ನನಗೂ ಲಂಚದ ಆಮಿಷ ಒಡ್ಡಲಾಗಿತ್ತು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ಭೂಮಿ ವಿವಾದ ಪ್ರಕರಣ ಸಂಬಂಧ ತಮ್ಮ ಪರವಾಗಿ ತೀರ್ಪು ನೀಡುವಂತೆ ನನಗೆ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ...
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ

ಬೆಂಗಳೂರು: ಭೂಮಿ ವಿವಾದ ಪ್ರಕರಣ ಸಂಬಂಧ ತಮ್ಮ ಪರವಾಗಿ ತೀರ್ಪು ನೀಡುವಂತೆ ನನಗೆ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ ಬಾಂಬ್ ಸಿಡಿಸಿದ್ದಾರೆ.

ಕಂದಾಯ ಇಲಾಖೆ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿರುದ್ಧ ಉಮ್ರಾ ಡೆವಲಪರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಂತರ ಕೋರ್ಟ್ ಹಾಲ್ ನಲ್ಲಿ ನ್ಯಾಯಮೂರ್ತಿಗಳು ಈ ವಿಷಯ ಬಹಿರಂಗ ಪಡಿಸಿದರು.

ತಮ್ಮನ್ನು ಭೇಟಿ ಮಾಡಿದ ವ್ಯಕ್ತಿಯೊಬ್ಬ ಆತನ ಪರವಾಗಿ ತೀರ್ಪು ನೀಡಿ, ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ನನಗೆ ಲಂಚದ ನೀಡುವುದಾಗಿ ಹೇಳಿದ್ದ ಎಂದು ಅವರು ತಿಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಈ ಮಾತು ಕೇಳಿ ಕೋರ್ಟ್ ಹಾಲ್ ನಲ್ಲಿದ್ದ ವಕೀಲರು ಆಶ್ಚರ್ಯಗೊಂಡರು.

ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿ ರವಿ ಮಳಮಠ್ ಕೂಡ ಇದ್ದಾರೆ.

ಕರ್ನಾಟಕ ಹೈಕೋರ್ಟ್ ನಲ್ಲಿ ಹಿರಿಯ ವಕೀಲ ಪದ್ಮನಾಭ ಮಹಳೆ ಭೂ ವಿವಾದದ ಕೇಸ್ ಬಗ್ಗೆ ತಮ್ಮ ವಾದವನ್ನು ಆರಂಭಿಸಲು ಮುಂದಾದಾಗ ಅದನ್ನು ತಡೆದ ಮುಖ್ಯ ನ್ಯಾಯಮೂರ್ತಿ ಮುಖರ್ಜಿ,  ವ್ಯಕ್ತಿ ಬಂದು ತಮಗೆ ನೀಡಿದ್ದ ವಿಸಿಟಿಂಗ್ ಕಾರ್ಡ್ ತರುವಂತೆ ತಮ್ಮ ಸಹಾಯಕರಿಗೆ ಸೂಚಿಸಿದರು, ನಂತರ ಆ ವಿಸಿಟಿಂಗ್ ಕಾರ್ಡ್ ಅನ್ನು ಪದ್ಮನಾಭ ಮಹಳೆ ಅವರಿಗೆ ನೀಡಿದರು.

ಪ್ಯಾಲೇಸ್ ರಸ್ತೆಯಲ್ಲಿರುವ ಮನೆಗೆ ಬಂದ ವ್ಯಕ್ತಿಯೊಬ್ಬ ಬೆಂಗಾಲಿಯಲ್ಲಿ ಮಾತನಾಡುತ್ತಿದ್ದ. ನಂತರ ಕೇಸ್ ನಂ34 ರ ತೀರ್ಪನ್ನು ತಮ್ಮ ಪರವಾಗಿ ನೀಡುವಂತೆ ತನಗೆ ಲಂಚದ ಆಮೀಷ ನೀಡಿದ ಎಂದು ಹೇಳಿದರು.

ವಿಸಿಟಿಂಗ್ ಕಾರ್ಡ್ ನೋಡಿದ ಮಹಳೆ ಕೇಸ್ ಗೂ ವಿಸಿಟಿಂಗ್ ಕಾರ್ಡ್ ನೀಡಿರುವ ಈ ವ್ಯಕ್ತಿಗೂ ಸಂಬಂಧವೇ ಇಲ್ಲ ಎಂದು ಹೇಳಿದರು. ನಂತರ ವಿಸಿಟಿಂಗ್ ಕಾರ್ಡ್ ನ ಫೋಟೋಕಾಪಿ ತೆಗೆದುಕೊಳ್ಳುವಂತೆ ಮುಖರ್ಜಿ, ಮಹಳೆ ಅವರಿಗೆ ಸೂಚಿಸಿದರು.

ನನ್ನ ಮನೆಗೆ ಯಾವುದೇ ವ್ಯಕ್ತಿ ಬರಲು ಮನೆಯ ಬಾಗಿಲು ತೆರೆದಿರುತ್ತದೆ. ಆದರೆ ಈ ರೀತಿಯ ವಿಷಯಕ್ಕಲ್ಲ ಎಂದು ಹೇಳಿದರು.

ಕಳೆದ ತಿಂಗಳು ಜೂನ್ 6 ರಂದು ತಮಗೆ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದರು. ಅದಾದ ಒಂದೇ ತಿಂಗಳಿಗೆ ಮತ್ತೊಬ್ಬ ನ್ಯಾಯಮೂರ್ತಿಗಳು ಲಂಚದ ವಿಷಯ ಬಹಿರಂಗ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com