ಸಿಎಂಗೆ ವಾಚ್ ಗಿಫ್ಟ್ ಕೊಟ್ಟಿದ್ದು ನಾನೇ: ಡಾ.ಗಿರೀಶ್ ಚಂದ್ರ ವರ್ಮ

ರಾಜ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ನಿನ್ನೆಯ ಕಲಾಪವಿಡೀ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ...
ಡಾ.ಗಿರೀಶ್ ಚಂದ್ರ ವರ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
ಡಾ.ಗಿರೀಶ್ ಚಂದ್ರ ವರ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ನಿನ್ನೆಯ ಕಲಾಪವಿಡೀ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚು ಗದ್ದಲದಲ್ಲೇ ಕಳೆದುಹೋಗಿತ್ತು. ಈ ಮಧ್ಯೆ ಹೂಬ್ಲಾಟ್ ದುಬಾರಿ ವಾಚು ಗಿಫ್ಟ್ ನೀಡಿದ ದುಬೈ ಮೂಲದ ವೈದ್ಯರು ಮುಖ್ಯಮಂತ್ರಿ ಪರವಾಗಿ ನಿಂತಿದ್ದಾರೆ.

''ಇದೆಲ್ಲ ಸುಮ್ಮನೆ ಕಾರಣವಿಲ್ಲದೆ ಮಾಡುವಂಥ ವಿವಾದ. ನಾನು, ನನ್ನ ಸ್ನೇಹಿತ ಸಿದ್ದರಾಮಯ್ಯನವರಿಗೆ ವಾಚನ್ನು ಉಡುಗೊರೆಯಾಗಿ ಕೊಟ್ಟಿದ್ದು. ಅವರನ್ನು ನಾನು 30 ವರ್ಷಗಳಿಂದ ಬಲ್ಲೆ'' ಎಂದು ಡಾ.ಗಿರೀಶ್ ಚಂದ್ರ ವರ್ಮ ದುಬೈಯಿಂದ ದೂರವಾಣಿ ಮೂಲಕ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ವಾಚನ್ನು ತೆಗೆದುಕೊಳ್ಳುವಂತೆ ಬಲವಂತ ಮಾಡಿದ್ದು ನಾನೇ ಎಂದು ಕೂಡ ಅವರು ಹೇಳಿದ್ದಾರೆ.

ದುಬೈಯಲ್ಲಿ ಹೃದ್ರೋಗ ತಜ್ಞರಾದ 55 ವರ್ಷ ಪ್ರಾಯದ ಗಿರೀಶ್ ಚಂದ್ರ ಅವರಲ್ಲಿ ವಾಚ್ ನ ಬೆಲೆಯ ಬಗ್ಗೆ ಕೇಳಿದಾಗ, '' ನಾನು ದುಬೈ ಮಾರುಕಟ್ಟೆಯ ಬೆಲೆ 75 ಸಾವಿರ ದಿರಮ್ಸ್ (14 ಲಕ್ಷ) ಕೊಟ್ಟು ವಾಚು ಖರೀದಿಸಿದೆ'' ಎಂದರು. ಆದರೆ ಪ್ರತಿಪಕ್ಷಗಳ ಸದಸ್ಯರು ಆರೋಪಿಸುವ ಪ್ರಕಾರ ವಾಚಿನ ಬೆಲೆ 70 ಲಕ್ಷ ರೂಪಾಯಿ.

 ''ನನ್ನಲ್ಲಿ ಹಲವು ದುಬಾರಿ ವಾಚುಗಳ ಸಂಗ್ರಹವಿದ್ದು, ಅವುಗಳಲ್ಲಿ ಒಂದನ್ನು ಸಿದ್ದರಾಮಯ್ಯನವರಿಗೆ ನೀಡಿದೆ. ನಾನು ಕರ್ನಾಟಕದಲ್ಲಿ ಮನೆಯಾಗಲಿ, ಭೂಮಿಯಾಗಲಿ ಅಥವಾ ಉದ್ಯಮದಲ್ಲಾಗಲಿ ತೊಡಗಿಕೊಂಡಿಲ್ಲ. ಕೇವಲ ಸ್ನೇಹಿತ ಎಂಬ ಕಾರಣಕ್ಕೆ ಸಿದ್ದರಾಮಯ್ಯನವರಿಗೆ ವಾಚು ನೀಡಿದೇನೆಯೇ ಹೊರತು ಬೇರೆ ಯಾವ ಉದ್ದೇಶವೂ ಇದರ ಹಿಂದೆ ಇರಲಿಲ್ಲ ಎಂದು ವರ್ಮ ಸ್ಪಷ್ಟಪಡಿಸಿದ್ದಾರೆ.

