
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಕಪಿಲ್ ಮೋಹನ್‌ಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಪ್ರಕರಣ ಸಂಬಂಧ ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆಗೆ ಆಗಮಿಸಿದ್ದ ಅವರು, ಹಿರಿಯ ಪೊಲೀಸ್ ಅಧಿಕಾರಿಗಳ ಕೊಠಡಿ ಮುಂದೆ ಗಾಜಿನ ಪುಡಿ ಸುರಿದಿರುವುದು ಕೂತೂಹಲಕ್ಕೆ ಕಾರಣವಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಕಪಿಲ್ ಮೋಹನ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಸಮನ್ಸ್ ಅವಧಿ ಮುಗಿದ ನಂತರ ಸೋಮವಾರ ಅವರು ಹಾಜರಾಗಿದ್ದು, ಈ ವೇಳೆ ಪೊಲೀಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಎಸ್‌ಪಿ ಅಬ್ದುಲ್ ಅಹ್ಮದ್ ಅವರು ತಮ್ಮ ಕಚೇರಿಯಲ್ಲಿ ಇರಲಿಲ್ಲ.
ಇದರಿಂದ ಅಸಮಾಧಾನಗೊಂಡ ಕಪಿಲ್ ಮೋಹನ್ ಅವರು ಇಬ್ಬರು ಅಧಿಕಾರಿಗಳ ಕಚೇರಿ ಮುಂದೆ ಗಾಜಿನ ಪುಡಿ ಹಾಕಿ ಹೋಗಿದ್ದಾರೆ. ಆದರೆ, ಈ ಗಾಜಿನ ಪುಡಿ ಯಾಕಾಗಿ ತಂದಿದ್ದರು? ಮೊದಲೇ ಸಿದ್ಧಪಡಿಸಿಟ್ಟುಕೊಂಡಿದ್ದರೇ? ಯಾವ ಕಾರಣಕ್ಕಾಗಿ ಅದನ್ನು ಕಚೇರಿ ಮುಂದೆ ಸುರಿದಿದ್ದಾರೆ ಎಂಬುದು ಗೊತ್ತಾಗಿಲ್ಲ. ಹೀಗಾಗಿ ಕಪಿಲ್ ಮೋಹನ್ ಅವರು ಮಾಟ-ಮಂತ್ರ ಮಾಡಿಸಿಕೊಂಡು ಬಂದು ಈ ಕೆಲಸ ಮಾಡಿರಬಹುದು ಎಂಬ ಮಾತುಗಳು ಲೋಕಾಯುಕ್ತ ಕಚೇರಿಯಲ್ಲಿ ಕೇಳಿ ಬಂದಿವೆ.
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲವಾದರೂ, ಪೊಲೀಸರು ಕಚೇರಿಯಲ್ಲಿನ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪಡೆದು ತನಿಖೆ ಕೈಗೊಂಡಿದ್ದಾರೆ. ಇದಲ್ಲದೆ, ತುರ್ತು ಸಭೆ ನಡೆಸಿದ ಅಧಿಕಾರಿಗಳು, ತನಿಖೆ ನಡೆಸಲು ತಂಡ ರಚನೆ ಮಾಡಿದ್ದಾರೆ. ಕಚೇರಿಯಲ್ಲಿರುವ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲಿಸಿದ್ದು, ಐಎಎಸ್ ಅಧಿಕಾರಿಯ ಎಲ್ಲಾ ಚಲವಲನಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ನಡೆಸಿ ಲೋಕಾಯುಕ್ತ ಎಡಿಜಿಪಿ ಮತ್ತು ರಿಜಿಸ್ಟ್ರಾರ್ ಅವರಿಗೆ ವರದಿ ಸಲ್ಲಿಸಲಾಗುವುದು.
ಪೊಲೀಸರು ಸಲ್ಲಿಸುವ ವರದಿ ಆಧಾರದ ಮೇಲೆ ಎಡಿಜಿಪಿ ಮತ್ತು ರಿಜಿಸ್ಟ್ರಾರ್ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ, ಕಚೇರಿಯ ಮುಂದೆ ಹಾಕಿದ್ದ ಗಾಜಿನ ಚೂರುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಕಪಿಲ್ ಮೋಹನ್ ಅವರ ಆಪ್ತರೊಬ್ಬರು, ಅವರು ಲೋಕಾಯುಕ್ತ ಕಚೇರಿಗೆ ವಿಚಾರಣೆಗಾಗಿ ಹೋಗಿದ್ದರು, ಆದರೆ ಅಲ್ಲಿ ಯಾವುದೇ ಗಾಜಿನ ಪುಡಿ ಸುರಿದಿಲ್ಲ, ಅವರ ಇಮೇಜ್ ಗೆ ಧಕ್ಕೆ ತರುವ ಸಲುವಾಗಿ ಸುಮ್ಮನೆ ಈ ಗಾಸಿಪ್ ಹರಿಯಬಿಡಲಾಗುತ್ತಿದೆ ಎಂದು ಹೇಳಿದ್ದಾರೆ.
Advertisement