ರಾಜ್ಯಸಭಾ ಚುನಾವಣೆ: ಡಿಕೆಶಿ, ಎಚ್.ಡಿ.ರೇವಣ್ಣ ಮಧ್ಯೆ ವಾಗ್ವಾದ

ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ಮತದಾನ ವಿಧಾನಸೌಧದ ಮತಕೇಂದ್ರದಲ್ಲಿ ನಡೆಯುತ್ತಿದ್ದ...
ಡಿ.ಕೆ.ಶಿವಕುಮಾರ್-ಹೆಚ್.ಡಿ.ರೇವಣ್ಣ
ಡಿ.ಕೆ.ಶಿವಕುಮಾರ್-ಹೆಚ್.ಡಿ.ರೇವಣ್ಣ

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ಮತದಾನ ವಿಧಾನಸೌಧದ ಮತಕೇಂದ್ರದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಚುನಾವಣಾಧಿಕಾರಿ ಮೂರ್ತಿ ಅವರೊಂದಿಗೆ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ವಾಗ್ವಾದ ನಡೆಸಿದ ಪ್ರಸಂಗ ನಡೆದಿದೆ.

ಕಾಂಗ್ರೆಸ್‌ ಶಾಸಕ ಜಿ.ರಾಮಕೃಷ್ಣ ತಮ್ಮ ಸಹಾಯಕರೊಂದಿಗೆ ಮತಕೇಂದ್ರಕ್ಕೆ ಬಂದರು. ಈ ವೇಳೆ ಜೆಡಿಎಸ್‌ ಪಕ್ಷದ ವೀಕ್ಷಕರಾಗಿ ಮತಕೇಂದ್ರದಲ್ಲಿ ಕುಳಿತಿದ್ದ ಎಚ್‌.ಡಿ.ರೇವಣ್ಣ ಅವರು ರಾಮಕೃಷ್ಣ ಅವರು ಸಹಾಯಕರೊಂದಿಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ರಾಮಕೃಷ್ಣ ಅವರು ಅನಾರೋಗ್ಯದ ಕಾರಣದಿಂದ ಸಹಾಯಕರೊಂದಿಗೆ ಬಂದಿದ್ದಾರೆ ಎಂದು ಚುನಾವಣಾಧಿಕಾರಿಗಳು ಹೇಳಿದರೂ ಸಮಾಧಾನಗೊಳ್ಳದ ರೇವಣ್ಣ, ‘ರಾಮಕೃಷ್ಣ ಅವರಿಗೆ ಅನಾರೋಗ್ಯವೇನಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ. ಅವರು ಮತದಾನ ಮಾಡಲು ಸಹಾಯಕರ ಅಗತ್ಯ ಇಲ್ಲ’ಎಂದರು.

ಈ ವೇಳೆ ಚುನಾವಣಾಧಿಕಾರಿ ಮೂರ್ತಿ ರೇವಣ್ಣ ಅವರಿಗೆ ಸಮಾಧಾನ ಹೇಳಲು ಮುಂದಾದರು. ಆದರೆ ರೇವಣ್ಣ ಸಮಾಧಾನಕ್ಕೊಳಗಾಗಲಿಲ್ಲ, ಮತ್ತಷ್ಟು ಕುಪಿತರಾದರು. ಮತಕೇಂದ್ರದಲ್ಲಿ ಉಂಟಾದ ಗದ್ದಲದಿಂದ ಅಲ್ಲಿಗೆ ಬಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಜತೆಗೂ ರೇವಣ್ಣ ವಾಗ್ವಾದ ನಡೆಸಿದರು.

ಈ ರೀತಿ ಚುನಾವಣೆ ನಡೆಸುವುದಾದರೆ ನಾನು ಹೊರಹೋಗುತ್ತೇನೆ’ ಎಂದು ರೇವಣ್ಣ ಹೇಳಿದರು. ಆಗ ಸಚಿವ ಡಿ.ಕೆ.ಶಿವಕುಮಾರ್‌, ಹೊರಹೋಗುವುದಾದರೆ ಹೋಗಿ ಎಂದರು. ಈ ವೇಳೆ ಇಬ್ಬರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳ ಮತದಾನ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿಯ ಕೊಠಡಿ ಸಂಖ್ಯೆ 106ರಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com