ಕೆಂಪಯ್ಯ ಸೂಪರ್ ಹೋಂ ಮಿನಿಸ್ಟರ್: ಮತ್ತೆ ವಿವಾದದ ಕೇಂದ್ರ ಬಿಂದುವಾದ ನಿವೃತ್ತ ಪೊಲೀಸ್ ಅಧಿಕಾರಿ

ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಹಲವು ಘಟನೆಗಳಿಗೆ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರೇ ಕಾರಣ ಎಂದು ಹೇಳಲಾಗುತ್ತಿದೆ....
ಕೆಂಪಯ್ಯ
ಕೆಂಪಯ್ಯ
Updated on

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಹಲವು ದುರಂತಗಳಿಗೆ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರೇ ಕಾರಣ ಎಂದು ಹೇಳಲಾಗುತ್ತಿದೆ.

ಗೃಹ ಸಚಿವರ ಸಲಹೆಗಾರರಾಗಿ ಕೆಂಪಯ್ಯ ಅವರನ್ನು ನೇಮಕ ಮಾಡಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಟೀಕೆ ಮಾಡಿವೆ. ಕೆಂಪಯ್ಯ ಅವರನ್ನು ಸೂಪರ್ ಹೋಂ ಮಿನಿಸ್ಟರ್ ಎಂದು ವಿಪಕ್ಷಗಳು ವ್ಯಂಗ್ಯವಾಡಿವೆ.

ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ಗೃಹ ಸಚಿವರ ಗಮನಕ್ಕೆ ಬರುತ್ತಿಲ್ಲವೆಂದು ಪರಮೇಶ್ವರ್ ಅವರೇ ಅಸಹಾಯಕತೆ ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ವರ್ಗಾವಣೆ ಮುಖ್ಯಮಂತ್ರಿ ಇಲ್ಲವೇ ಕೆಂಪಯ್ಯ ಅವರ ಸೂಚನೆಯಂತೆ ಆಗುತ್ತಿವೆ ಎಂಬ ಅನುಮಾನ ಸಹಜವಾಗಿಯೇ ಮೂಡಿದೆ.

ಈ ಹಿಂದೆ ಕೆ.ಜೆ.ಜಾರ್ಜ್ ಗೃಹ ಸಚಿವರಾಗಿದ್ದಾಗ ಇಡೀ ಇಲಾಖೆಯನ್ನು ಕೆಂಪಯ್ಯ ಹೈಜಾಕ್ ಮಾಡಿಕೊಂಡಿದ್ದರು. ವರ್ಗಾವಣೆ ಸೇರಿದಂತೆ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂಬ ಆರೋಪಗಳಿದ್ದವು. ಕೆಂಪಯ್ಯ ಬಳಿಗೆ ಹೋದರೆ ಮಾತ್ರ ಬಯಸಿದ ಸ್ಥಳಕ್ಕೆ ವರ್ಗಾವಣೆ ಆಗುತ್ತದೆ ಎಂಬಷ್ಟರ ಮಟ್ಟಿಗೆ ಖಾತರಿ ಮಾತುಗಳು ವಿಧಾನಸೌಧದಲ್ಲಿ ಕೇಳಿ ಬರುತ್ತಿದ್ದವು. ಇಲಾಖೆಯಲ್ಲಿ ಆಯಕಟ್ಟಿನ ಜಾಗ ಪಡೆದವರು ಕೆಂಪಯ್ಯ ಪರ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದವರು ವಿರೋಧ ಎಂಬಂತೆ ಎರಡು ಗುಂಪುಗಳು ಸೃಷ್ಟಿಯಾಗಿ ಪೊಲೀಸ್ ಇಲಾಖೆ ಒಡೆದ ಮನೆಯಂತಾಗಿತ್ತು. ಹೀಗಾಗಿ ಇಲಾಖೆಯಲ್ಲಿ ಒಗ್ಗಟ್ಟು, ಹೊಂದಾಣಿಕೆ ಕೊರತೆ ಉಂಟಾಗಿತ್ತು ಎನ್ನಲಾಗಿದೆ.

