್ತಿದ್ದೇನೆ. ಇದುವರೆಗೂ 2,496 ಮಂದಿ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ರೋನಕ್ ಬ್ಯಾನರ್ಜಿ ಸಹೋದರಿ ದ್ಯುತಿ ತಿಳಿಸಿದ್ದಾರೆ.
ಶಾಲಾ ವಾಹನದಲ್ಲಿ ವಿದ್ಯಾರ್ಥಿಯೊಬ್ಬ ರೋನಕ್ ನ ತೇಜೋವಧೆ ಮಾಡಿದ್ದಾನೆ. ಈ ವೇಳೆ ಆತನ ಸಹಪಾಠಿಗಳ್ಯಾರು ಆತನ ಸಹಾಯಕ್ಕೆ ಬರಲಿಲ್ಲ. ಹೀಗಾಗಿ ರೋನಕ್ ಆತ್ಮಹತ್ಯೆಯಂತ ನಿರ್ಧಾರ ಕೈಗೊಂಡಿದ್ದಾನೆ. ಈ ಸಂಬಂಧ ಜೆ.ಪಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಎಫ್ ಐ ಆರ್ ದಾಖಲಿಸಲಾಗಿದೆ.
Advertisement