ಖಾಸಗಿ ವಾಹನಗಳಲ್ಲಿ ಧೂಮಪಾನ ಸೇವನೆ; ಕಾನೂನು ಕ್ರಮಕ್ಕೆ ಅಡಚಣೆ

ಸಿಟಿಯಲ್ಲಿ ವಾಹನ ಚಲಾಯಿಸುವಾಗ ಸಿಕ್ಕಾಪಟ್ಟೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕಾಯುವುದೆಂದರೆ ಅನೇಕರಿಗೆ ಅಸಹ್ಯಪಡುವಂತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಟಿಯಲ್ಲಿ ವಾಹನ ಚಲಾಯಿಸುವಾಗ ಸಿಕ್ಕಾಪಟ್ಟೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕಾಯುವುದೆಂದರೆ ಅನೇಕರಿಗೆ ಅಸಹ್ಯಪಡುವಂತೆ ಆದರೂ ಕೂಡ ಕೆಲವರಿಗೆ ಇದು ಸಿಗರೇಟು ಎಳೆಯಲು ಒಂದು ಛಾನ್ಸು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮ ಖಾಸಗಿ ವಾಹನಗಳಲ್ಲಿ ಸೇದಬಾರದೇ ಅಥವಾ ಸೇದಬಹುದೇ ಎಂಬ ನಿಯಮ ಅಸ್ಪಷ್ಟವಾಗಿರುವುದು ಧೂಮಪಾನಿಗಳಿಗೆ ವರದಾನವಾದಂತಿದೆ.
ಖಾಸಗಿ ವಾಹನಗಳಲ್ಲಿ ಕುಳಿತುಕೊಂಡಿರುವವರು ಧೂಮಪಾನ ಮಾಡುವುದನ್ನು ನಿಷೇಧಿಸುವ ವಿಷಯ ಪೊಲೀಸರು, ನಾಗರಿಕ ಸಂಸ್ಥೆಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ದುಷ್ಟರಿಣಾಮ ಮುಖ್ಯವಾಗಿ ಮಕ್ಕಳ ಮೇಲಾಗುತ್ತಿದೆ. 
''ತಾಂತ್ರಿಕವಾಗಿ ಕಾರು ಸಾರ್ವಜನಿಕ ಸ್ಥಳವಾಗುವುದಿಲ್ಲ. ಆದರೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತಿರುವಾಗ ಕಾರಿನ ಗ್ಲಾಸ್ ತೆರೆದು ಸಿಗರೇಟು ಸೇವಿಸಿದರೆ ಹೊಗೆ ಪಕ್ಕದಲ್ಲಿ ವಾಹನಗಳಲ್ಲಿ ಕುಳಿತಿರುವವರಿಗೆ ಉಸಿರಾಟಕ್ಕೆ ಸೇರಿ ಹಾನಿಯನ್ನುಂಟುಮಾಡುತ್ತದೆ ಎನ್ನುತ್ತಾರೆ ಹೊಸೂರು ರಸ್ತೆಯಲ್ಲಿ ಸಂಚರಿಸುವ ನಿಖಿಲ್ ಎಸ್.ಜೆ. ವಾಹನ ಚಲಾಯಿಸುವಾಗ ಸಿಗರೇಟು ಸೇದುವುದರಿಂದ ಗಮನ ಬೇರೆಡೆಗೆ ಹೋಗಿ ಅಪಘಾತವಾಗುವ ಸಾಧ್ಯತೆಯೂ ಹೆಚ್ಚು ಎನ್ನುತ್ತಾರೆ ಅವರು.
2012ರಲ್ಲಿ ಇಂಗ್ಲೆಂಡಿನ ಅಬೆರ್ದೀನ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ ಕಾರು ಚಲಾಯಿಸುವಾಗ ಧೂಮಪಾನ ಮಾಡಿದರೆ ಅಪಾಯ ಹೆಚ್ಚು ಎಂದು ಡಾ.ಸೀನ್ ಸೆಂಪಲ್ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಎದುರು ಧೂಮಪಾನ ಮಾಡಬಾರದೆಂದು ಆಸ್ಟ್ರೇಲಿಯಾ, ಬಹ್ರೈನ್, ಫ್ರಾನ್ಸ್ ಗಳಲ್ಲಿ ನಿಷೇಧ ಹೇರಲಾಗಿದೆ.
