ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ: ಸಿದ್ದರಾಮಯ್ಯ ಜಾರ್ಜ್ ರನ್ನು ರಕ್ಷಿಸುತ್ತಿದ್ದಾರೆ- ಜನಾರ್ದನ ಪೂಜಾರಿ
ಮಂಗಳೂರು: ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನ ಹಿರಿಯ ಮುಖಂಡ ಮಾಜಿ ಸಚಿವ ಜನಾರ್ದನ ಪೂಜಾರಿ ವಾಗ್ದಾಳಿ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್ ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜನಾರ್ದನ ಪೂಜಾರಿ, ಆತ್ಮಹತ್ಯೆ ಮಾಡಿಕೊಂಡ ಎಂ.ಕೆ ಗಣಪತಿ ದಕ್ಷ ಅಧಿಕಾರಿ, ಕೊಡಗಿನ ಸುಪುತ್ರರಾಗಿದ್ದು ಸಿಎಂ ಸಿದ್ದರಾಮಯ್ಯ ಪ್ರಕರಣದ ಸತ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಕೆ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸಚಿವ ಕೆಜೆ ಜಾರ್ಜ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ಕಿರುಕುಳ ನೀಡಿದ್ದ ಆರೋಪ ಮಾಡಿದ್ದಾರೆ. ಆದರೆ ಆರೋಪಿಗಳ ವಿರುದ್ಧ ಈ ವರೆಗೂ ಎಫ್ ಐಆರ್ ದಾಖಲಾಗಿಲ್ಲ ಏಕೆ? ಎಫ್ಐಆರ್ ದಾಖಲಿಸದಂತೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿರುವವರು ಯಾರು ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಸಾಯುವವರು ಸುಳ್ಳು ಹೇಳುವುದಿಲ್ಲ. ಸಾವಿನ ಮುನ್ನ ನೀಡಿರುವ ಹೇಳಿಕೆಯನ್ನು ಮಾನ್ಯ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಆದರೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕೆಜೆ ಜಾರ್ಜ್ ಅವರನ್ನು ರಕ್ಷಿಸಲು ಯತ್ನಿಸುತ್ತಿದೆ, ಸಿದ್ದರಾಮಯ್ಯ ಅವರ ನಡೆಯಿಂದ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಜನಾರ್ದನ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