ವರ್ಮ ಅವರು ಕೇರಳದ ತಿರುವನಂತಪುರದವರು. ಕಳೆದ 10 ವರ್ಷಗಳಿಂದ ದುಬೈಯಲ್ಲಿ ನೆಲೆಸಿದ್ದು, ಅಲ್ಲಿ ಎನ್ ಎಂಸಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ವೈದ್ಯಕೀಯ ಕೋರ್ಸ್ ನ್ನು ದಾವಣಗೆರೆ ಮತ್ತು ಮಂಗಳೂರಿನಲ್ಲಿ ಓದಿರುವುದರಿಂದ ಅಲ್ಪಸ್ವಲ್ಪ ಕನ್ನಡ ಮಾತನಾಡುತ್ತಾರೆ.

''ನಾನು ಆಗಾಗ ಭಾರತಕ್ಕೆ ಭೇಟಿ ನೀಡುತ್ತೇನೆ. ಆಗ ಬೆಂಗಳೂರಿಗೆ ಬಂದಾಗಲೆಲ್ಲಾ ಸಿದ್ದರಾಮಯ್ಯ ಸೇರಿದಂತೆ ಅನೇಕ ಸ್ನೇಹಿತರನ್ನು ಭೇಟಿ ಮಾಡುತ್ತೇನೆ. ಸಿದ್ದರಾಮಯ್ಯನವರನ್ನು ನಾನು ಮೊದಲು ಭೇಟಿ ಮಾಡಿದ್ದು ಮೈಸೂರಿನಲ್ಲಿ 1983ರಲ್ಲಿ ಒಬ್ಬರು ಸ್ನೇಹಿತರ ಮೂಲಕ. ಈ ವಾಚನ್ನು ಮುಖ್ಯಮಂತ್ರಿಗೆ ಉಡುಗೊರೆಯಾಗಿ ಕೊಟ್ಟಿದ್ದು ಕಳೆದ ವರ್ಷ ಜುಲೈಯಲ್ಲಿ ಬೆಂಗಳೂರಿಗೆ ಬಂದಿದ್ದಾಗ'' ಎಂದರು.

ವಾಚು ವಿಷಯ ಕರ್ನಾಟಕದಲ್ಲಿ ಇಷ್ಟು ದೊಡ್ಡ ಮಟ್ಟಿಗೆ ಗಲಾಟೆ, ವಿವಾದ ಸೃಷ್ಟಿಸಿದೆ ಎಂದು ತಿಳಿದು ನನಗೆ ನಿಜಕ್ಕೂ ಬೇಸರವಾಗುತ್ತಿದೆ. ರಾಜಕೀಯ ನಾಯಕರು ಸುಮ್ಮನೆ ವಿವಾದದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ತುಂಬಾ ಒಳ್ಳೆಯ ಮತ್ತು ಸರಳ ವ್ಯಕ್ತಿ. ಅವರು ಜನಗಳಿಂದ ಉಡುಗೊರೆಗಳನ್ನು ಸಾಮಾನ್ಯವಾಗಿ ಸ್ವೀಕರಿಸುವುದಿಲ್ಲ. ನಾನು ಕೂಡ ವಾಚು ಕೊಟ್ಟಾಗ ಮೊದಲು ಸ್ವೀಕರಿಸಲು ಒಪ್ಪಲೇ ಇಲ್ಲ. ನಿಮ್ಮ ಸ್ನೇಹಿತ ವರ್ಮ ಜೀವನದಲ್ಲಿ ಸಾಧನೆ ಮಾಡಿದ್ದಾನೆ ಎಂದು ಸಂತೋಷದಿಂದ ಈ ಉಡುಗೊರೆಯನ್ನು ಸ್ವೀಕರಿಸಿ ಎಂದು ನಾನೇ ಒತ್ತಾಯಪೂರ್ವಕವಾಗಿ ಅವರಿಗೆ ಕೊಟ್ಟೆ'' ಎನ್ನುತ್ತಾರೆ.

ವಾಚನ್ನು ಗಿಫ್ಟ್ ಕೊಟ್ಟಿದ್ದು ಮತ್ತು ಪಡೆದವರು ಕೂಡ ಅದು ಉಡುಗೊರೆ ಸಿಕ್ಕಿರುವ ವಾಚು ಎಂದು ಒಪ್ಪಿಕೊಂಡಿರುವುದರಿಂದ ಈ ವಿವಾದವನ್ನು ಇಲ್ಲಿಗೇ ನಿಲ್ಲಿಸುವುದು ಒಳ್ಳೆಯದು ಎನ್ನುತ್ತಾರೆ ವೈದ್ಯ ಡಾ.ಗಿರೀಶ್ ಚಂದ್ರ ವರ್ಮ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com