ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಿ: ಹೈಕೋರ್ಟ್ ಸೂಚನೆ

ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಚ್ಚರ ವಹಿಸಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವದನ್ನು ತಡೆಗಟ್ಟಿ ಎಂದು ಹೈಕೋರ್ಟ್ ಸೂಚಿಸಿದೆ. .,.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಎಚ್ಚರ ವಹಿಸಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವದನ್ನು ತಡೆಗಟ್ಟಿ ಎಂದು ಹೈಕೋರ್ಟ್ ಸೂಚಿಸಿದೆ.

ಮೂಡಬಿದಿರೆ ಮೂಲದ ಭುವನಜ್ಯೋತಿ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ. ರವಿಮಳಿಮಠ ಅವರಿದ್ದ ನ್ಯಾಯಪೀಠ ಸೋಮವಾರ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಪಿಯುಸಿ ಗಣಿತ ವಿಷಯಕ್ಕೆ 21 ಕೃಪಾಂಕ ನೀಡಿರುವ ವಿಚಾರದಲ್ಲಿ ಕಾಲ ಮಿಂಚಿ ಹೋಗಿದ್ದು ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ಗೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ. ಹಾಗಾಗಿ ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರು ರ್ಚಚಿಸಿ ಮುಂದಿನ ವರ್ಷಗಳಲ್ಲಿ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ತಿಳಿಸುಂತೆ ಕೋರ್ಟ್ ಸೂಚನೆ ನೀಡಿದೆ.

ಮೌಲ್ಯಮಾಪನ ವೇಳೆ ಉದಾರವಾಗಿ ಕೃಪಾಂಕ ನೀಡಲಾಗಿದೆ. ಕೃಪಾಂಕ ನೀಡುವ ಸಂಬಂಧ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ. ಈಗಾಗಲೇ ಫಲಿತಾಂಶ ಪ್ರಕಟವಾಗಿದ್ದು, ಮುಂದಿನ ವಿದ್ಯಾಭ್ಯಾಸದ ಪ್ರಕ್ರಿಯೆಗಳು ಶುರುವಾಗಿವೆ. ಈ ಸಂದರ್ಭದಲ್ಲಿ ನ್ಯಾಯಪೀಠ ಮಧ್ಯಪ್ರವೇಶ ಮಾಡುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಸರಿಯಲ್ಲ. ಹಾಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು. ಅರ್ಜಿ ವಜಾಗೊಳಿಸಲು ಒಪ್ಪದ ನ್ಯಾಯಪೀಠ ಮುಂದೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ತಿಳಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಪಿಯುಸಿ ಗಣಿತ ವಿಷಯದಲ್ಲಿ ಏಳು ಪ್ರಶ್ನೆಗಳು ತಪ್ಪಾಗಿ ಕೇಳಲಾಗಿದ್ದು, ಈ ಪ್ರಶ್ನೆಗಳಿಗೆ 21 ಕೃಪಾಂಕ ನೀಡುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ರಾಜ್ಯ ಪಠ್ಯಕ್ರಮ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಸಿಗಲಿದೆ. ಈ ಅಂಕವನ್ನು ಪರಿಗಣಿಸಿದರೆ ಕೇಂದ್ರೀಯ ಪಠ್ಯ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ವೃತ್ತಿಪರ ಕೋರ್ಸ್​ಗಳಿಗೆ ನಡೆಯುವ ಕೌನ್ಸಿಲಿಂಗ್​ಗೆ ಪಿಯುಸಿ ಅಂಕಗಳನ್ನು ಪರಿಗಣಿಸದೆ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com