
ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳು ತಮ್ಮ ತಮ್ಮ ಬಿಗಿಪಟ್ಟು ಸಡಿಲಿಸದ ಪರಿಣಾಮ ಸೋಮವಾರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಳ್ಳಲಿದ್ದು, ಇಂದು ರಾತ್ರಿಯಿಂದಲೇ ಪ್ರಯಾಣಿಕರಿಗೆ ಬಿಸಿ ತಟ್ಟುವ ಸಾಧ್ಯತೆ ಇದೆ.
ಶೇ. 35 ರಷ್ಟು ವೇತನ ಹೆಚ್ಚಿಸದಿದ್ದರೇ ಪ್ರತಿಭಟನೆ ನಡೆಸುವುದಾಗಿ ಕಳೆದ 15 ದಿನಗಳ ಹಿಂದೆಯೇ ಕೆಎಸ್ ಆರ್ ಟಿಸಿ ಸಿಬ್ಬಂದಿ ಮತ್ತು ಕೆಲಸಗಾರರ ಒಕ್ಕೂಟ ನೋಟೀಸ್ ನೀಡಿತ್ತು. ಆದರೆ ಸರ್ಕಾರ ಶೇ.10 ರಷ್ಟು ವೇಕತನ ಏರಿಕೆ ಮಾಡಲು ಮುಂದಾಗಿದೆ. ಇದಕ್ಕೊಪ್ಪದ ನೌಕರರು ಶೇ. 35 ರಷ್ಠು ವೇತನ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದೆ.
ಸಂಧಾನದ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿಬಂದಿಲ್ಲ, ನಮ್ಮನ್ನು ಯಾರು ಸಂಪರ್ಕಿಸಿಲ್ಲ, ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಲಿದೆ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
ವೇತನ ಪರಿಷ್ಕರಣೆ ಶೇ.10ಕ್ಕಿಂತ ಹೆಚ್ಚು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದಕ್ಕೆ ಪ್ರತಿಯಾಗಿ ರಸ್ತೆ ಸಾರಿಗೆ ನೌಕರರ ಸಂಘಟನೆಗಳು ಮುಷ್ಕರದ ಮೂಲಕವೇ ನಮ್ಮ ಬೇಡಿಕೆ ಈಡೇರಿಸಿಕೊಳ್ಳುತ್ತೇವೆ ಎಂದು ಹಟ ಹಿಡಿದಿವೆ. ಆದ್ದರಿಂದ ಮುಷ್ಕರದ ಬಿಸಿ ತುಸು ಜೋರಾಗಿಯೇ ತಟ್ಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದರೆ ಪ್ರತಿಭಟನೆ ನಡೆಸುವವರ ಮೇಲೆ ಎಸ್ಮಾ ಕಾಯಿದೆ ಜಾರಿಗೊಳಿಸುವುದಾಗಿ ಸರ್ಕಾರ ಎಚ್ಚರಿಸಿದೆ. 2012ರಲ್ಲಿ ಮಾಡಿದ ವೇತನ ಪರಿಷ್ಕರಣೆಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ನಿಗಮಗಳಿಗೆ 750 ಕೋಟಿ ರೂ. ನಷ್ಟವಾಗಿದೆ. ಈಗ ಮತ್ತೆ ಶೇ.10ರಷ್ಟು ಹೆಚ್ಚಳದಿಂದ ಅಂದಾಜು 1,413 ಕೋಟಿ ಹೊರೆ ಆಗಲಿದೆ. ಅಷ್ಟಕ್ಕೂ ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ ಅಧಿಕ ವೇತನ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮತ್ತಷ್ಟು ವೇತನ ಹೆಚ್ಚಳ ಅಸಾಧ್ಯದ ಮಾತು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ ಕಟಾರಿಯಾ ಖಂಡತುಂಡವಾಗಿ ಹೇಳಿದ್ದಾರೆ.ಈ ಮಧ್ಯೆ ಕೆಎಸ್‌ಆರ್‌ಟಿಸಿ ಎಸ್ಸಿ-ಎಸ್‌ಟಿ ನೌಕರರು ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮುಷ್ಕರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
Advertisement