ಆದರೆ, ಪರಮೇಶ್ವರ್ ಅವರು ಗೃಹ ಸಚಿವರಾದ ಬಳಿಕ ಕೆಂಪಯ್ಯ ಸಲಹೆಗಾರ ಹುದ್ದೆಯಿಂದ ನಿರ್ಗಮಿಸುತ್ತಾರೆ ಎಂಬ ಸುದ್ದಿಗಳಿದ್ದವು. ಆದರೆ ಅವರು ಅದೇ ಹುದ್ದೆಯಲ್ಲಿ ಮುಂದುವರಿಯುವ ಮೂಲಕ ಅಚ್ಚರಿ ಮೂಡಿಸಿದರು. ಸಿಎಂಗೆ ಆಪ್ತರಾದ ಕಾರಣ ಪರಮೇಶ್ವರ್ ಅವರು ಕೆಂಪಯ್ಯರನ್ನು ಬೇಡ ಅನ್ನುವಂತಿರಲಿಲ್ಲ. ಹಾಗಾಗಿ ಕೆಂಪಯ್ಯ ಸಲಹೆಗಾರ ಹುದ್ದೆ ಅಬಾಧಿತವಾಗಿದೆ. ಆದರೂ ಪೊಲೀಸ್ ಇಲಾಖೆಯ ಒಳ-ಹೊರಗಿನ ಮರ್ಮ ಬಲ್ಲ ಕೆಂಪಯ್ಯ ಅವರು ಇಲಾಖೆಯಲ್ಲಿನ ಅವ್ಯವಸ್ಥೆ ಅಥವಾ ನ್ಯೂನತೆಗಳನ್ನು ಸರಿಪಡಿಸಲಾಗುತ್ತಿಲ್ಲ ಏಕೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಉಂಟಾಗುತ್ತಿವೆ.

ತಾವು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಇಲಾಖೆಯಲ್ಲಿ ಕೆಂಪಯ್ಯ ಅವರ ಹಸ್ತಕ್ಷೇಪ ಇದೆ. ನೆಪಮಾತ್ರಕ್ಕೆ ನನ್ನನ್ನು ಸಚಿವನೆಂದು ಪರಿಗಣಿಸಲಾಗಿದೆ. ಇಲಾಖೆಯ ವರ್ಗಾವಣೆ, ಬಡ್ತಿ ಎಲ್ಲಾ ವಿಷಯಗಳಲ್ಲೂ ಕೆಂಪಯ್ಯ ಮತ್ತು ಮುಖ್ಯಮಂತ್ರಿ ಅವರೇ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.ಇಲಾಖೆಯ ಮೇಲೆ ತಮಗೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಹಲವಾರು ಬಾರಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೆಂಪಯ್ಯ ಅವರನ್ನು ಗೃಹ ಸಚಿವರ ಸಲಹೆಗಾರ ಹುದ್ದೆಯಿಂದ ಬಿಡುಗಡೆ ಮಾಡಿ  ಎಂದು ಹೈಕಮಾಂಡ್ಗೆ ಪರಮೇಶ್ವರ್ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ.

ಡಿವೈಎಸ್ ಪಿ ಅನುಪಮಾ ಶೆಣೈ ರಾಜೀನಾಮೆ, ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಈ ಎಲ್ಲಾ ದುರಂತಗಳು ನಡೆದ ನಂತರ ಪರಮೇಶ್ವರ್ ಅವರಿಗೆ ಕೆಂಪಯ್ಯ ಅವರ ಅವಶ್ಯಕತೆ ಇದೆಯೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಕೆಂಪಯ್ಯ ಮತ್ತು ಇಂದಿನ ಡಿಜಿ ಓಂ ಪ್ರಕಾಶ್ ಇಬ್ಬರು ಬ್ಯಾಚ್ ಮೇಟ್ ಗಳಾಗಿದ್ದವರು. ಕೆಂಪ್ಪಯ್ಯ ಅವರ ಜೊತೆ ಕೆಲಸ ಮಾಡಿದ ಹಲವು ಸಹೋದ್ಯೋಗಿಗಳು ಅವರನ್ನು ದಕ್ಷ ಅಧಿಕಾರಿ ಎಂದು ಹೇಳುತ್ತಾರೆ.
ಕಾಡುಗಳ್ಳ ವೀರಪ್ಪನ್ ನನ್ನ ಹಿಡಿಯಲು ಕೆಂಪಯ್ಯ ವಿಶೇಷ ತನಿಖಾ ದಳದ ನೇತೃತ್ವ ವಹಿಸಿದ್ದರು. ಈ ಸಂಬಂಧ ಕನ್ನಡದಲ್ಲೂ ಸಿನಿಮಾ ಕೂಡ ತೆರೆ ಕಂಡಿತ್ತು.

ಕೆಂಪಯ್ಯ ಅವರ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದ್ದರೂ ಅವರ ವಿವಾದಗಳಿಂದ ಹೊರತಾಗಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಅವರು ನೌಕರಿ ಗಿಟ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕೆಂಪಯ್ಯ ಅವರ ಮನೆ ಮನೇಲೆ ದಾಳಿ ನಡೆಸಿದ್ದರು.

ಪೊಲೀಸ್ ಅದಿಕಾರಿಗಳ ವರ್ಗಾವಣೆ ಹಾಗೂ ಪೋಸ್ಟಿಂಗ್ ವಿಷಯದಲ್ಲಿ ಕೆಂಪಯ್ಯ ನೇರ ಹಸ್ತಕ್ಷೇಪವಿದ್ದು, ಜಾತಿ ತಾರತಮ್ಯ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com