ಭಾರತದಲ್ಲಿ ಕೂಡ ವಾಹನ ಚಲಾವಣೆ ಮಾಡುವಾಗ ಧೂಮಪಾನ ಮಾಡಬಾರದೆಂಬ ನಿಯಮ ಜಾರಿಗೆ ತರಬೇಕು ಎನ್ನುತ್ತಾರೆ ತಜ್ಞರು. ಸಾರ್ವಜನಿಕ ಆರೋಗ್ಯ ಸಂಸ್ಥೆಯ ವಕಾಲತ್ತು ಅಧಿಕಾರಿ ಪ್ರಗತಿ ಹೆಬ್ಬಾರ್, ವಾಹನಗಳಲ್ಲಿ ಸಿಗರೇಟು ಸೇದುವುದರಿಂದ ಅದು ಸುತ್ತಮುತ್ತ ನಿಂತಿರುವವರ ಮೇಲೆ ಪರಿಣಾಮ ಬೀರುವುದಲ್ಲದೆ, ಬೇರೆಯವರಿಗೆ ಪ್ರಚೋದನೆ ಕೊಟ್ಟಂತಾಗುತ್ತದೆ. ಸಿಗರೇಟು ಸೇದಿ ಅಲ್ಲಿ ಉಳಿದಿರುವ ಕಸದಿಂದ ಉಸಿರಾಟ ತೊಂದರೆಯುಂಟಾಗುತ್ತದೆ ಎನ್ನುತ್ತಾರೆ.
ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ(ಕೊಟ್ಪ) 2003ರ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷಿದ್ಧ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಧೂಮಪಾನ ಸೇವಿಸುವುದು ಕಂಡುಬಂದರೆ ಸ್ಥಳದಲ್ಲಿಯೇ 200 ರೂಪಾಯಿ ದಂಡ ವಿಧಿಸಬಹುದಾಗಿದೆ.
ಖಾಸಗಿ ವಾಹನಗಳಲ್ಲಿ ಧೂಮಪಾನ ಸೇವಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಆದರೆ ವಾಹನ ಚಲಾಯಿಸುವಾಗ ಸಿಗರೇಟು ಸೇವಿಸುವವರ ವಿರುದ್ಧ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಳ್ಳಬಹುದು. ಮತ್ತು ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವವರು ಧೂಮಪಾನ ಮಾಡಿದರೆ ಕೂಡ ಕ್ರಮ ಜರುಗಿಸಬಹುದು ಎನ್ನುತ್ತಾರೆ ರಾಜ್ಯ ತಂಬಾಕು ವಿರೋಧಿ ಘಟಕದ ಹಿರಿಯ ಅಧಿಕಾರಿಯೊಬ್ಬರು.
ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯ ಹಾಗೂ ಗ್ರಂಥಿಶಾಸ್ತ್ರಜ್ಞ ಡಾ. ವಿಶಾಲ್ ರಾವ್, ಖಾಸಗಿ ವಾಹನಗಳಲ್ಲಿ ಸಂಚರಿಸುವಾಗ ಧೂಮಪಾನ ಮಾಡಬಾರದೆಂಬ ನಿರ್ಧಾರ ತೆಗೆದುಕೊಳ್ಳುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ. ಯಾಕೆಂದರೆ ಸಿಗರೇಟು ಸೇವನೆಯಿಂದ ಸಹ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತದೆ. ಅಲ್ಲದೆ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಮೇಲೆ ಭಾರೀ ದುಷ್ಪರಿಣಾಮವನ್ನುಂಟುಮಾಡಬಹುದು.
ಕಾರಿನ ಗ್ಲಾಸ್ ತೆರೆದಿದ್ದರೆ ಅದನ್ನು ಸಾರ್ವಜನಿಕ ಸ್ಥಳ ಎಂದು ಮತ್ತು ಗ್ಲಾಸು ಮುಚ್ಚಿದ್ದರೆ ಖಾಸಗಿ ಸ್ಥಳ ಎಂದು ಪರಿಗಣಿಸುತ್ತೇವೆ, ಧೂಮಪಾನ ಮಾಡುತ್ತಾ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ.
ಕಾರಿನಲ್ಲಿ ಪ್ರಯಾಣಿಸುವಾಗ ಧೂಮಪಾನ ಮಾಡಿದರೆ ಅದು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಿದ್ದು ಎಂದು ಪರಿಗಣಿಸಿ ಅಂತಹ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಸಂಚಾರಿ ಜಂಟಿ ಆಯುಕ್ತ ನರೇಂದ್ರ ಹೊಲ್ಕಾರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com