ಪೊಲೀಸ್ ಕಾನ್ಸ್ಟೇಬಲ್ ಸಮಯ ಪ್ರಜ್ಞೆಯಿಂದ ಆತ್ಮಹತ್ಯೆಯಿಂದ ಪಾರಾದ ಯುವಕ

ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ 20 ವರ್ಷದ ವಿದ್ಯಾರ್ಥಿಯೊಬ್ಬ ಪೊಲೀಸ್ ಕಾನ್ಸ್ಟೇಬಲ್ ವೊಬ್ಬರ ಸಮಯ...
ಪೊಲೀಸ್ ಕಾನ್ಸ್ಟೇಬಲ್ ಯಶವಂತ್
ಪೊಲೀಸ್ ಕಾನ್ಸ್ಟೇಬಲ್ ಯಶವಂತ್
ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ 20 ವರ್ಷದ ವಿದ್ಯಾರ್ಥಿಯೊಬ್ಬ ಪೊಲೀಸ್ ಕಾನ್ಸ್ಟೇಬಲ್ ವೊಬ್ಬರ ಸಮಯ ಪ್ರಜ್ಞೆಯಿಂದ ಬದುಕುಳಿದ ಘಟನೆ ನಗರದಲ್ಲಿ ನಿನ್ನೆ ( ಸೋಮವಾರ) ನಡೆದಿದೆ.
ಶರಣ್(ಹೆಸರು ಬದಲಿಸಲಾಗಿದೆ) ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಜಾಲಹಳ್ಳಿ ಸಮೀಪ ರೈಲು ಬರುವ ಹೊತ್ತಿಗೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಆ ಹೊತ್ತಿಗೆ ಅಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್, ರೈಲನ್ನು ತಡೆದು ಯುವಕನನ್ನ ಸಾವಿನಿಂದ ಪಾರುಮಾಡಿದ್ದಾರೆ. 
ನಿನ್ನೆ ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಪೊಲೀಸ್ ಕಾನ್ಸ್ಟೇಬಲ್ ಯಶವಂತ್ ಹೊಯ್ಸಳ ಇಲಾಖೆಗೆ ಸೇರಿದ್ದ ಹೈಟೆಕ್ ಎರ್ಟಿಗಾಸ್ ನಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಜಾಲಹಳ್ಳಿಯ ಹೆಚ್ ಎಂಟಿ ಶಾಲೆಯ ಎದುರು ಟಾಟಾ ಅಕ್ವಿಲಾ ಹೈಟ್ಸ್ ಪಕ್ಕ ರೈಲ್ವೆ ಸೇತುವೆ ಬಳಿ ಶರಣ್ ನಿಂತಿರುವುದು ಕಂಡಿತು. ರೈಲ್ವೆ ಹಳಿಯಿಂದ ಸ್ವಲ್ಪ ದೂರದಲ್ಲಿದ್ದ ಯಶವಂತ್ ತಮ್ಮಲ್ಲಿದ್ದ ಮೆಗಾಫೋನ್ ನಲ್ಲಿ ರೈಲು ಬರುತ್ತಿದೆ, ಆಚೆ ಹೋಗು ಎಂದು ಹೇಳುತ್ತಲೇ ಇದ್ದರು. ಆದರೆ ಶರಣ್ ಕೇಳಲೇ ಇಲ್ಲ. ಆಗ ಯಶವಂತ್ ಸೈರನ್ ಹಾಕಿ ರೈಲ್ವೆ ಸ್ಟೇಷನ್ ನ ಲೊಕೊ ಪೈಲಟ್ ಗಮನಕ್ಕೆ ತಂದರು.
ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದ ಶರಣ್ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ. ಆಗ ಯಶವಂತ್ ಸೈರನ್ ಹಾಕುತ್ತಾ ಎಂಜಿನ್ ಬದಿಗೆ ಓಡಿದರು. ಮತ್ತೆ ತಮ್ಮಲ್ಲಿದ್ದ ಮೆಗಾಫೋನ್ ನಿಂದ ಲೊಕೊ ಪೈಲಟ್ ಗೆ ಕರೆ ಮಾಡಿದರು.ಲೊಕೊ ಪೈಲಟ್ ಸೇತುವೆ ಸಮೀಪ ರೈಲನ್ನು ನಿಧಾನ ಮಾಡಿದರು. ಶಿವಮೊಗ್ಗ-ಬೆಂಗಳೂರು ಎಕ್ಸ್ ಪ್ರೆಸ್ ರೈಲು ವಿದ್ಯಾರ್ಥಿಯಿಂದ ಸ್ವಲ್ಪ ದೂರದಲ್ಲಿ ನಿಂತಿತು. ಯಶವಂತ್ ರೈಲಿನಿಂದಿಳಿದು ಶರಣ್ ನನ್ನು ಸಮಾಧಾನ ಮಾಡಿದರು. ಶರಣ್ ನ ಹಣೆಗೆ ಸ್ವಲ್ಪ ಪೆಟ್ಟಾಗಿದ್ದರಿಂದ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. 
ಶರಣ್ ವಿದ್ಯಾರಣ್ಯಪುರದ ಚಾಮುಂಡಿ ಲೇ ಔಟ್ ನ ನಿವಾಸಿಯಾಗಿದ್ದಾನೆ.ಹೆಬ್ಬಾಳ ಪೊಲೀಸ್ ಠಾಣೆಗೆ ಸೇರಿರುವ ಕಾನ್ಸ್ಟೇಬಲ್ ಯಶವಂತ್ ತಮ್ಮ ಸಮಯ ಪ್ರಜ್ಞೆ ಮತ್ತು ಸಕಾಲಿಕ ಮಧ್ಯಪ್ರವೇಶದಿಂದ ಅಲ್ಲಿದ್ದವರ ಮತ್ತು ರೈಲು ಪ್ರಯಾಣಿಕರ ಪ್ರಶಂಸೆಗೆ ಪಾತ್ರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com