ಬಸ್ ಮುಷ್ಕರ ಮುಂದುವರಿಕೆ: ಪ್ರತಿಭಟನೆ ಕೈಬಿಡದಿದ್ದರೆ ಎಸ್ಮಾ ಜಾರಿ ಸಾಧ್ಯತೆ

ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಪ್ರಯಾಣಿಕರಿಗೆ ಭಾರೀ ...
ಮುಷ್ಕರದಿಂದಾಗಿ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಚಾಲಕ.
ಮುಷ್ಕರದಿಂದಾಗಿ ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಚಾಲಕ.
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಪ್ರಯಾಣಿಕರಿಗೆ ಭಾರೀ ತೊಂದರೆಯುಂಟಾಗಿದೆ. ಇಂದು(ಮಂಗಳವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನಾ ನಿರತ ನೌಕರರ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಹೊಸ ಮಾತುಕತೆ ನಡೆಸಲಿರುವ ಸಾಧ್ಯತೆಯಿದೆ.
ಅಲ್ಲದೆ ಇಂದಿನ ಮಾತುಕತೆ ವಿಫಲವಾದಲ್ಲಿ ಎಸ್ಮಾ ಕಾಯ್ದೆಯನ್ನು ಜಾರಿಗೆ ತರುವ ಬೆದರಿಕೆಯೊಡ್ಡಿದೆ ಸರ್ಕಾರ.ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಇಕೆಆರ್ ಟಿಸಿ ಮತ್ತು ಎಡಬ್ಲ್ಯುಕೆಆರ್ ಟಿಸಿ ನೌಕರರು ನಿನ್ನೆ ಕರೆ ನೀಡಿದ್ದ ಬಂದ್ ನಿಂದಾಗಿ ಹಲವು ಕಡೆಗಳಲ್ಲಿ ಕಲ್ಲು ತೂರಾಟ, ಬಸ್ಸಿಗೆ ಬೆಂಕಿ ಹಚ್ಚಿದ್ದರಿಂದ ಹಾನಿಯುಂಟಾಗಿರುವುದಲ್ಲದೆ ಸುಮಾರು 17 ಕೋಟಿ ರೂಪಾಯಿ ಇಲಾಖೆಗೆ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಸುಮಾರು 150 ಬಸ್ಸುಗಳು ಹಾನಿಗೀಡಾಗಿವೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮುಷ್ಕರ ಕೈಬಿಡಲು ಪರಿಹಾರ ಕಂಡುಕೊಳ್ಳುವ ಸಾಧ್ಯತೆಯಿದೆ.
ನೌಕರರ ವೇತನವನ್ನು ಶೇಕಡಾ 35ರಷ್ಟು ಹೆಚ್ಚಿಸಬೇಕು ಎಂಬುದು ನೌಕರರ ಬೇಡಿಕೆಯಾಗಿದೆ. ಆದರೆ ಸರ್ಕಾರ ಶೇಕಡಾ 10ರಷ್ಟು ವೇತನ ಹೆಚ್ಚಿಸಲು ಸಿದ್ಧವಿದೆ. ಸರ್ಕಾರ ಶೇಕಡಾ 12.5ಕ್ಕೆ ವೇತನ ಹೆಚ್ಚಿಸುವ ಪ್ರಸ್ತಾಪ ಇಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇಂದು ಸಂಜೆ 4 ಗಂಟೆಗೆ ಸಂಪುಟ ಸಭೆ ನಡೆಯಲಿದ್ದು, ಮುಷ್ಕರ ನಿರತ ನೌಕರರ ಮನವೊಲಿಸಿ ಅವರು ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಮನವೊಲಿಸಲಿದೆ ಸರ್ಕಾರ.
ಎಸ್ಮಾ ಕಾಯ್ದೆ ಜಾರಿಗೆ ತಂದರೆ, ನೌಕರರು ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದರೆ ಅವರ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಲು ಅವಕಾಶವಿದೆ. ನೌಕರರು ಬಂಧನಕ್ಕೊಳಗಾದರೆ ಒಂದು ವರ್ಷದವರೆಗೆ ಜೈಲು ಮತ್ತು 5 ಸಾವಿರ ರೂಪಾಯಿ ದಂಡ ಅಥವಾ ಎರಡೂ ಶಿಕ್ಷೆ ಅನುಭವಿಸಬೇಕಾಗಬಹುದು.
ರಾಜ್ಯದ 1.25 ಲಕ್ಷ ಮುಷ್ಕರನಿರತ ಸಾರಿಗೆ ನೌಕರರ ಬೇಡಿಕೆಗಳನ್ನು ಮುಕ್ತವಾಗಿ ಆಲಿಸಲು ಸಿದ್ಧರಿರುವುದಾಗಿ ಸಿದ್ದರಾಮಯ್ಯ ಮತ್ತು ರಾಮಲಿಂಗಾ ರೆಡ್ಡಿ ಸೂಚನೆ ನಿನ್ನೆ ಮಧ್ಯಾಹ್ನದ ವೇಳೆಗೆ ನೀಡಿದ್ದರು.ಆದರೆ ನಿನ್ನೆ ಸಾಯಂಕಾಲ ಹೇಳಿಕೆ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮೊದಲು ಮುಷ್ಕರ ಬಿಡಿ, ನಂತರ ಮಾತುಕತೆಗೆ ಬನ್ನಿ ಎಂದು ಹೇಳಿದರು.
'' ಸರ್ಕಾರ ನೌಕರರ ವೇತನವನ್ನು ಶೇಕಡಾ 8ರಿಂದ 10ಕ್ಕೆ ಹೆಚ್ಚಿಸಲು ಸಿದ್ಧವಿದೆ. ಅದಕ್ಕಿಂತ ಹೆಚ್ಚು ನೀಡಲು ಸಾಧ್ಯವಿಲ್ಲ. ಈಗಾಗಲೇ ಸಾರಿಗೆ ಇಲಾಖೆಯ ಶೇಕಡಾ 45ರಿಂದ 50ರಷ್ಟು ಆದಾಯ ನೌಕರರ ವೇತನಕ್ಕೆ ಹೋಗುತ್ತದೆ. ಶೇಕಡಾ 12.5ರಷ್ಟು ಹೆಚ್ಚಿಸಿದರೆ ರಾಜ್ಯದ ಖಜಾನೆಗೆ ಮತ್ತಷ್ಟು ನಷ್ಟವುಂಟಾಗುತ್ತದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಇಂದು ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ನಾಳೆ ಮುಷ್ಕರ ಮುಂದುವರಿಯುತ್ತದೆಯೇ, ಇಲ್ಲವೇ ಎಂಬುದು ತೀರ್ಮಾನವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com